More

    ಶಿಕಾರಿಪುರದಲ್ಲಿ 50 ಸಾವಿರ ಮತಗಳ ಅಂತರದ ಗೆಲುವಿನ ಗುರಿ: ಬಿ.ವೈ.ವಿಜಯೇಂದ್ರ

    ಶಿರಾಳಕೊಪ್ಪ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
    ತೊಗರ್ಸಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆಯೂ ಸಾಕಷ್ಟು ಅಂತರದಿಂದ ಗೆಲ್ಲಿಸಿದ್ದೀರಿ. ಈ ಬಾರಿ ಪ್ರತಿಯೊಂದು ಬೂತ್‌ನಲ್ಲೂ ಹೆಚ್ಚು ಮತ ಗಳಿಸುವ ಕಾರ್ಯವಾಗಬೇಕಿದೆ. ಕಾರ್ಯಕತರ್ರು ಪಕ್ಕದ ಬೂತ್‌ನಲ್ಲಿ ಏನಾಗುತ್ತಿದೆ ಎಂದು ತಲೆಕೆಡಿಸಿಕೊಳ್ಳುವ ಬದಲು ನಿಮ್ಮ ನಿಮ್ಮ ಬೂತ್‌ನಲ್ಲಿ ಹೆಚ್ಚು ಮತ ಬರಲು ಗಮನ ಹರಿಸಿ ಎಂದು ಮನವಿ ಮಾಡಿದರು.
    ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಈಗಾಗಲೇ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. ಅಧಿಕಾರಕ್ಕೆ ಬರುವುದಾಗಿ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ಭವಿಷ್ಯ ನುಡಿದರು.
    ಮುಂಬರುವ ದಿನಗಳಲ್ಲಿಯೂ ನರೇಂದ್ರ ಮೋದಿ ಪ್ರಧಾನಿ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಕೇಂದ್ರದ ನಾಯಕರು ನನಗೆ ರಾಜ್ಯದ ಉಪಾಧ್ಯಕ್ಷ ಸ್ಥಾನ ನೀಡಿ ಉಪಚುನಾವಣೆಯಲ್ಲಿ ಕೆಲಸ ಮಾಡಲು ಹೇಳಿದರು. ಕೆ.ಆರ್.ಪೇಟೆಯಲ್ಲಿ ಈ ಹಿಂದೆ ಎಂದೂ ಬಿಜೆಪಿ ಗೆದ್ದಿರಲಿಲ್ಲ. ಹಾಗೆಯೇ ಶಿರಾ ಕ್ಷೇತ್ರದಲ್ಲಿ ಗೆಲ್ಲದ ಪಕ್ಷವನ್ನು ಗೆಲ್ಲಿಸಿದ್ದೇನೆ. ಇಂದು ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿ ಕೆಲಸ ನೋಡಿ ಇತರ ಪಕ್ಷಗಳ ಪ್ರಮುಖರು ಬಿಜೆಪಿಗೆ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಬಾರಿ ಮತದಾರರ ಮನಸ್ಸನ್ನು ಪರಿವರ್ತಿಸುವ ಕಾರ್ಯದ ಜತೆಗೆ ಮತದಾನ ಮಾಡುವ ಅಹರ್ತೆ ಪಡೆದಿರುವ ಮತದಾರರ ಹೆಸರನ್ನು ಸೇರಿಸುವ ಕಾರ್ಯ ವಾಗಬೇಕು ಎಂದು ಹೇಳಿದರು.
    ಈಗ ಯಡಿಯೂರಪ್ಪ ಅವರ ಮನದಾಳದ ಮಾತಿನಂತೆ ಹಾಗೂ ತಾಲೂಕಿನ ಸಾವಿರಾರು ಕಾರ್ಯಕತರ್ರ ಆಸೆಯಂತೆ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿಯಾಗಬೇಕು ಎಂದು ಹೇಳಿದರು. ಆ ಮಾತಿಗೆ ಯಾವ ಬೆಲೆಯನ್ನೂ ಕಟ್ಟಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರು ಎರಡು ಕಿವಿಮಾತು ಹೇಳಿದ್ದು ನೀನು ಬರುವ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಯ ರಥವನ್ನು ಎಳೆದುಕೊಂಡು ಹೋಗಬೇಕು. ಹಾಗೆಯೇ ತಾಲೂಕಿನ ಜನತೆಯ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.
    ರಕ್ತದ ಬದಲು ನೀರು ಹರಿಸಿದ ಬಿಎಸ್‌ವೈ: ಈ ಹಿಂದೆ ಯಡಿಯೂರಪ್ಪ ಅವರು ಪುರಸಭೆ ಅಧ್ಯಕ್ಷರಿದ್ದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಅಂದು ನೆಲದಲ್ಲಿ ರಕ್ತ ಹರಿದಿತ್ತು. ಅದೇ ಯಡಿಯೂರಪ್ಪ ರಕ್ತದ ಬದಲಿಗೆ ನೀರು ಹರಿಸಿದರು. ಅಂದು ಯಾವುದೇ ಗೂಂಡಾಗಿರಿಗೆ ಹೆದರದೆ ಸಮಗ್ರ ಅಭಿವೃದ್ಧಿಯ ಜತೆಗೆ 850 ಕೋಟಿ ರೂ. ವೆಚ್ಚಮಾಡಿ 300 ಗ್ರಾಮಗಳಿಗೆ ನೀರು ಹರಿಸಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ತಾಲೂಕಿನಲ್ಲಿ ನೀರಾವರಿ ಯೋಜನೆ ತರಲು ಪ್ರಯತ್ನಿಸಿದಾಗ ಹಿರೇಮಠ ಅಂತಹವರು ಕಲ್ಲು ಹಾಕುವಂತಹ ಕೆಲಸ ಮಾಡಿದರು. ಅಂತಹ ವ್ಯಕ್ತಿಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿದರು ಎಂದು ದೂರಿದರು. ನರೇಂದ್ರ ಮೋದಿ ಸರ್ಕಾರ ದೇಶದ ಬೆನ್ನೆಲಬು ರೈತ ಎಂದು ಹೇಳಿ ರೈತರು ಉಪಯೋಗಿಸುವ ರಸಗೊಬ್ಬರಕ್ಕೆ 2 ಲಕ್ಷ ಕೋಟಿ ರೂ. ಸಬ್ಸಿಡಿ ನೀಡುತ್ತಿದೆ. ಪ್ರತಿ ಮೂರು ತಿಂಗಳಿಗೆ ಕೇಂದ್ರ ಸರ್ಕಾರ 2 ಸಾವಿರ ರೂ. ಸಂದಾಯ ಮಾಡುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts