More

    ಶಿವಸಿಂಪಿ ಕೊಡುಗೈ ಸಮಾಜ  -ತುಮಕೂರು ಶ್ರೀ ಸಿದ್ಧಗಂಗಾ ಸ್ವಾಮೀಜಿ ಬಣ್ಣನೆ  -ಶಿವದಾಸಿಮಯ್ಯ ಜಯಂತ್ಯುತ್ಸವ

    ದಾವಣಗೆರೆ: ಶಿವಸಿಂಪಿ ಸಮಾಜಕ್ಕೆ ದೊಡ್ಡ ಹಿನ್ನೆಲೆ ಇದೆ. ಮಹತ್ತರ ಕೊಡುಗೆಗಳನ್ನು ನೀಡಿದವರು ಇಲ್ಲಿದ್ದಾರೆ. ಹೀಗಾಗಿ ಇದು ಕೊಡುವ ಸಮಾಜವೇ ಹೊರತು ಬೇಡುವ ಸಮಾಜವಾಗಿ ಉಳಿದಿಲ್ಲ ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಣ್ಣಿಸಿದರು.
    ಆವರಗೆರೆಯ ಶಂಕರಲೀಲಾ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ, ದಾವಣಗೆರೆ ಶಿವಸಿಂಪಿ ಸಮಾಜದಿಂದ ಆಯೋಜಿಸಿದ್ದ ಜಿಲ್ಲಾ ಶಿವಸಿಂಪಿ ಸಮಾವೇಶ, ಕುಲಗುರು ಶರಣ ಶ್ರೀ ಶಿವದಾಸಿಮಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
    ಕರ್ನಾಟಕ ವಿವಿ ಸಂಸ್ಥಾಪಕ ಡಿ.ಸಿ. ಪಾವಟೆ ಅಲ್ಲದೆ ದಾವಣಗೆರೆಯ ಎಸ್.ಕೊಟ್ರಬಸಪ್ಪ, ಚಿಗಟೇರಿ ಮುರಿಗೆಪ್ಪ, ಚಿಂದೋಡಿ ಲೀಲಾ ಮತ್ತಿತರರು ವಿವಿಧ ರಂಗಗಳಲ್ಲಿ ನಾನಾ ಕೊಡುಗೆ ನೀಡಿದ್ದಾರೆ. ಹೀಗಾಗಿ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳಬೇಕಿದೆ ಎಂದು ಹೇಳಿದರು.
    ಶಿವಸಿಂಪಿ ಸಮಾಜಕ್ಕೆ ಕುಲಗುರು ಶಿವದಾಸಿಮಯ್ಯ ಅವರಿಂದಾಗಿ ಅಸ್ಮಿತೆ ಸಿಕ್ಕಿದೆ. ಇದರ ಆಧಾರದ ಮೇಲೆ ಸಮಾಜದವರು ಬದುಕಿಗೆ ಭದ್ರ ಬುನಾದಿ ಹಾಕಿಕೊಳ್ಳಬೇಕು. ಶಿವದಾಸಿಮಯ್ಯರ ವಿಚಾರಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸವಾಗಲಿ ಎಂದು ಆಶಿಸಿದರು.
    ಅನುಭವಮಂಟಪದ ಮೂಲಕ ಬದುಕುವ ನಡೆ ಕಲಿಸುವ ಶಿವಶರಣರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. 12ನೇ ಶತಮಾನದ ಬಸವಾದಿ ಶರಣರು ಹೊತ್ತಿಸಿದ್ದ ಕ್ರಾಂತಿಯ ಕಿಡಿಗಳಲ್ಲಿ ಶಿವದಾಸಿಮಯ್ಯ ಕೂಡ ಒಬ್ಬರು. ಬಟ್ಟೆ ಹೊಲೆದು ಸಮಾಜದ ಮನ ಮರ್ಯಾದೆ ಉಳಿಸುವ ಜತೆಗೆ ಸಮಾಜದ ಮನಸ್ಸುಗಳನ್ನು ಹೊಲೆಯುವ ಕೆಲಸ ಮಾಡಿದರು. ಅವರ ಸ್ಮರಣೆ ನೆಪದಲ್ಲಿ ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಿದೆ ಎಂದರು.
    ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು, ಸರ್ಕಾರದ ನೆರವು ಮತ್ತು ಸೌಲಭ್ಯ ಪಡೆಯಲು ಸಂಘಟಿತರಾಗಬೇಕು. ಸ್ವಾವಲಂಬಿಗಳಾಗುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
    ಸಮಾಜದ ಬದಲಾವಣೆ ಹಾಗೂ ಬೆಳವಣಿಗೆಗೆ ಶಿಕ್ಷಣವೇ ದೊಡ್ಡ ಶಕ್ತಿ. ಹೀಗಾಗಿ ಇಮದಿನ ಮಕ್ಕಳು ಕೇವಲ ಪ್ರತಿಭಾವಂತರಾದರೆ ಸಾಲದು. ಗುಣವಂತರೂ ಆಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಇಂಜಿನಿಯರ್, ವೈದ್ಯ ಮೊದಲಾದ ದೊಡ್ಡ ಹುದ್ದೆ ಬದಲಾಗಿ ತಮ್ಮ ಮಕ್ಕಳು ಉತ್ತಮ ಮಾನವರಾಗಲು ಪಾಲಕರು ಬಯಸುತ್ತಿಲ್ಲ. ಮಕ್ಕಳು ಮಾನವೀಯತೆ ಗುಣ ಬೆಳೆಸಿಕೊಂಡಲ್ಲಿ ದೇಶಕ್ಕೆ ಶಕ್ತಿಯಾಗುತ್ತಾರೆ ಎಂದು ಹೇಳಿದರು.
    ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶಿವಸಿಂಪಿ ಸಮಾಜಕ್ಕೆ ಚಿತ್ರದುರ್ಗ ಮುರುಘಾಮಠವೇ ತವರುಮನೆ. ಹೀಗಾಗಿ 2ಎ ಮೀಸಲು ಅಥವಾ ಯಾವುದೇ ಹಕ್ಕುಗಳಿಗಾಗಿ ಸಮಾಜ ನಡೆಸುವ ಹೋರಾಟದಲ್ಲಿ ಮುರುಘಾ ಮಠ ಧ್ವನಿಯಾಗಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ತುಮಕೂರು ವಿವಿ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ.ಎಂ.ಕೊಟ್ರೇಶ್ ಮಾತನಾಡಿ ವೀರಶೈವ ಲಿಂಗಾಯತ ಸಮುದಾಯದ 62 ಒಳಪಂಗಡಗಳಲ್ಲಿ ಒಂದಾದ ಶಿವಸಿಂಪಿ ಸಮಾಜಕ್ಕೆ ಇನ್ನೂ ಸಾಮಾಜಿಕ ನ್ಯಾಯ ದೊರೆತಿಲ್ಲ. ಈ ಸಮಾಜ ಪ್ರವರ್ಗ 3ಬಿ ಪಟ್ಟಿಯಲ್ಲಿದ್ದು, ಹೆಚ್ಚಿನ ಸೌಲಭ್ಯ ಸಿಗದಂತಾಗಿದೆ. ಇದನ್ನು 2ಎ ಪಟ್ಟಿಗೆ ಸೇರಿಸುವ ಒತ್ತಡ ನಡೆಸಿದ್ದರೂ ಸರ್ಕಾರದಿಂದ ಅಧಿಕೃತ ಘೋಷಣೆಯಾಗಿಲ್ಲ ಎಂದು ಹೇಳಿದರು.
    ಶಿವದಾಸಿಮಯ್ಯ ಅವರ ಕುರಿತ, ವಾರ್ಧಕ ಷಟ್ಪದಿಯಲ್ಲಿ ರಚನೆಯಾಗಿದ್ದ 737 ಪುಟಗಳ ಪುರಾಣ ದೊರೆತಿರುವುದು ಸಮಾಜ ಬೀಗುವ ವಿಚಾರ. ಇದನ್ನು ಭಾಷಾಂತರಿಸಿ ಪರಾಮರ್ಶನ ಗ್ರಂಥ ತರುತ್ತಿದ್ದು, ಸಿದ್ಧ್ದಗಂಗಾ ಮಠದಿಂದಲೇ ಅದರ ಪ್ರಕಟಣೆಯಾಗಬೇಕು. ಶಿವದಾಸಿಮಯ್ಯ ಅವರ ಕುರಿತಂತೆ ಸಂಶೋಧನಾ ಅಧ್ಯಯನಕ್ಕೆ ವಿದ್ಯಾರ್ಥಿಗಳು ಮುಂದಾದಲ್ಲಿ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
    ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಬೂಸ್ನೂರು ಗುರುಬಸಪ್ಪ, ಗೌರವಾಧ್ಯಕ್ಷ ಸಿ.ಎಲ್. ಚಂದ್ರಧರ್, ಪ್ರ.ಕಾರ್ಯದರ್ಶಿ ಬೂಸ್ನೂರು ಪ್ರಕಾಶ್, ಜ್ಞಾನೇಶ್ವರ ಜವಳಿ, ಸಮಾಜದ ವಿವಿಧ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ, ಡಾ. ಎಸ್.ಎಸ್.ನಾರಾಯಣಪುರ, ಶಿವಶಂಕರ್ ಜೊಳ್ಳೆ ಮತ್ತಿತರರಿದ್ದರು. ಎಸ್ಸೆಸ್ಸೆಲ್ಸಿ- ಪಿಯುಸಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದ ಕುರಿತಾದ ಧ್ವನಿಮುದ್ರಿತ ಹಾಡನ್ನು ಬಿಡುಗಡೆಗೊಳಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts