More

    ಶಾಲಾ ಪ್ರಾರಂಭಕ್ಕೆ ಸಕಲ ಸಿದ್ಧತೆ

    ಹುಣಸೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ.31ರಂದು ಆರಂಭಗೊಳ್ಳಲಿದ್ದು, ತಾಲೂಕಿನಲ್ಲಿ ಶಾಲೆಗಳ ಪ್ರಾರಂಭಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ತಿಳಿಸಿದರು.


    ಶೈಕ್ಷಣಿಕ ವರ್ಷ ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳನ್ನು ಒಳಗೊಂಡಂತೆ ಒಟ್ಟು 396 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. 1ರಿಂದ 10ನೇ ತರಗತಿವರೆಗೆ ಒಟ್ಟು 41,948 ವಿದ್ಯಾರ್ಥಿಗಳಿದ್ದಾರೆ. ಶಾಲೆ ಆರಂಭವನ್ನು ಹಬ್ಬವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.


    ಶಾಲೆಗಳಲ್ಲಿ ಶಿಕ್ಷಕರು ಈಗಾಗಲೇ ಸ್ವಚ್ಛತೆಯತ್ತ ಗಮನಹರಿಸಿದ್ದಾರೆ. ಶಾಲಾ ಆವರಣದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ಕಾಗಿ ಆಯಾ ಗ್ರಾ.ಪಂ.ಗಳ ಸಹಾಯ ಪಡೆಯಲು ಸೂಚಿಸಲಾಗಿದೆ. ಅಕ್ಷರ ದಾಸೋಹ ಕೊಠಡಿಯ ಶುಚಿತ್ವವನ್ನು ಕಾಪಾಡಿಕೊಳ್ಳಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದ್ದು, ಪ್ರಾರಂಭದ ದಿನದಿಂದಲೇ ವಿತರಿಸಲಾಗುತ್ತದೆ ಎಂದರು.


    ಅಧಿಕಾರಿಗಳ ಮಿಂಚಿನ ಸಂಚಾರ: ಇಲಾಖೆಯ ಅನುಪಾಲನಾ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳ ಭೇಟಿಯನ್ನು ನಿಗದಿಪಡಿಸಲಾಗಿದೆ. ವಿವಿಧ ತಂಡಗಳ ಮೂಲಕ ಪೂರ್ವ ಸಿದ್ಧತೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಯ ಬಗ್ಗೆ ಪರಿಚಯಿಸಲು ಪ್ರತಿ ಶಾಲೆಗಳಿಗೆ ಭೇಟಿ ನೀಡುವಂತೆ ವೇಳಾಪಟ್ಟಿ ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಆದೇಶಿಸಲಾಗಿದೆ. ಶಾಲೆ ಪ್ರಾರಂಭದ ದಿನ ಮಕ್ಕಳಿಗೆ ಸಿಹಿ ವಿತರಿಸುವುದರ ಜತೆಗೆ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸುವಂತೆ ತಿಳಿಸಲಾಗಿದೆ ಎಂದರು.


    ದಾಖಲಾತಿ ಆಂದೋಲನ: ಜೂನ್ ಅಂತ್ಯದವರೆಗೆ ಶಾಲಾ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಮಾಡುವಂತೆ ತಿಳಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಶಿಕ್ಷಿತರನ್ನಾಗಿಸಲು ಸಹಕರಿಸಬೇಕೆಂದು ಕೋರಿದರು.
    ಕ್ಷೇತ್ರ ಸಮನ್ವಯಾದಿಕಾರಿ ಕೆ.ಸಂತೋಷ್‌ಕುಮಾರ್, ಬಿಆರ್‌ಪಿಗಳು, ಸಿಆರ್‌ಪಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts