More

    ಶುಲ್ಕ ಕಡಿಮೆಯಾದರೆ ಎಪಿಎಂಸಿ ನಿರ್ವಹಣೆ ಕಷ್ಟ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಮಾರುಕಟ್ಟೆ ಶುಲ್ಕವನ್ನು ಶೇ. 1.50ರಿಂದ ಶೇ. 1ಕ್ಕೆ ಹಾಗೂ ಅದಕ್ಕಿಂತ ಕಡಿಮೆ ಮಾಡಿರುವುದರಿಂದ ಸಮಿತಿಗಳ ನಿರ್ವಹಣೆ ಬಹಳ ಕಷ್ಟದಾಯಕವಾಗುತ್ತಿದ್ದು, ಸಮರ್ಪಕ ಶುಲ್ಕ ನಿಗದಿ ಮಾಡಬೇಕು ಎಂದು ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ಆಗ್ರಹಿಸಿದ್ದಾರೆ.

    ಕೇಂದ್ರ ಸರ್ಕಾರ ಕೃಷಿ ಕಾಯ್ದೆ-20 ತಿದ್ದುಪಡಿ ಮಾಡಿದ ನಂತರ ರಾಜ್ಯ ಸರ್ಕಾರ ಎಪಿಎಂಸಿಗಳ ಹೊರಗೆ ವ್ಯಾಪಾರ ಮಾಡುವವರಿಗೆ ಮಾರುಕಟ್ಟೆ ಶುಲ್ಕದಿಂದ ವಿನಾಯಿತಿ ನೀಡಿದೆ. ಎಪಿಎಂಸಿ ಒಳಗೆ ವ್ಯಾಪಾರ ಮಾಡುವವರಿಗೆ ಇದ್ದ ಶೇ. 1.50 ಶುಲ್ಕವನ್ನು ಒಂದೊಮ್ಮೆ ಶೇ. 0.35 ಹಾಗೂ ನಂತರದಲ್ಲಿ ಶೇ. 1 ಹೀಗೆ ಇಳಿಸುತ್ತ ಬಂದಿರುವುದರಿಂದ ಸಮಸ್ಯೆಯಾಗುತ್ತಿದೆ.

    ‘ಒಂದು ಕಡೆ ವ್ಯಾಪಾರಸ್ಥರಿಗೆ ಎಪಿಎಂಸಿಯಲ್ಲಿ ಶುಲ್ಕ ವಿಧಿಸುವುದು, ಇನ್ನೊಂದೆಡೆ ಹೊರಗೆ ವ್ಯಾಪಾರ ಮಾಡುವವರಿಗೆ ಶುಲ್ಕ ವಿನಾಯಿತಿ ನೀಡುವುದು ರಾಜ್ಯ ಸರ್ಕಾರದ ತಾರತಮ್ಯ ನೀತಿಯಾಗುತ್ತದೆ. ಶುಲ್ಕ ಕಡಿಮೆಯಾಗುತ್ತ ಹೋದರೆ ಸಮಿತಿಗಳ ನಿರ್ವಹಣೆ ಕಾರ್ಯ ಸುಗಮವಾಗಿ ಮಾಡಲು ಆಗದೇ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದು ಕಳೆದ ಕೆಲ ದಿನಗಳಿಂದ ನನ್ನ ಗಮನಕ್ಕೆ ಬಂದಿದೆ’ ಎಂದು ಸುಡಕೇನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ರಾಜ್ಯ ಸರ್ಕಾರ ಪದೇಪದೆ ಮಾರುಕಟ್ಟೆ ಶುಲ್ಕ ಹೆಚ್ಚು ಕಡಿಮೆ ಮಾಡುವುದು ಹಾಗೂ ವ್ಯಾಪಾರಸ್ಥರಿಗೆ ತಾರತಮ್ಯ ಮಾಡುವುದು ತೀವ್ರ ನೋವಿನ ಸಂಗತಿ. ಏಷ್ಯಾದಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಎಪಿಎಂಸಿಗೆ ಇದೆ. ರೈತರ ಹಿತದೃಷ್ಟಿಯಿಂದ ಹಾಗೂ ಎಪಿಎಂಸಿಗಳನ್ನು ಉಳಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಮಾರುಕಟ್ಟೆ ಒಳಗೆ ಹಾಗೂ ಹೊರಗೆ ಸಮಾನ ಶುಲ್ಕ ನಿಗದಿ ಮಾಡಬೇಕು. ಒಂದು ವೇಳೆ ಈ ತಾರತಮ್ಯ ಹೋಗಲಾಡಿಸದಿದ್ದರೆ ರೈತರ ಹಿತಕ್ಕಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದು ಸಹದೇವಪ್ಪ ಸುಡಕೇನವರ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts