More

    ಶ್ರೀರಂಗಪಟ್ಟಣದಲ್ಲಿ ಶಕ್ತಿ ದೇವತೆಗಳಿಗೆ ಶ್ರದ್ಧಾಭಕ್ತಿಯ ಪೂಜೆ

    ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಆಷಾಢ ಮಾಸದ ಕೊನೆಯ ಶುಕ್ರವಾರ ಪ್ರಯುಕ್ತ ನಾಡದೇವತೆ ಚಾಮುಂಡೇಶ್ವರಿ ಸೇರಿದಂತೆ ಶಕ್ತಿ ದೇವತೆಗಳಿಗೆ ಭಕ್ತಿಭಾವದ ಪೂಜೆಗಳು ನಡೆದವು.
    ಪಟ್ಟಣದ ಚಾಮುಂಡೇಶ್ವರಿ ಬೀದಿಯ ದೇಗುಲದಲ್ಲಿ ಪ್ರಧಾನ ಅರ್ಚಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ವೈದಿಕರು ಪ್ರದೋಷ ಕಾಲದಲ್ಲಿ ಅರಿಶಿಣ-ಕುಂಕುಮ ಹಾಗೂ ಸುಗಂಧ ದ್ರವ್ಯಗಳು ಸೇರಿದಂತೆ ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಿದರು. ಪಾರಾಯಣ, ಸಹಸ್ರನಾಮ ಪಠಿಸಿ ದೇವಿಯ ಆರಾಧನೆ ನಡೆಸಿದರು. ಬಳಿಕ ಚಾಮುಂಡಿ ದೇವಿಯನ್ನು ಅಷ್ಟಕೈಗಳ ಭದ್ರಕಾಳಿ ಅವತಾರದಲ್ಲಿ ವರ್ಣರಂಜಿತವಾಗಿ ಅಲಂಕರಿಸಿದ್ದು ಗಮನ ಸೆಳೆಯಿತು.
    ದೇವಿಯನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಭಕ್ತರು ಶುಕ್ರವಾರ ಮುಂಜಾನೆಯಿಂದಲೇ ಆಗಮಿಸಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಪಟ್ಟಣದ ಲಕ್ಷ್ಮೀದೇವಿ ದೇವಾಲಯದಲ್ಲಿ ಲಕ್ಷ್ಮೀದೇವಿಯನ್ನು ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಿದ್ದು, ಪ್ರಧಾನ ಅರ್ಚಕ ಕೃಷ್ಣಭಟ್ ಅವರ ನೇತೃತ್ವದಲ್ಲಿ ಪೂಜಾ ಕೈಕಂರ್ಯ ಸಲ್ಲಿಸಲಾಯಿತು. ಪಟ್ಟಣದ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲೂ ಕಾಳಿ ಸ್ವರೂಪಿ ಪಾರ್ವತಿ ದೇವಿಗೆ ಅರ್ಚಕ ಮಂಜು ಆಚಾರ್ಯ ಅವರ ನೇತೃತ್ವದಲ್ಲಿ ನೂರಾರು ಕಳಸಗಳನಿಟ್ಟು ಕರಗದ ರೂಪದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ಜರುಗಿದವು. ಪಟ್ಟಣದ ಕುಂಬಾರಗೇರಿ ಬೀದಿಯ ಸಂತಾನಲಕ್ಷ್ಮೀ ದೇವಿಗೆ 8ನೇ ವರ್ಷದ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು. ಪಟ್ಟಣದ ಸಮೀಪದ ಗಂಜಾಂನ ಶಕ್ತಿ ದೇವತೆ ನಿಮಿಷಾಂಬ ದೇವಾಲಯ, ತಾಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯ ಹಾಗೂ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿಯ ಮಹಾಕಾಳಿ ದೇಗುಲದಲ್ಲಿ ವಿಶೇಷ ಪೂಜೆ ಜರುಗಿದವು. ಪಟ್ಟಣದ ಶ್ರೀರಂಗ ಆಟೋ ನಿಲ್ದಾಣದ ಚಾಲಕರು ಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ, ಆರಾಧನೆ ಸಲ್ಲಿಸಿ ಭರ್ಜರಿ ಬಾಡೂಟದ ಪ್ರಸಾದ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts