More

    ಶ್ರೀಸಾಮಾನ್ಯರಿಗಿರಲಿ ಸೈನಿಕರ ಶೌರ್ಯದ ಪರಿಚಯ- ಎಸ್.ಟಿ.ವೀರೇಶ್ ಹೇಳಿಕೆ

    ದಾವಣಗೆರೆ: ಶ್ರೀಸಾಮಾನ್ಯರಿಗೂ ಸೈನಿಕರ ತ್ಯಾಗ, ಶೌರ್ಯದ ಪರಿಚಯ ಆಗಬೇಕಿದೆ ಎಂದು ಮಾಜಿ ಮೇಯರ್ ಎಸ್.ಟಿ.ವೀರೇಶ್ ಆಶಿಸಿದರು.
    ಎಸ್.ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಸ್ಮಾರಕ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸೈನಿಕರ ಸ್ಮರಣೆಯ ಕಾರ್ಯಕ್ರಮಗಳಲ್ಲಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರೇ ಹೆಚ್ಚು ಭಾಗವಹಿಸುತ್ತಿದ್ದಾರೆ. ಆದರೆ, ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಹೀಗಾಗಿ ಎಲ್ಲ ನಾಗರಿಕರೂ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
    ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ ತಲೆದೋರಿದರೂ ಅದರ ಶತ್ರುತ್ವ ನಿಂತಿಲ್ಲ. ನಾಲ್ಕು ಬಾರಿ ಯುದ್ಧ ಎದುರಿಸಿ ಗೆಲ್ಲಲಾಗದ ಪಾಕಿಸ್ತಾನ, ಭಾರತದ ಮೇಲೆ ಉಗ್ರಗಾಮಿಗಳ ಮೂಲಕ ದಾಳಿ ಮಾಡುತ್ತಲೇ ಬಂದಿದೆ ಎಂದು ಕಿಡಿ ಕಾರಿದರು.
    ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ ಸೈನಿಕರ ಬಗ್ಗೆ ಮಾತನಾಡುವುದೇ ಹೆಮ್ಮೆ. ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಒಗ್ಗಟ್ಟಿನ ಪ್ರದರ್ಶನವಾಯಿತು. ಸೈನಿಕರ ಹಿಂದೆ ನಾವಿದ್ದೇವೆ ಎಂಬುದಾಗಿ ಅಂದಿನ ದೇಶವಾಸಿಗಳು ಸ್ಪಂದಿಸಿದ ರೀತಿ ಗಮನಾರ್ಹ. ಭಾರತರಲ್ಲಿ ಯೋಧರಿಗೆ ಸಿಗುವ ಗೌರವ ಬೇರಾವ ರಾಷ್ಟ್ರದಲ್ಲೂ ಸಿಗದು ಎಂದರು.
    ಸೈನಿಕರು ಮತ್ತು ಅವರ ಕುಟುಂಬದವರಿಗೆ ನ್ಯಾಯೋಚಿತವಾಗಿ ಸೌಲಭ್ಯಗಳು ದೊರೆತಿಲ್ಲ. ಅವರಿಗೆ ಸರ್ಕಾರದಿಂದ ಆಗಬೇಕಾದ ನಿವೇಶನ ಇತರೆ ಸೌಲಭ್ಯಗಳ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು. ನಾವು ಕೂಡ ಅದಕ್ಕೆ ಸ್ಪಂದಿಸಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.
    ಮಾಜಿ ಸೈನಿಕ ಅಶೋಕ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಎಸ್.ಸತ್ಯಪ್ರಕಾಶ್ ಮಾತನಾಡಿದರು.
    ಕರ್ನಲ್ ರವೀಂದ್ರನಾಥ್ ವೃತ್ತದಲ್ಲಿ ಹೊತ್ತಿಸಿದ ಮೇಣದಬತ್ತಿಗಳನ್ನು ಹಿಡಿದ ಜನರು ಅಮರ್ ಜವಾನ್ ಸ್ಮಾರಕದವರೆಗೂ ಆಗಮಿಸಿ, ಅಲ್ಲಿ ಇರಿಸಿದರು. ವೀರ ಜವಾನ್ ಅಮರ್ ರಹೇ, ಭಾರತ್ ಮಾತಾ ಕೀ ಜೈ ಘೋಷಣೆಗಳು ಮೊಳಗಿದವು. ಒಂದು ನಿಮಿಷ ಮೌನಾಚರಣೆ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ಮಂಜಾನಾಯ್ಕ, ಮಹೇಂದ್ರಕರ್, ವಿಜಯ್ ಪುರೋಹಿತ್, ಪ್ರವೀಣ್‌ಕುಮಾರ್, ಮಂಜುನಾಥ್, ಕೃಷ್ಣ್ಣಾನಾಯ್ಕ, ಶರಣಬಸಪ್ಪ, ತಿಪ್ಪೇಸ್ವಾಮಿ, ಸ್ಥಳೀಯರಾದ ದಾಕ್ಷಾಯಿಣಿ, ವಿನೋದಮ್ಮ, ಮಹಾದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts