More

    ಶಾಲೆ, ದೇವಸ್ಥಾನಗಳಂತೆ ಮಠಗಳು ಬೇಕು: ಬೆಕ್ಕಿನಕಲ್ಮಠ ಶ್ರೀ

    ಆಯನೂರು: ಮಠ ಮಾನ್ಯಗಳು ಸಮಾಜದ ಕನ್ನಡಿ ಇದ್ದಂತೆ. ಜನ ಹಾಗೂ ಮಠಗಳ ನಡುವೆ ಅವಿನಾಭಾವ ಸಂಬಂಧವಿದೆ. ಮಠಗಳು ಬೆಳೆದಂತೆ ಸಮಾಜವೂ ಬೆಳೆಯುತ್ತದೆ ಎಂದು ಆನಂದಪುರ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
    ಶುಕ್ರವಾರ ಹಾರನಹಳ್ಳಿಯಲ್ಲಿ ಚೌಕಿ ಮಠದ ಪ್ರಧಾನ ಮಹಾದ್ವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಮಠಗಳು ಇಂದು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿವುದರಿಂದ ಸರ್ಕಾರಗಳು ಅನುದಾನ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿವೆ ಎಂದರು.
    ಊರಿಗೊಂದು ಶಾಲೆ, ದೇವಸ್ಥಾನವಿರುವಂತೆ ಗ್ರಾಮದಲ್ಲಿ ಮಠ ಇರಬೇಕು. ಗ್ರಾಮದಲ್ಲಿ ಮಠವಿದ್ದರೆ ಅದು ಮಹಾದ್ವಾರವಿದ್ದಂತೆ. ಮನುಷ್ಯ ಜೀವನದಲ್ಲಿ ಗುರಿ ಮುಟ್ಟಲು ಮಠ ಸಹಕಾರಿಯಾಗಿದೆ. ಹಿಂದೆ ಜನರಲ್ಲಿ ಸತ್ತಮೇಲೆ ಮುಕ್ತಿ ಸಿಗುವುದೆಂಬ ನಂಬಿಕೆಯಿಂದ ಮಠದ ಸುತ್ತ ರುದ್ರಭೂಮಿ ಇರುತ್ತಿದ್ದವು. ಈ ಮಠದಲ್ಲಿ ಇಬ್ಬರು ಗುರುಗಳ ಗದ್ದುಗೆ ಇರುವುದರಿಂದ ಹಾರನಹಳ್ಳಿಯ ಚೌಕಿ ಮಠಕ್ಕೆ ವಿಶೇಷ ಸ್ಥಾನವಿದೆ. ಮೊದಲು ಚೌಕಿ ಮಠ ತುಂಬ ಶಿಥಿಲಾವಸ್ಥೆಯಲ್ಲಿತ್ತು. ಅರ್ಚಕರ ಕೊರತೆ ಇತ್ತು. ಇದನ್ನು ನೀಲಕಂಠ ಸ್ವಾಮೀಜಿ ಬಂದು ಮಠವನ್ನು ಅಭಿವೃದ್ಧಿಗೊಳಿಸಿದರು ಎಂದು ಹೇಳಿದರು.
    ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿ, ಮಠಗಳಿಂದ ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದೆ. ಯಡಿಯೂರಪ್ಪ ಅವರ ವಿಶೇಷ ಆಸಕ್ತಿಯಿಂದ ಹಾಗೂ ಸರ್ಕಾರದಿಂದ ಇಂದಿನ ದಿನಗಳಲ್ಲಿ ಮಠಗಳಿಗೆ ಹೆಚ್ಚಿನ ಅನುದಾನ ದೊರಕಿದೆ. ಸರ್ಕಾರ ಮಾಡುವಂತಹ ಅನೇಕ ಕೆಲಸಗಳನ್ನು ಮಠಗಳು ಮಾಡುತ್ತಿವೆ. ಇಂದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಉಳಿದಿದೆ ಎಂದರೆ ಅದು ಮಠಗಳಿಂದಲೇ ಎಂದು ಅಭಿಪ್ರಾಯಪಟ್ಟರು.
    ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ ಮಾತನಾಡಿ, ಈ ಮಠಕ್ಕೆ ಬಂದು 16 ವರ್ಷಗಳಾಯಿತು. 2018ರಲ್ಲಿ ನನಗೆ ಪಟ್ಟಾಭಿಷೇಕ ನೆರವೇರಿತು. ಮಠದ ಅಭಿವೃದ್ಧಿಗೆ ಸರ್ಕಾರದಿಂದ ಕೋಟಿ ರೂ.ಗೂ ಅಧಿಕ ಅನುದಾನ ಸಿಕ್ಕಿದೆ. ಭಕ್ತರ ಸಹಕಾರದಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts