More

    ಶಾಸಕರಿಗೆ ಮಂತ್ರಿಯಾಗುವ ಆಸೆ ಸಹಜ

    ಗದಗ: ಮಂತ್ರಿ ಆಗಬೇಕೆನ್ನುವುದು ಎಲ್ಲ ಶಾಸಕರಲ್ಲಿ ಆಸೆ ಇರುವುದು ಸಹಜ. ಐದು ಬೆರಳು ಸಮ ಇಲ್ಲ. ಕೆಲವರು ತಮ್ಮ ಆಸೆ ಆಕಾಂಕ್ಷೆಗಳನ್ನು ಹೊರಹಾಕಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆ ಮಾಡುತ್ತಾರೋ ಗೊತ್ತಿಲ್ಲ. ಇದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿರುವ ಸಂಗತಿ. ಶಾಸಕರು ವರಿಷ್ಠರನ್ನು ಭೇಟಿ ಮಾಡುವುದು ತಮ್ಮ ಅಹವಾಲು ತೋಡಿಕೊಳ್ಳುವುದು ನಡೆದಿದ್ದು, ಈ ಕುರಿತು ಹೈಕಮಾಂಡ್ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.

    ಸಿಎಂ ಬದಲಾವಣೆ ಸತ್ಯಕ್ಕೆ ದೂರ: ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ ಇಲ್ಲ. ಅದು ಸತ್ಯಕ್ಕೆ ದೂರವಾದ ಸಂಗತಿ. ಈಗಾಗಲೇ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಸ್ಪಷ್ಟನೆ ನೀಡಿದ್ದಾರೆ. 2023ರ ವಿಧಾನಸಭೆ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಬಿ.ಸಿ. ಪಾಟೀಲ ಹೇಳಿದರು.

    ಬಸವರಾಜ ಬೊಮ್ಮಾಯಿ ಅವರಿಗೆ ಆರು ತಿಂಗಳು ಅವಧಿ ನೀಡಲಾಗಿತ್ತು, ಇದೀಗ ಅವಧಿ ಪೂರ್ಣಗೊಂಡಿದ್ದು, ಸಿಎಂ ಬದಲಾವಣೆ ಮಾಡಲಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿ.ಸಿ.ಪಾಟೀಲ, ಆರು ತಿಂಗಳ ಮುಖ್ಯಮಂತ್ರಿ ಅಂತ ಕಾಂಗ್ರೆಸ್​ನವರಿಗೆ ಯಾರಾದ್ರೂ ಬರೆದುಕೊಟ್ಟಿದ್ರಾ ಎಂದು ಸಿಡಿಮಿಡಿಗೊಂಡರು.

    ಕಾಂಗ್ರೆಸ್ ಕಾಲ ಕೆಳಗೆ ಹಳ್ಳ ಕೊರೆಯಲಾರಂಭಿಸಿದ್ದು, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ ಕಚ್ಚಾಟ ತೀವ್ರಗೊಂಡಿದೆ. ಕಾಂಗ್ರೆಸ್ ಅಧಃಪತನ ಮತ್ತಷ್ಟು ಹೆಚ್ಚಿದೆ. ದೇಶದ ಬಹುತೇಕ ಕಡೆಗೆ ಕಾಂಗ್ರೆಸ್ ಮಾಯವಾಗಿದೆ. ಶೀಘ್ರವೇ ಕರ್ನಾಟಕದಲ್ಲಿ ಸಹ ಕಾಂಗ್ರೆಸ್ ಮುಳುಗಲಿದೆ ಎಂದರು

    ಅಭಿವೃದ್ಧಿಯಾಗಲು ಬದಲಾವಣೆ ಆಗಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಅವರ ಸ್ವಂತ ವಿಚಾರ. ಎಲ್ಲರೂ ಅವರವರ ಅಭಿಪ್ರಾಯ ಹೇಳಬಹುದು. ಅದರಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ಯಾವ ಸಚಿವರು ಸ್ಪಂದಿಸಿಲ್ಲ ಎಂದು ಶಾಸಕ ರೇಣುಕಾಚಾರ್ಯ ಅವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಎಲ್ಲ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಯತ್ನಾಳ ಹೇಳಿದ್ದಾರೆ. ಒಬ್ಬ ಶಾಸಕ ಹೀಗೆ ಹೇಳಿದರೆ ಮತ್ತೊಬ್ಬ ಶಾಸಕರ ಅಭಿಪ್ರಾಯ ಭಿನ್ನವಾಗಿದೆ. ರೇಣುಕಾಚಾರ್ಯ ಅವರಿಗೆ ಮಂತ್ರಿ ಆಗುವ ಆಸೆ ಇದೆ. ಆಸೆ ಈಡೇರಿಲ್ಲ ಎಂದು ಹೀಗೆ ಹೇಳುತ್ತಿರಬಹುದು ಎಂದು ತಿರುಗೇಟು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts