More

    ಶ್ರೀರಾಮಮಂದಿರ ದೇಶದ ಅಸ್ಮಿತೆ -ನಾ.ತಿಪ್ಪೇಸ್ವಾಮಿ ಹೇಳಿಕೆ- ಪುಸ್ತಕ ಬಿಡುಗಡೆ ಕಾರ್ಯಕ್ರಮ

    ದಾವಣಗೆರೆ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವುದು ಭವ್ಯ ಶ್ರೀರಾಮ ಮಂದಿರ ಮಾತ್ರವಲ್ಲ. ಅದೊಂದು ರಾಷ್ಟ್ರ ಮಂದಿರ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಹೇಳಿದರು.
    ಸೋಮೇಶ್ವರ ಪ್ರತಿಷ್ಠಾನ ಆಶ್ರಯದಲ್ಲಿ ನಗರದ ನೇತ್ರಾವತಿ ಕನ್ವೆನ್ಷನ್ ಹಾಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ರಮೇಶ್‌ಕುಮಾರ್ ನಾಯಕ್ ಅವರ ‘ಮಂದಿರವಲ್ಲೇ ಕಟ್ಟಿದೆವು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
    ರಾಮಜನ್ಮ ಭೂಮಿಯಲ್ಲೇ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ದೇಶದ ಅಸ್ಮಿತೆಯ ಪ್ರಶ್ನೆಯಾಗಿತ್ತು. ದೇಶದ ಪ್ರತೀಕವಾದ ರಾಮನ ದೇಗುಲದಲ್ಲಿ ರಾಮನ ಜತೆಗೆ ಸೀತಾ, ಲಕ್ಷ್ಮಣ, ಆಂಜನೇಯನ ಮೂರ್ತಿಗಳು ಇರಲಿದ್ದು, ಇದು ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಪಾರಿವಾರಿಕ ಸಂಕೇತ ಎಂದು ತಿಳಿಸಿದರು.
    ಧರ್ಮ ಸ್ಥಾಪನೆಗಾಗಿ ಶ್ರೀರಾಮ ಮತ್ತು ಕೃಷ್ಣರು ದೇಶದಲ್ಲಿ ಅವತಾರವೆತ್ತಿ ಬರುವ ಮೂಲಕ ರಾಕ್ಷಸಿ ಪ್ರವೃತ್ತಿ ನಾಶ ಮಾಡಿ ಒಂದು ಸಂಸ್ಕೃತಿ ನಿರ್ಮಿಸಿದ್ದಾರೆ. ಅದರ ಪ್ರತೀಕವಾಗಿ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಬೇಕು ಎಂಬ ಬಹುದೊಡ್ಡ ಸಂಕಲ್ಪ ಇಂದು ಸಾಕಾರಗೊಂಡಿದ್ದು, ಐತಿಹಾಸಿಕ ಕ್ಷಣಕ್ಕಾಗಿ ಜನತೆ ಕಾತರದಿಂದ ಕಾಯುತ್ತಿದ್ದಾರೆ ಎಂದರು.
    ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ 1928ರಿಂದ ಸುಮಾರು 496 ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆದಿದ್ದು, ಇಷ್ಟು ಅವಧಿಯ ಹೋರಾಟ ಜಗತ್ತಿನ ಎಲ್ಲೂ ನಡೆದಿಲ್ಲ. ಈ ಆಂದೋಲನದಲ್ಲಿ ಲಕ್ಷಾಂತರ ಜನ ತ್ಯಾಗ ಮತ್ತು ಬಲಿದಾನ ಮಾಡಿದ್ದಾರೆ ಎಂದು ಸೋಮೇಶ್ವರದಿಂದ ಅಯೋಧ್ಯೆಯವರೆಗೆ ನಡೆದ ಭವ್ಯ ರಥಯಾತ್ರೆ ಹಾಗೂ ಎರಡು ಹಂತದ ಕರಸೇವೆ ಘಟನೆ ನೆನಪಿಸಿದರು.
    ಸುಪ್ರೀಂಕೋರ್ಟ್‌ನಲ್ಲಿ ರಾಮಮಂದಿರ ಪರ ತೀರ್ಪು ಪ್ರಕಟಗೊಂಡ ನಂತರ ಕೇಂದ್ರ ಸರ್ಕಾರದಿಂದ ಸಂತರ ನೇತೃತ್ವದಲ್ಲಿ ರಚನೆಗೊಂಡ ರಾಮ ಮಂದಿರ ನ್ಯಾಸ ಟ್ರಸ್ಟ್ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುವ ಶ್ರೀರಾಮ ಮಂದಿರ ಒಂದು ರಾಷ್ಟ್ರೀಯ ಸ್ಮಾರಕ ಆಗಬೇಕು. ದೇಶದ ಪ್ರತಿಯೊಬ್ಬರೂ ಇದಕ್ಕಾಗಿ ಕಾಣಿಕೆ ನೀಡಬೇಕು ಎಂಬ ನಿಟ್ಟಿನಲ್ಲಿ ನಿಧಿ ಸಮರ್ಪಣಾ ಅಭಿಯಾನದ ಮೂಲಕ ದೇಣಿಗೆ ಸಂಗ್ರಹಿಸಿದೆ ಎಂದರು.
    ಅಭಿಯಾನದ ಮೂಲಕ ದೇಶದ ಸುಮಾರು 5 ಲಕ್ಷ ಗ್ರಾಮಗಳಿಗೆ ತೆರಳಿ 12 ಕೋಟಿ ಮನೆಗಳನ್ನು ತಲುಪಲಾಗಿದೆ. 70 ಕೋಟಿ ಜನರನ್ನು ಭೇಟಿ ಮಾಡಲಾಗಿದ್ದು, ಮಂದಿರ ನಿರ್ಮಾಣಕ್ಕಾಗಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಹಣ ಬಂದಿದೆ. ಇದೀಗ ಟ್ರಸ್ಟ್‌ನವರು ದೇಣಿಗೆ ಪಡೆಯುವುದನ್ನು ನಿಲ್ಲಿಸಿದ್ದಾರೆ ಎಂದು ತಿಳಿಸಿದರು.
    ಪ್ರಸ್ತುತ ಹಿಂದು ರಾಷ್ಟ್ರ ನಿರ್ಮಾಣ ಆಗುತ್ತಿದ್ದು, ಇದು ಯಾವುದೇ ಜಾತಿಯ ಸಂಕೇತ ಅಲ್ಲ. ಹಿಂದು ಎಂದರೆ ಇಲ್ಲಿನ ಜೀವನ ಪದ್ಧತಿ. ನಮ್ಮ ಕುಟುಂಬ ಪದ್ಧತಿಯೇ ದೇಶದ ಸಂಸ್ಕೃತಿ ಬಿಂಬಿಸುವಂತದ್ದಾಗಿದೆ. ಹಾಗಾಗಿ, ಕುಟುಂಬಗಳು ಬಲಿಷ್ಠವಾಗಬೇಕು. ಆ ಮೂಲಕ ದೇಶದಲ್ಲಿರುವ ಅನಿಷ್ಠ ಪದ್ಧತಿ ತೊಲಗಿಸಿ ಸಾಮರಸ್ಯ ಮೂಡಿಸಬೇಕು ಎಂದು ಹೇಳಿದರು.
    ಪುಸ್ತಕದ ಲೇಖಕ ರಮೇಶ್‌ಕುಮಾರ್ ನಾಯಕ್ ಮಾತನಾಡಿ, ಶ್ರೀ ರಾಮ ಮಂದಿರ ನಿರ್ಮಾಣ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಇದು ದೇಶದ ಏಕತೆಯ ಸಂಕೇತವಾಗಿದೆ. ಮಂದಿರ ನಿರ್ಮಾಣ ಇಷ್ಟೊಂದು ವಿಳಂಬಕ್ಕೆ ಕೆಲವು ರಾಜಕೀಯ ಪಕ್ಷಗಳ ಸ್ವಾರ್ಥ, ಮತಬ್ಯಾಂಕ್ ರಾಜಕಾರಣ ಹಾಗೂ ಡೋಂಗಿ ಜಾತ್ಯತೀತತೆ ಕಾರಣ ಎಂದು ತಿಳಿಸಿದರು.
    ದಾವಣಗೆರೆಯಲ್ಲಿ ಅಧಿಕೃತವಾಗಿ ಮಂದಿರವಲ್ಲೇ ಕಟ್ಟಿದೆವು ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಇದಕ್ಕೂ ಮೊದಲೇ 3 ಸಾವಿರ ಪುಸ್ತಕಗಳು ಮಾರಾಟವಾಗಿವೆ. 3ನೇ ಮುದ್ರಣ ಕಾಣುತ್ತಿದೆ ಎಂದರು.
    ಸೋಮೇಶ್ವರ ವಿದ್ಯಾಲಯ ಕಾರ್ಯದರ್ಶಿ ಕೆ.ಎಂ. ಸುರೇಶ್ ಇದ್ದರು. ಯೋಗಿಶ್ ಸ್ವಾಗತಿಸಿದರು.

    ತೊಂಬತ್ತರ ದಶಕದ ಸಂದರ್ಭದಲ್ಲಿ ಮಂದಿರವಲ್ಲೇ ಕಟ್ಟುತ್ತೇವೆ ಎಂದು ಹೇಳುತ್ತಿದ್ದೆವು. ಇಂದು ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಗೊಂಡಿದ್ದು, ಎಲ್ಲರೂ ಅಲ್ಲಿಗೆ ಭೇಟಿ ನೀಡಿ ವೀಕ್ಷಿಸಿ ಆನಂದಿಸಬೇಕು.
    ಎಸ್.ಎ. ರವೀಂದ್ರನಾಥ್, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts