More

    ಶ್ರೀರಾಮ ಪಟ್ಟಾಭಿಷೇಕ ಸಂಭ್ರಮ

    ಬೀರೂರು: ಪಟ್ಟಣದ ಶ್ರೀರಾಂಪುರ ಬಡಾವಣೆ ಶ್ರೀ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯದಲ್ಲಿ ಗುರುವಾರ ರಾಮನವಮಿ ಅಂಗವಾಗಿ ಸಂಭ್ರಮದಿಂದ ಶ್ರೀರಾಮ ಪಟ್ಟಾಭಿಷೇಕ ನೆರವೇರಿಸಲಾಯಿತು.

    ಬೆಳಗ್ಗೆ ಸಂಪ್ರದಾಯದಂತೆ ಪರಿವಾರ ಸಹಿತ ಪಟ್ಟಾಭಿರಾಮರಿಗೆ ಅಭ್ಯಂಗಸ್ನಾನ, ಪಂಚಾಮೃತ ಅಭಿಷೇಕ, ಶ್ರೀರುದ್ರ, ಪುರುಷಸೂಕ್ತ ಪೂರ್ವಕ ಮಹಾಭಿಷೇಕ, ನದಿಜಲ ಸಂಪ್ರೋಕ್ಷಣ, ಪುಷ್ಪಾಲಂಕಾರ ನೆರವೇರಿಸಲಾಯಿತು. ಚಂದ್ರಮೌಳೀಶ್ವರರಿಗೆ ರುದ್ರಾಭಿಷೇಕ, ಲಕ್ಷ್ಮೀ ನಾರಾಯಣ, ಗಣಪತಿ, ದುರ್ಗೆ, ಸೂರ್ಯನಾರಾಯಣ ದೇವರಿಗೆ ಪಂಚಸೂಕ್ತ ಪೂರ್ವಕ ಅಭಿಷೇಕ, ಅಲಂಕಾರ ಸಲ್ಲಿಸಿದ ಬಳಿಕ ರಾಮತಾರಕ ಹೋಮಕ್ಕೆ ಚಾಲನೆ ನೀಡಲಾಯಿತು. ಅಥರ್ವಶೀರ್ಷ, ಅಧಿದೇವತಾ ಸಹಿತ ನವಗ್ರಹಗಳ ಅರ್ಚನೆ, ಆರಾಧನೆ ಬಳಿಕ ಮೂಲಮಂತ್ರ ಸಹಿತ ಹೋಮಾದಿಗಳು ನಡೆದವು. ಪೂರ್ಣಾಹುತಿ ನಂತರ ಪಟ್ಟಾಭಿರಾಮರ ಸನ್ನಿಧಿಯಲ್ಲಿ ಹೋಮರಕ್ಷಾ ಅರ್ಪಣೆಯ ಬಳಿಕ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ರಾಷ್ಟ್ರಾಶೀರ್ವಾದ ಮತ್ತು ವಸಂತೋತ್ಸವ ಜರುಗಿದವು. ಸಾಯಂಕಾಲ ಶ್ರೀರಾಮರ ಉತ್ಸವಮೂರ್ತಿಯ ಪ್ರಾಕಾರೋತ್ಸವ ನಡೆಯಿತು.
    ಶ್ರೀರಾಮ ನವಮಿಯಂದು ಆರಂಭಗೊಂಡ ಕಾರ್ಯಕ್ರಮಗಳ 9 ದಿವಸಗಳಲ್ಲಿ ಗಣಪತಿ ಪ್ರಾರ್ಥನೆ, ಪುಣ್ಯಾಹ, ನಾಂದಿ, ಕಲಶ ಸ್ಥಾಪನೆ, ನವಗ್ರಹ, ಸೂರ್ಯಋಚ, ರಾಮಾಯಣ ಪಾರಾಯಣ, ಗಿರಿಜಾ ಕಲ್ಯಾಣ ಸೇವೆಗಳು ನಡೆದವು. ಪ್ರತಿದಿನ ಸಾಯಂಕಾಲ ವಿವಿಧ ಕಲಾತಂಡಗಳಿಂದ ಭರತನಾಟ್ಯ, ಭಜನೆ, ಸಂಗೀತ, ಗಮಕ ವಾಚನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
    ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದವರನ್ನು ಪುರಸ್ಕರಿಸಲಾಯಿತು. ಏ.26ರಂದು ಅವಭೃತೋತ್ಸವ, ಸಾಯಂಕಾಲ ಹನುಮಂತೋತ್ಸವದೊಂದಿಗೆ ರಾಮನವಮಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts