More

    ಶಿಕ್ಷಣದಿಂದಲೇ ಅಭಿವೃದ್ಧಿ ಸರ್ ಎಂವಿ ಧ್ಯೇಯ

    ಪಂಚನಹಳ್ಳಿ: ದೇಶ ಕಟ್ಟುವ ಕೆಲಸಕ್ಕಾಗಿ ಇಡೀ ಜೀವನವನ್ನು ಮುಡುಪಾಗಿಟ್ಟದ್ದ ಸರ್ ಎಂ.ವಿಶ್ವೇಶ್ವರಯ್ಯ ಬದುಕು ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಅವರ ಮೊಮ್ಮಗ ಶೇಷಾದ್ರಿ ಮೋಕ್ಷಗೊಂಡಂ ಹೇಳಿದರು. ಪಂಚನಹಳ್ಳಿಯ ಸ್ನೇಹ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ದೇಶದ ಪ್ರಗತಿಗೆ ಶಿಕ್ಷಣ ಬಹಳ ಮುಖ್ಯ ಎಂದು ವಿಶ್ವೇಶ್ವರಯ್ಯ ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿದರು. ಕೈಗಾರಿಕೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ನಂಬಿದ್ದ ಅವರು ವಿವಿಧ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿದರು ಎಂದರು.

    ಹಳ್ಳಿಗಳಲ್ಲಿ ಯುವಕರು ಸಮಯ ವ್ಯರ್ಥ ಮಾಡದೆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಸರ್ ಎಂವಿ ಅವರ ಆಶಯವಾಗಿತ್ತು. ಹಾಗಾಗಿ ಹಳ್ಳಿಗಳಿಗೆ ತೆರಳಿ ಯುವಕರನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿದ್ದರು. ಹಳ್ಳಿಗಳನ್ನು ಸ್ವಾವಲಂಬನೆ ಮಾಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ರೂಪಿಸಿದ್ದರು ಎಂದು ತಿಳಿಸಿದರು. ನೆಹರು ಅವರಿಗೆ ವಿಶ್ವೇಶ್ವರಯ್ಯ ಆಪ್ತರಾಗಿದ್ದರು. ಆಡಳಿತದ ವಿಚಾರದಲ್ಲಿ ನೆಹರು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಪಂಚವಾರ್ಷಿಕ ಯೋಜನೆಗಳನ್ನು ಜಾರಿ ಮಾಡುವಾಗ ನೆಹರು ವಿಶ್ವೇಶ್ವರಯ್ಯ ಅವರ ಸಲಹೆ ಪಡೆಯುತ್ತಿದ್ದರು ಎಂದರು.

    ವಿಶ್ವೇಶ್ವರಯ್ಯ ಅವರು ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಶಿಸ್ತಿನ ಜೀವನ ಮತ್ತು ಕ್ರಮಬದ್ಧ ಆಹಾರ ಅವರ ಆರೋಗ್ಯದ ಗುಟ್ಟಾಗಿತ್ತು. ಸದಾ ಆಶಾವಾದಿಗಳಾಗಿದ್ದು ಸಕಾರಾತ್ಮವಾಗಿ ಚಿಂತನೆ ಮಾಡುತ್ತಿದ್ದರು. ದುಡ್ಡು, ಪ್ರಶಸ್ತಿ ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡದೆ ಆತ್ಮತೃಪ್ತಿಗಾಗಿ ಕೆಲಸ ಮಾಡಿದರು. ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಆ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯ ಮತ್ತು ದೇಶಗಳಲ್ಲೂ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ತಿಳಿಸಿದರು.

    ಅಮೆರಿಕದ ಪತ್ರಕರ್ತರೊಬ್ಬರು ವಿಶ್ವೇಶ್ವರಯ್ಯ ಅವರ ಸಂದರ್ಶನದ ವರದಿ ಬರೆಯುವಾಗ ಅವರಲ್ಲಿರುವ ಅಗಾಧ ಬುದ್ಧಿವಂತಿಕೆ ಬಗ್ಗೆ ತಿಳಿದುಕೊಳ್ಳಲು ಅವರ ಮಿದುಳನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದು ಬರೆದರು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಅಮೆರಿಕದವರು ವಿಶ್ವೇಶ್ವರಯ್ಯ ಅವರ ಮಿದುಳನ್ನು ಕೇಳಿದರಂತೆ ಎಂಬ ವದಂತಿ ಹರಡುತ್ತದೆ. ಅಮೆರಿಕದವರು ವಿಶ್ವೇಶ್ವರಯ್ಯ ಅವರ ಮಿದುಳು ಕೇಳಿದ್ದರು ಎಂಬುದು ಸತ್ಯಕ್ಕೆ ದೂರ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts