More

    ಶ್ರವಣಬೆಳಗೊಳದಲ್ಲಿ ಜೈನ ದೀಕ್ಷೆ ಪಡೆದ ಸಾಗರದ ಯುವಕ; ಆಗಮ ಇಂದ್ರ ಈಗ ಚಾರ ಕ್ಷುಲ್ಲಕ ಆಗಮ ಕೀರ್ತಿ ಸ್ವಾಮಿ

    ಸಾಗರ: ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಸಾಗರದ ಯುವಕ ಆಗಮ ಇಂದ್ರ ಅವರು ಜೈನ ದೀಕ್ಷೆ ಪಡೆದರು. ಅವರಿಗೆ ವಿಚಾರ ಕ್ಷುಲ್ಲಕ ಆಗಮ ಕೀರ್ತಿ ಸ್ವಾಮಿಯಾಗಿ ಶ್ರವಣಬೆಳಗೊಳ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಜೈನ ಧರ್ಮದ ವಿಧಿ ವಿಧಾನಗಳಂತೆ ದೀಕ್ಷೆ ನೀಡಿದರು.
    ಹೊಂಬುಜ ಜೈನ ಮಠದ ಡಾ. ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಸೋಂದಾ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹಾಗೂ ಅನೇಕ ಗಣ್ಯರು, ಸಮಾಜದ ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು ಸಾಕ್ಷಿಯಾದರು.
    ಸಾಗರದ ನೆಹರು ಮೈದಾನದ ಜೈನ ದಿಗಂಬರ ಬಸದಿಯ ಪುರೋಹಿತರಾಗಿರುವ ಅಶೋಕ ಇಂದ್ರ ಹಾಗೂ ಅನಿತಾ ಅವರ ಎರಡನೇ ಪುತ್ರ ಆಗಮ ಇಂದ್ರ ತನ್ನ 21ನೇ ವಯಸ್ಸಿನಲ್ಲಿಯೇ ವಿಚಾರ ಕ್ಷುಲ್ಲಕ ಆಗಮ ಕೀರ್ತಿ ಸ್ವಾಮಿಯಾಗಿ ದೀಕ್ಷಿತರಾಗಿದ್ದಾರೆ.
    ಬಾಲ್ಯದಿಂದಲೇ ಧಾರ್ಮಿಕ ವಿಚಾರದಲ್ಲಿ ಆಸಕ್ತರಾಗಿದ್ದರು. ಆರಂಭದ ಶಿಕ್ಷಣವನ್ನು ಸಾಗರದ ರೋಟರಿ ಶಾಲೆಯಲ್ಲಿ ಪೂರೈಸಿದರು. ಪ್ರೌಢಶಿಕ್ಷಣವನ್ನು ಎಂ.ಜಿ.ಎನ್.ಪೈ ಪ್ರೌಢಶಾಲೆಯಲ್ಲಿ ನಡೆಸಿ ನಂತರ ಉಜಿರೆಯಲ್ಲಿ ಪದವಿಪೂರ್ವ ಶಿಕ್ಷಣ, ಸಾಗರದ ಎಲ್.ಬಿ.ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ. ಕಂಪ್ಯೂಟರ್ ಶಿಕ್ಷಣ, ಚಿತ್ರಕಲೆಯಲ್ಲಿ ಸೃಜನಶೀಲರಾಗಿದ್ದಾರೆ. ನಾಡಿನ ಅನೇಕ ಧೀಮಂತ ವ್ಯಕ್ತಿಗಳ ಚಿತ್ರಗಳನ್ನು ಬರೆದಿದ್ದು ಸಹೋದರನ ಜತೆ ಸೇರಿ ಸ್ವಯಂ ಉದ್ಯೋಗ ಮಾಡುತ್ತಿದ್ದರು.
    ಇವರ ತಂದೆ ಹಾಗೂ ತಾಯಿ ಟೈಲರಿಂಗ್ ಬದುಕಿನೊಂದಿಗೆ ಜೈನ ಬಸದಿಯಲ್ಲಿ ಪೂಜೆ ಮಾಡುತ್ತ ಬದುಕು ಕಟ್ಟಿಕೊಂಡಿದ್ದಾರೆ. ಸಾಗರದ ಶರಾವತಿ ಹಿನ್ನೀರಿನ ಪ್ರದೇಶದ ಕರೂರಿನ ಪಂಚಕೂಟ ಬಸದಿಗೆ ಆದಿಕದಂಬರ ರಾಜ ಪುರೋಹಿತ ಕುಟುಂಬದಿಂದ ಬಂದಿರುವ ಇವರ ಅಜ್ಜ ಆದಪ್ಪ ಇಂದ್ರರು ಅತ್ಯಂತ ಜನಪ್ರಿಯರಾಗಿದ್ದರು. ಇಂತಹ ಪರಂಪರೆಯಲ್ಲಿ ಬೆಳೆದು ಬಂದಿರುವ ಆಗಮ ಇಂದ್ರರಿಗೆ ಇದೆಲ್ಲ ಪ್ರೇರಣೆಯಿಂದಾಗಿ ವೈರಾಗ್ಯದತ್ತ ಸಾಗಲು ಮಾರ್ಗವಾಗಿದೆ. ಇವರ ದೊಡ್ಡಪ್ಪ ಪಾರ್ಶ್ವನಾಥ ಇಂದ್ರ ಸಹ ಕರೂರು ಸೀಮೆಯ ಪುರೋಹಿತರಾಗಿದ್ದರು. ತಂದೆ ಅಶೋಕ ಇಂದ್ರ ಹಾಗೂ ಪಂಡಿತ ಮೋಹನ್‌ಕುಮಾರ್ ಅವರೊಂದಿಗೆ ನಿರಂತರವಾಗಿ ಪೂಜಾ ಕಾರ್ಯಗಳಲ್ಲಿ ಅನೇಕ ಕಡೆಗಳಲ್ಲಿ ಆಗಮ ಇಂದ್ರ ಭಾಗವಹಿಸಿದ್ದಾರೆ. ಆಗಮ ಇಂದ್ರರಿಗೆ ಕ್ಷುಲ್ಲಕ ಪಟ್ಟ ಸಿಕ್ಕಿರುವುದು ಹಾಗೂ ಆಗಮ ಕೀರ್ತಿ ಎನ್ನುವ ಸ್ವಾಮೀಜಿಯ ಪದನಾಮವಾಗಿರುವುದು ವಿಶೇಷ ಎನ್ನಬಹುದು.
    ಸಾಗರಕ್ಕೆ ತನ್ನದೇ ಆದ ಧಾರ್ಮಿಕ ಇತಿಹಾಸವಿದ್ದು ಅದರಲ್ಲೂ ಜೈನ ಧರ್ಮೀಯರ ವಿಶೇಷ ನೆಲೆವೀಡಾಗಿದೆ. ಸಾಗರದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜೈನ ಕುಟುಂಬಗಳಿವೆ. ಇಂತಹ ಸಾಗರದ ನೆಲೆಯಿಂದ ಈ ಹಿಂದೆ ಸೋಂದಾ ಮಠ, ಈಗಿನ ಚಾಮರಾಜನಗರದ ಕನಗಿರಿ ಮಠಕ್ಕೆ ಹಾಗೂ ಕಂಬದಹಳ್ಳಿ ಮಠಕ್ಕೆ ಪೀಠಾಧಿಪತಿಗಳಾಗಿದ್ದಾರೆ ಹಾಗೂ ಅನೇಕ ದಿಗಂಬರ ಮುನಿಗಳು ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts