More

    ಶಾಹೀನ್ ಬಂಧಿತರಿಗೆ ಜಾಮೀನು

    ಬೀದರ್: ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿ ಎರಡು ವಾರಗಳಿಂದ ಜಿಲ್ಲಾ ಕಾರಾಗೃಹದಲ್ಲಿದ್ದ ಶಾಹೀನ್ ಶಾಲೆ ಮುಖ್ಯ ಗುರು ಫರೀದಾಬೇಗಂ ಹಮೇದ್ ಅಲಿ ಮತ್ತು ನಾಟಕ ಪ್ರದರ್ಶಿಸಿದ ವಿದ್ಯಾರ್ಥಿ ನಿಯೊಬ್ಬಳ ತಾಯಿ ನಾಜಮುನ್ನೀಸಾ ಬೇಗಂ ಇಜಾಜ್ ಅವರಿಗೆ ಜಾಮೀನು ಸಿಕ್ಕಿದ್ದು, ಶುಕ್ರವಾರ (ಜುಮ್ಮಾ) ಶುಭವಾಗಿ ಪರಿಣಮಿಸಿದೆ.
    ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮನಗೂಳಿ ಪ್ರೇಮಾವತಿ ಅವರು ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ ಜ.30ರಿಂದ ಇವರಿಬ್ಬರೂ ನ್ಯಾಯಾಂಗ ವಶದಲ್ಲಿದ್ದರು. ಕಳೆದ 12ರಂದು ಇವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಪೂರ್ವನಿಗದಿಯಂತೆ ಶುಕ್ರವಾರ ತೀರ್ಪು ಪ್ರಕಟವಾಗಿದೆ. ಅರ್ಜಿದಾರರ ಪರವಾಗಿ ನ್ಯಾಯವಾದಿ ನಾರಾಯಣ ಗಣೇಶ್ ವಾದಿಸಿದ್ದರು.
    ಇಬ್ಬರಿಗೂ ತಲಾ 2 ಲಕ್ಷ ರೂ. ವೈಯಕ್ತಿಕ ಸುರಕ್ಷತಾ ಬಾಂಡ್, ಇಬ್ಬರ ಸ್ಯೂರಿಟಿ ನೀಡಬೇಕು. ತನಿಖಾಧಿಕಾರಿಗಳು ಕರೆದಾಗ ಹಾಜರಾಗುವ ಜತೆಗೆ ವಿಚಾರಣೆಗೂ ಪೂರ್ಣ ಸಹಕಾರ ನೀಡಬೇಕು. ಸಾಕ್ಷಿ ಸೇರಿ ಯಾರ ಮೇಲೂ ಪ್ರಭಾವ ಬೀರುವ, ಒತ್ತಡ ಹೇರುವ ಕೆಲಸ ಮಾಡಕೂಡದು. ನ್ಯಾಯಾಲಯ ನಿಗದಿಪಡಿಸುವ ದಿನ ಕಡ್ಡಾಯ ವಿಚಾರಣೆಗೆ ಹಾಜರಾಗಬೇಕು. ಪ್ರಕರಣ ಇತ್ಯರ್ಥ ಆಗುವವರೆಗೆ ಕೋರ್ಟ್ ಅನುಮತಿ ಇಲ್ಲದೆ ನಗರ ಬಿಡತಕ್ಕದ್ದಲ್ಲ. ಸೂಕ್ತ ದಾಖಲೆಗಳೊಂದಿಗೆ ಕಾಯಂ ವಿಳಾಸದ ವಿವರ ಸಲ್ಲಿಸಬೇಕು. ಒಂದೊಮ್ಮೆ ನಿವಾಸ ಬದಲಿಸಿದ್ದೇ ಆದಲ್ಲಿ ಹೊಸ ವಿಳಾಸದ ವಿವರ ಕೋರ್ಟ್ ಗೆ ಸಲ್ಲಿಸಬೇಕು ಎಂಬಿತ್ಯಾದಿ ಷರತ್ತು ಹಾಕಲಾಗಿದೆ.
    ಪ್ರಕರಣದಲ್ಲಿ ಈವರೆಗೆ ಇವರಿಬ್ಬರು ಮಾತ್ರ ಬಂಧಿತರಾಗಿದ್ದರು. ಹೀಗಾಗಿ ಇವರ ಜಾಮೀನು ವಿಷಯ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಎರಡು ವಾರಗಳಿಂದ ನ್ಯಾಯಾಂಗ ಬಂಧನಕ್ಕೊಳಗಾಗಿ ಜಿಲ್ಲಾ ಕಾರಾಗೃಹದಲ್ಲಿರುವ ಇವರಿಗೆ ಕಾಂಗ್ರೆಸ್, ಎಂಐಎಂ ಸೇರಿ ವಿವಿಧ ಪಕ್ಷ, ಸಂಘಟನೆಯ ಅನೇಕ ನಾಯಕರು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಆದರೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇಬ್ಬರ ಮೊಗದಲ್ಲಿ ಶುಕ್ರವಾರ ಸಂಜೆ ಜಾಮೀನು ಸಿಕ್ಕ ನಂತರ ಮಂದಹಾಸ ಮೂಡಿದೆ. ಜಾಮೀನು ದೊರಕಿ ಜೈಲಿನಿಂದ ಬಿಡುಗಡೆಯಾಗುವ ಸುದ್ದಿ ಗೊತ್ತಾಗುತ್ತಲೇ ಇಬ್ಬರೂ ಖುಷಿಯಿಂದ ಪ್ರಾರ್ಥನೆ ಸಲ್ಲಿಸಿದರು.
    ಕೋರ್ಟ್​ ಜಾಮೀನು ಆದೇಶದ ಪ್ರತಿ ಜಿಲ್ಲಾ ಕಾರಾಗೃಹಕ್ಕೆ ತಲುಪಿ, ಅಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಬೇಕು. ಹೀಗಾಗಿ ಶನಿವಾರ ಮಧ್ಯಾಹ್ನದ ವೇಳೆಗೆ ಇವರಿಬ್ಬರೂ ಜೈಲಿನಿಂದ ಹೊರಬರಲಿದ್ದಾರೆ. ನಾಜಮುನ್ನೀಸಾ ಬೇಗಂ ವಿಧವೆಯಾಗಿದ್ದು, ಇವರ ಏಕೈಕ 11 ವರ್ಷದ ಮಗಳು ಅನಾಥಳಾಗಿ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಈಕೆ ಮಾನಸಿಕವಾಗಿ ಜರ್ಜರಿತಳಾಗಿದ್ದು, ಪರೀಕ್ಷೆಗೂ ಹಾಜರಾಗಿಲ್ಲ. ತಾಯಿಗೆ ಜಾಮೀನು ಸಿಕ್ಕಿದ ಸುದ್ದಿ ಈಕೆಗೂ ಸಂಭ್ರಮದಲ್ಲಿ ತೇಲಾಡಿಸುತ್ತಿದ್ದು, ಅಮ್ಮಿ ಭೇಟಿಗೆ ಕಾತರಳಾಗಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts