More

    ಶಿರಸಿ ಮಾರಿ ಜಾತ್ರೆ ಮಾ.15ರಿಂದ 23ರ ವರೆಗೆ

    ಶಿರಸಿ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಶ್ರೀಮಾರಿಕಾಂಬಾ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ಪ್ರಸಕ್ತ ವರ್ಷ ಮಾ.15ರಿಂದ ಮಾ. 23ರವರೆಗೆ ಜರುಗಲಿದೆ.
    ನಗರದ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾತ್ರಾ ಮುಹೂರ್ತ ಘೊಷಣೆ ಸಭೆಯಲ್ಲಿ ವಿದ್ವಾನ್ ರಾಮಕೃಷ್ಣ ಭಟ್ಟ ಕೆರೇಕೈ ಮುಹೂರ್ತ ಘೊಷಿಸಿದರು. ಪ್ಲವ ಸಂವತ್ಸರದ ಫಾಲ್ಗುಣ ಶುದ್ಧ ದ್ವಾದಶಿಯಂದು ಜಾತ್ರೆ ಆರಂಭವಾಗಲಿದೆ.

    ಜ.26ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.22ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆ.25ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಮಾ.1ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಮಾ.4ರಂದು ರಥ ಕಟ್ಟಲು ವೃಕ್ಷಪೂಜೆ, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು ನಡೆಯಲಿದೆ. ಮಾ.8ಕ್ಕೆ ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು, ಮಾ.9ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.

    ಮಾ.15ರಂದು ಮಧ್ಯಾಹ್ನ 12.21ರಿಂದ 12.33ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18ರಿಂದ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾ.16ರಂದು ಬೆಳಗ್ಗೆ 7.03 ರಿಂದ 7.27ರೊಳಗೆ ದೇವಿಯ ರಥಾರೋಹಣ ಕಾರ್ಯ ನಡೆಯಲಿದೆ. 8.36ರ ನಂತರ ದೇವಿಯ ಶೋಭಾಯಾತ್ರೆ ಹಾಗೂ ಗದ್ದುಗೆಯ ಮೇಲೆ ಸ್ಥಾಪನೆ ಕಾರ್ಯ ಜರುಗುವುದು. ಮಾ.17ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ.

    ಮಾ.23ರಂದು ಬೆಳಗ್ಗೆ 9.33 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ ಎಂದು ತಿಳಿಸಿದರು. ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ ಪ್ರಕಾರ ನಾಡಿನ ಮನೆತನದ ಪ್ರಮುಖ ಅಜಯ ನಾಡಿಗ್ ದೇವಿ ಸಾನಿಧ್ಯದಲ್ಲಿ ದೀಪ ಬೆಳಗಿಸಿದರು. ನಂತರ ಸಭಿಕರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts