More

    ಶ್ರೀರಂಗಪಟ್ಟಣದಲ್ಲಿ ವೈದಿಕನ ಹತ್ಯೆಗೆ ಯತ್ನ

    ಶ್ರೀರಂಗಪಟ್ಟಣ: ಕಾರಿನಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಧಾರ್ಮಿಕ ಅಪರ ಕರ್ಮ ನಡೆಸುವ ವೈದಿಕನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.

    ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ರಸ್ತೆಯ ಸೆಂದಿಲ್ ಕೋಟೆ ಮುಂಭಾಗ ಶುಕ್ರವಾರ ಬೆಳಗ್ಗೆ 9.15 ಘಟನೆ ನಡೆದಿದ್ದು, ಪಟ್ಟಣದ ಎ.ರಾಮಣ್ಣ ಬೀದಿಯ ನಿವಾಸಿ, ವೈದಿಕ ಗಂಗಾಧರ್ ಚೂರಿ ಇರಿತಕ್ಕೆ ಒಳಗಾದವರು.

    ಏನಿದು ಘಟನೆ?: ಪಟ್ಟಣದ ಗಿಡ್ಡ ಬಾಗಿಲು (ಜಿಬಿ) ಹೊಳೆಯ ಕಾವೇರಿ ತೀರದ ಕೋಟೆಯೊಳಗಿನ ಖಾಸಗಿ ವ್ಯಕ್ತಿಗಳ ಕೃಷಿ ಭೂಮಿಯಲ್ಲಿ ತಲೆ ಎತ್ತಿರುವ ಅಕ್ರಮ ಶೆಡ್‌ನ ಸ್ಥಳದಲ್ಲಿ ವೈದಿಕ ಗಂಗಾಧರ್ ಅವರು ಹಲವು ವರ್ಷಗಳಿಂದ ಪಿಂಡಪ್ರದಾನ, ಅಸ್ಥಿ ವಿಸರ್ಜನೆ, ಧಾರ್ಮಿಕ ಅಪರ ಕ್ರಿಯೆ ಮಾಡಿಸುತ್ತಿದ್ದರು.

    ಎಂದಿನಂತೆ ಭಕ್ತರ ಪೂಜಾ ಕಾರ್ಯ ಮಾಡಿಸಲು ಶುಕ್ರವಾರ ಬೆಳಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುವಾಗ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ತಲೆಗೆ ಹೊಡೆದು ಬೀಳಿಸಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹರಿತವಾದ ಚೂರಿಯಿಂದ ಬೆನ್ನಿನ ಕೆಳ ಭಾಗಕ್ಕೆ ಬಲವಾಗಿ ತಿವಿದರು. ಕೂಡಲೇ ಪ್ರಾಣಭೀತಿಯಿಂದ ಗಂಗಾಧರ್ ಕೆಲದೂರ ಚೀರಾಡಿಕೊಂಡು ಓಡಿದ್ದು, ಸಮೀಪದಲ್ಲೇ ಗಾರೆ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕೂಲಿ ಕಾರ್ಮಿಕ ತನ್ನ ಕೈಯಲ್ಲಿದ್ದ ಮಟ್ಟಕೋಲು(ದೊಣ್ಣೆ)ಯೊಂದಿಗೆ ರಕ್ಷಣೆಗೆ ಮುಂದಾದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ವೈದಿಕ ಗಂಗಾಧರ್‌ನನ್ನು ಸಾರ್ವಜನಿಕರು ತಕ್ಷಣವೇ ಆಸ್ಪತ್ರೆಗೆ ರವಾನಿಸಿದರು.

    ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಪಟ್ಟಣೆ ಠಾಣೆ ಪೊಲೀಸರು ಸಿಸಿ ಟಿವಿ ಪರಿಶೀಲಿಸಿ ವಾಹನ ಹಾಗೂ ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಗಾಯಾಳು ಗಂಗಾಧರ್ ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts