More

    ಶಿಕ್ಷಣದಿಂದ ಬದುಕಿನ ಪರಿವರ್ತನೆ

    ವಿಜಯವಾಣಿ ಸುದ್ದಿಜಾಲ ಕುಮಟಾ: ಶಿಕ್ಷಣವು ಮಾನವ ಬದುಕಿನ ಸತ್ ಪರಿವರ್ತನೆಯ ಬೀಜವಾದರೆ, ಮದ್ಯಪಾನದಂತಹ ಚಟಗಳೇ ಅವನತಿಗೆ ತಳ್ಳುವ ಭೂತದಂತೆ. ಚಟಗಳನ್ನು ಬಿಟ್ಟರೆ ಒಳ್ಳೆಯ ಜೀವನ ಪಡೆಯಬಹುದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

    ಕೋನಳ್ಳಿಯ ದೇವಿಕಾನದಲ್ಲಿ ಶ್ರೀ ವನದುರ್ಗಾ ಮಂದಿರದಲ್ಲಿ ಇತ್ತೀಚೆಗೆ ಜರುಗಿದ ಸಾಮೂಹಿಕ ಸತ್ಯನಾರಾಯಣ ವ್ರತದ ಪೂಜೆ ಹಾಗೂ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಮಾಜದಲ್ಲಿ ಬಡತನ ಓಡಿಸಲು ಮೊದಲು ಮನಸ್ಸಿನಲ್ಲಿ ಪರಿವರ್ತನೆ ಬೇಕು. ಮನುಷ್ಯ ತನ್ನೊಳಗೆ ಜ್ಞಾನ, ಸ್ವಭಾವ, ವರ್ತನೆಯಲ್ಲಿ ಪರಿವರ್ತನೆ ಸಾಧಿಸಿದಾಗ ಬದುಕು ಸಾರ್ಥಕವಾಗುತ್ತದೆ. ಪರಿಶ್ರಮದ ಸಾಧನೆಯ ಮೂಲಕ ಪ್ರತಿಯೊಬ್ಬರಲ್ಲಿ ಪರಿವರ್ತನೆ ಸಹಜ ಪ್ರಕ್ರಿಯೆಯಾಗಬೇಕು. ಸಂಸ್ಕಾರದಿಂದ ಕೊರಡೂ ಕೊನರುತ್ತದೆ. ಬದುಕಿನ ಗಳಿಕೆಯಲ್ಲಿ ಒಂದಷ್ಟು ಸೇವೆಗಾಗಿ ಮೀಸಲಿಡಿ ಎಂದರು.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಒಟ್ಟು 17,764 ಸಂಘಗಳಿದ್ದು 1,36,000 ಸದಸ್ಯರಿದ್ದಾರೆ. ಸಂಘಗಳಿಂದ ಒಟ್ಟು 106.5 ಕೋ.ರೂ. ಉಳಿತಾಯ ಮಾಡಿದ್ದಾರೆ. ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಸಾಕಷ್ಟು ಪರಿವರ್ತನೆಯಾಗಿದ್ದು, ಗ್ರಾಮಾಭಿವೃದ್ಧಿಯೂ ಆಗಿದೆ ಎಂದರು.

    ಶಾಸಕ ದಿನಕರ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದಿಂದ ಬಹಳ ಹಿಂದಿನಿಂದಲೂ ಧಾರ್ವಿುಕ ಕ್ಷೇತ್ರ ಮಾತ್ರವಲ್ಲದೆ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಅತಿದೊಡ್ಡ ಕೊಡುಗೆ ನೀಡುತ್ತ ಬಂದಿದೆ. ನಮ್ಮ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಹಯೋಗ ಮುಂದೆಯೂ ದೊರಕಲಿ. ಹಾಗೆಯೇ ಕೋನಳ್ಳಿಯಂತಹ ಚಿಕ್ಕ ಗ್ರಾಮ ಸಂಘಟಿತ ಶ್ರಮದಿಂದ ಅದ್ಭುತಗಳನ್ನು ಸಾಧಿಸಿದೆ ಎಂದರು.

    ಸಮಿತಿ ಅಧ್ಯಕ್ಷ ಎಚ್.ಆರ್. ನಾಯ್ಕ ಮಾತನಾಡಿ, ಕೋನಳ್ಳಿ ಇದು ಪುಣ್ಯಭೂಮಿ, ಸಂಘಟಿತ ಪ್ರಯತ್ನಕ್ಕೆ ದೊರೆತ ಸಫಲತೆ ಹೆಮ್ಮೆ ತಂದಿದೆ. ಡಾ. ಹೆಗ್ಗಡೆಯವರು ನೀಡಿದ 12 ಲಕ್ಷ ರೂ. ಸಹಾಯ ಸಂಜೀವಿನಿಯಂತಾಗಿದ್ದು, ಅವರಿಗೆ ಸದಾ ಋಣಿಯಾಗಿದ್ದೇವೆ ಎಂದರು.

    ಚಿತ್ತಾರ ವಿಎಸ್​ಎಸ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಜಿನದತ್ತ ಗೌಡ, ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಜಿಲ್ಲಾ ನಿರ್ದೇಶಕ ಶಂಕರ ಶೆಟ್ಟಿ, ಉಮೇಶ ನಾಯ್ಕ, ಸುಧಾಕರ ನಾಯ್ಕ, ಮಾರುತಿ ನಾಯ್ಕ, ಮಾಸ್ತಿ ನಾಯ್ಕ, ಸರ್ವೆಶ್ವರ ನಾಯ್ಕ, ನಾಗೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ಉಪೇಂದ್ರ ನಾಯ್ಕ, ಶಂಕರ ನಾಯ್ಕ, ರಮೇಶ ನಾಯ್ಕ, ಪ್ರಗತಿಬಂಧು, ಸ್ತ್ರೀಶಕ್ತಿ ಸ್ವಸಹಾಯ ಗುಂಪು, ಜ್ಞಾನವಿಕಾಸ ಯೋಜನೆ ಸದಸ್ಯರು ಇದ್ದರು. ಮಾರುತಿ ನಾಯ್ಕ, ವಿಶ್ವನಾಥ ನಾಯ್ಕ ಹಾಗೂ ಯೋಜನಾಧಿಕಾರಿ ನಾಗರಾಜ ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts