More

    ಶಿವಮೊಗ್ಗದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ

    ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸ್ಕಿಲ್ ಪಾರ್ಕ್ ನಿರ್ವಣ, ಎಫ್​ಎಂ ರೇಡಿಯೋ ಹಾಗೂ ಶಿಕಾರಿಪುರದಲ್ಲಿ ಏಕಲವ್ಯ ಶಾಲೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಪ್ರೆಸ್​ಟ್ರಸ್ಟ್​ನಲ್ಲಿ ಗುರುವಾರ ಪತ್ರಿಕಾ ಸಂವಾದದಲ್ಲಿ ಮಾತನಾಡಿ, 30 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ ಹಾಗೂ ಸೇವಾ ವಲಯಕ್ಕೆ ಉತ್ತಮ ಅವಕಾಶವಿದ್ದು, ಉದ್ಯೋಗಾವಕಾಶ ಮತ್ತು ವಾಣಿಜ್ಯೋದ್ಯಮಕ್ಕೆ ಉತ್ತೇಜನ ನೀಡಲು ಕೌಶಲಾಭಿವೃದ್ಧಿ ಪಾರ್ಕ್ ಸ್ಥಾಪಿಸಲಾಗುವುದು ಎಂದರು.

    ಕರೊನಾ ಸೇರಿ ಸೇನೆಗೆ ಅಗತ್ಯವಿರುವ ನೂತನ ತಂತ್ರಜ್ಞಾನ ಬಯೋ ಕಾಂಪೋಸಿಟ್​ಗಳು, ಜೈವಿಕವಾಗಿ ಕೊಳೆಯುವ ಆವಿಷ್ಕಾರಕ್ಕಾಗಿ ಕುವೆಂಪು ವಿವಿ ಸಹಯೋಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಡಿಆರ್​ಡಿಒ ಲ್ಯಾಬ್ ತೆರೆಯಲು ರಕ್ಷಣಾ ಮಂತ್ರಿಗೆ ಮನವಿ ಮಾಡಿದ್ದು ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

    60 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿಗಳನ್ನೊಳಗೊಂಡ ಬೃಹತ್ ಆಡಳಿತ ಭವನ ನಿರ್ವಿುಸುವ ಚಿಂತನೆ ಇದೆ ಎಂದ ಅವರು, ಬಹುದಿನಗಳ ಬೇಡಿಕೆಯಾದ ಎಫ್​ಎಂ ಕೇಂದ್ರ ಸ್ಥಾಪನೆಗೆ ಖಾಸಗಿ ಸಹಭಾಗಿತ್ವದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಜೈವಿಕ ಉದ್ಯಾನಕ್ಕೆ ಒತ್ತು: ಸಕ್ರೆಬೈಲು ವ್ಯಾಪ್ತಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 42 ಎಕರೆ ಪ್ರದೇಶದಲ್ಲಿ ಬಟರ್ ಫ್ಲೈ ಪಾರ್ಕ್(ಚಿಟ್ಟೆ ವನ), ಡೆಮೋ ಗಾರ್ಡನ್, ವೈದ್ಯಕೀಯ ಸಸ್ಯ ಉದ್ಯಾನ, ಅರಣ್ಯ ಗ್ರಂಥಾಲಯ, ಪಕ್ಷಿ ವೀಕ್ಷಣಾಲಯ, ಮಕ್ಕಳ ಆಟ ಕೇಂದ್ರ, ಓಪನ್ ಜಿಮ್ ಒಳಗೊಂಡ ಜೈವಿಕ ಉದ್ಯಾನ (ಇಕೋ ಟೂರಿಸಂ) ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಅಲ್ಲದೆ, ಪ್ರತಿಭಾವಂತ ಉದ್ಯೋಗಿಗಳು ಜಿಲ್ಲೆಯಲ್ಲೇ ಉಳಿದುಕೊಳ್ಳಲು ಸ್ಟೇ-ಇನ್ ಸಿಟಿ ಕಲ್ಪನೆ ಹೊಂದಲಾಗಿದೆ ಎಂದು ಹೇಳಿದರು.

    ವಿಮಾನ ನಿಲ್ದಾಣಕ್ಕೆ ಶೀಘ್ರ ಟೆಂಡರ್: ಸೋಗಾನೆ ಬಳಿ ಸ್ಥಗಿತಗೊಂಡಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಮೂರ್ನಾಲ್ಕು ದಿನದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಭವಿಷ್ಯದ ದೃಷ್ಟಿಯಿಂದ ರನ್​ವೇಯನ್ನು 900 ಮೀ.ಗೆ ಹೆಚ್ಚಿಸಲಾಗಿದೆ. ಕರೊನಾ ಆತಂಕದಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿತ್ತು. ಮೇ ರೈಟ್ ಸಂಸ್ಥೆಗೆ ಡಿಪಿಆರ್ ತಯಾರಿಸಲು ನೇಮಿಸಲಾಗಿದೆ. 2 ಪ್ಯಾಕೇಜ್​ನಲ್ಲಿ ಕಾಮಗಾರಿ ಒಳಗೊಂಡಿದೆ. ಪ್ಯಾಕೇಜ್ 1ಕ್ಕೆ ಆಹ್ವಾನಿಸಿರುವ ಟೆಂಡರ್ ಸ್ವೀಕೃತಗೊಂಡಿದ್ದು ಟೆಂಡರ್ ಮೌಲ್ಯಮಾಪನ ಹಂತದಲ್ಲಿದೆ ಎಂದರು.

    8.77 ಕೋಟಿ ರೂ. ಸದ್ಬಳಕೆ: ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಕಾಲದಿಂದಲೂ ಬಾಕಿ ಇದ್ದ 3.86 ಕೋಟಿ ರೂ. ಸೇರಿ ಕಳೆದೊಂದು ವರ್ಷದಲ್ಲಿ 8.77 ಕೋಟಿ ರೂ. ಸಂಸದರ ನಿಧಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. 20 ಲಕ್ಷ ರೂ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು, ರಸ್ತೆ ಮತ್ತು ಸಭಾ ಭವನಗಳಿಗೆ 2.75 ಕೋಟಿ ರೂ., ಬಸ್ ಶೆಲ್ಟರ್ ದುರಸ್ತಿ ಹಾಗೂ ಹೊಸದಾಗಿ ನಿರ್ವಣಕ್ಕೆ 2 ಕೋಟಿ ರೂ. ಬಳಕೆ ಮಾಡಲಾಗಿದೆ. ಉಳಿದಂತೆ ಕರೊನಾ ನಡುವೆಯೂ ವಿವಿಧ ಕಾಮಗಾರಿಗಳಿಗೆ ಅನುದಾನ ಬಳಕೆ ಮಾಡಿಕೊಂಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ವರ್ಷದಲ್ಲಿ ಎಂಪಿ ಹಣ ಬಿಡುಗಡೆ ಆಗುವ ಸಾಧ್ಯತೆ ಕಡಿಮೆ. ಇರುವ ಹಣದಲ್ಲಿಯೇ ಅಭಿವೃದ್ಧಿ ಕಾಮಗಾರಿ ನಡೆಯಬೇಕಿದೆ ಎಂದು ಹೇಳಿದರು.

    ಪಿಎಂ ಆದರ್ಶ ಗ್ರಾಮಕ್ಕೆ 40 ಲಕ್ಷ ರೂ.: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 37 ಪಿಎಂ ಆದರ್ಶ ಗ್ರಾಮಗಳಿದ್ದು, ತಲಾ 40 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರು ಸೇರಿ ಹಲವು ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. 2018-19ರಲ್ಲಿ 10, 19-20ರ ಮೊದಲ ಹಂತದಲ್ಲಿ 10 ಹಾಗೂ 2ನೇ ಹಂತದಲ್ಲಿ 17 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಗ್ರಾಮಮಟ್ಟದ ಸಮಿತಿ ರಚನೆಯಾಗಿವೆ. 2018-19ರಲ್ಲಿ 10 ಗ್ರಾಮಗಳ ಮನೆ-ಮನೆ ಸಮೀಕ್ಷೆ ಮುಗಿದಿದೆ. 2019-20ನೇ ಸಾಲಿನ 10 ಮನೆಗಳ ಸಮೀಕ್ಷೆ ಆರಂಭಗೊಂಡಿದೆ. 2018-19ನೇ ಸಾಲಿನ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

    ರೈಲ್ವೆಯಲ್ಲಿ ಅಭಿವೃದ್ಧಿ ಪರ್ವ ಆರಂಭ: ಸ್ವಾತಂತ್ರ್ಯ ನಂತರ ಮೀಟರ್ ಗೇಜ್​ನಿಂದ ಬ್ರಾಡ್​ಗೇಜ್ ಮಾಡಲಾಗಿರುವ ಕಾಮಗಾರಿ ಬಿಟ್ಟರೆ ಮತ್ತೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಇದೀಗ ರೈಲ್ವೆಯಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗದಲ್ಲಿ ಭೂಸ್ವಾಧಿನ ಪ್ರಕ್ರಿಯೆ ನಡೆದಿದೆ. ತಾಳಗುಪ್ಪ-ಸಿದ್ದಾಪುರ, ಹರಿಹರ-ಶಿವಮೊಗ್ಗ ರೈಲು ಮಾರ್ಗಕ್ಕೆ ಮಂಜೂರಾತಿ ಸಿಕ್ಕಿದೆ ಎಂದರು.

    ನಗರದಲ್ಲಿ ಹೊರ ವರ್ತಲ ರಸ್ತೆ, ಮೇಲ್ಸೇತುವೆಗಳು, ತುಮರಿ ಸೇತುವೆ ನಿರ್ಮಾಣ ಚಾಲನೆಯಲ್ಲಿದೆ. ಶಿವಮೊಗ್ಗ-ತುಮಕೂರು ಚತುಷ್ಪಥ ರಸ್ತೆ, ಇಎಸ್​ಐ ಆಸ್ಪತ್ರೆ, ಜೋಗ್ ಫಾಲ್ಸ್​ನಲ್ಲಿ ಅಭಿವೃದ್ಧಿ, ಕೊಡಚಾದ್ರಿ ಮತ್ತು ಕೊಲ್ಲೂರಿನಲ್ಲಿ ಕೇಬಲ್ ಕಾರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮೊಬೈಲ್ ಟವರ್ ಸ್ಥಾಪನೆ ಗುರಿ ಹೊಂದಲಾಗಿದೆ. ಸಾಗರದಲ್ಲಿ ಮಂಕಿ ಪಾರ್ಕ್ ನಿರ್ವಣಕ್ಕೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಎನ್​ಎಚ್ ಹಾಗೂ ಲೋಕೋಪಯೋಗಿ ಕೇಂದ್ರ ಕಚೇರಿಗಳನ್ನು ಆರಂಭಿಸಲಾಗುತ್ತಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

    ಮನೆ-ಮನೆಗೆ ಸಿಹಿ ನೀರು ಪೂರೈಕೆ: ಬೈಂದೂರಿನಲ್ಲಿ 6 ನದಿ ಹಾಗೂ ಸಮುದ್ರ ಇದ್ದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಆ ನಿಟ್ಟಿನಲ್ಲಿ ಸೌಕೂರಿನಲ್ಲಿ 60-70 ಕೋಟಿ ರೂ. ವೆಚ್ಚದಲ್ಲಿ ನದಿ ಮತ್ತು ಸಮುದ್ರ ಪ್ರತ್ಯೇಕಿಸುವ ಪ್ರಯತ್ನ ನಡೆದಿದೆ. ಇದು ಸಫಲವಾದರೆ ಮನೆ-ಮನೆಗೂ ಸಿಹಿ ನೀರು ಪೂರೈಕೆ ಮಾಡಲಾಗುವುದು ಎಂದು ಲೋಕಸಭಾ ಸದಸ್ಯರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts