More

    ಶರಾವತಿ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್‌ನ ಪಾಪದ ಕೂಸು: ಹರತಾಳು ಹಾಲಪ್ಪ ಕಿಡಿ

    ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಈಗ ಅದನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. 60 ವರ್ಷ ಆಳ್ವಿಕೆ ಮಾಡಿದ ಅವರು ಈ ಸಮಸ್ಯೆ ಪರಿಹಾರಕ್ಕೆ ಏನು ಪ್ರಯತ್ನ ಮಾಡಿದ್ದಾರೆ ಎಂಬುದನ್ನು ಜನತೆಗೆ ತಿಳಿಸಲಿ ಎಂದು ಶಾಸಕ ಹರತಾಳು ಹಾಲಪ್ಪ ಸವಾಲು ಎಸೆದರು.
    ಕಾಗೋಡು ತಿಮ್ಮಪ್ಪ ರಾಜ್ಯದಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಮುಖಂಡರಾಗಿ, ಕಂದಾಯ, ಅರಣ್ಯ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೇಕೆ ತಮ್ಮ ಆಡಳಿತ ಅವಧಿಯಲ್ಲಿ ಸಂತ್ರಸ್ತರ ಸಮಸ್ಯೆಯ ಪರಿಹಾರಕ್ಕೆ ಮುಂದಾಗಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ಕಾಗೋಡು ತಿಮ್ಮಪ್ಪ ವಾಸ್ತವ ಮರೆಮಾಚಬಾರದು. ತಮ್ಮ ಶಿಷ್ಯರ ಬಾಯಿಗೆ ಮೊದಲು ಬೀಗ ಹಾಕಬೇಕು. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಂಸದರು ಇದಕ್ಕೊಂದು ತಾರ್ಕಿಕ ಅಂತ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ನಾನು ಸಹ ಈ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿದ್ದು, ಮುಳುಗಡೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಿದ್ದೇನೆ ಎಂದರು.
    ಕಾಗೋಡು ತಿಮ್ಮಪ್ಪ ಅವರ ಶಿಷ್ಯರು ಮನಬಂದಂತೆ ಮಾತನಾಡುತ್ತಾ ಮುಳುಗಡೆ ಸಂತ್ರಸ್ತರ ಕುರಿತು ದಿನಕ್ಕೊಂದು, ಕ್ಷಣಕ್ಕೊಂದು ಹೇಳಿಕೆ ನೀಡಿ ಜನರಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಶರಾವತಿ ಮುಳುಗಡೆ ಸಂತ್ರಸ್ತರು ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲೇ ಇದ್ದರೂ, ಅವರನ್ನು ಗುರುತಿಸಿ ಭೂಹಕ್ಕು ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ. ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ಜಮೀನಿನ ವಿವರವನ್ನು ತಹಸೀಲ್ದಾರ್‌ಗೆ ಸಲ್ಲಿಸಲಿ. ಅಗತ್ಯ ಬಿದ್ದರೆ ನಮ್ಮ ಕಚೇರಿಯಲ್ಲಿ ಸಹ ಇದಕ್ಕಾಗಿ ಪ್ರತ್ಯೇಕ ವಿಭಾಗ ತೆರೆದು ಅರ್ಜಿ ಸ್ವೀಕರಿಸಲಾಗುವುದು. ಕಾಂಗ್ರೆಸ್‌ನವರು ತಮಗೆ ಬೇಕಾದವರಿಗೆ ಭೂಹಕ್ಕು ಕೊಡುವ ಪ್ರಯತ್ನ ಮಾಡಿದ್ದಾರೆ. ಒಟ್ಟು 24,527 ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಎಲ್ಲೆಲ್ಲಿ ಸಂತ್ರಸ್ತರು ವಾಸವಾಗಿದ್ದಾರೋ ಅಲ್ಲೆ ಹಕ್ಕುಪತ್ರ ಕೊಡಲು ಚಿಂತನೆ ನಡೆದಿದೆ. . ಅಗತ್ಯ ದಾಖಲೆಗಳನ್ನು ಒದಗಿಸಲು ರೈತರು ಸಹಕರಿಸಬೇಕು. ಸಂತ್ರಸ್ತರಿಗೆ ಈ ಕುರಿತಂತೆ ತಿಳುವಳಿಕೆಯನ್ನು ಸಹ ನೀಡಲಾಗುತ್ತಿದೆ ಎಂದರು.
    ಕಾಂಗ್ರೆಸ್ ಕಚೇರಿ ಕಡೆ ತಲೆ ಹಾಕಿಲ್ಲ: 2003ರಲ್ಲಿ ನಾನು ಕಾಂಗ್ರೆಸ್ ತೊರೆದಿದ್ದೇನೆ. ನಂತರ ಕಾಂಗ್ರೆಸ್ ಕಚೇರಿ ಕಡೆ ತಲೆ ಹಾಕಿಲ್ಲ. ನಾನು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ಮಾಡಿದ್ದೇ ಎನ್ನುವುದು ಶುದ್ಧ ಸುಳ್ಳು. ಟಿಕೆಟ್‌ಗಾಗಿ ನಾನು ಕಾಗೋಡು ತಿಮ್ಮಪ್ಪ ಅವರನ್ನು ಸಂಪರ್ಕಿಸಿರಲಿಲ್ಲ. ಒಂದೊಮ್ಮೆ ನಾನು ಸಂಪರ್ಕಿಸಿದ್ದನ್ನು ಬಿ.ಆರ್. ಜಯಂತ್ ಸಾಬೀತು ಮಾಡಿದರೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹರತಾಳು ಹಾಲಪ್ಪ ಸವಾಲು ಹಾಕಿದರು. ಮದ್ಯದ ಅಂಗಡಿಗೆ ಡಾ.ರಾಜನಂದಿನಿ ಮತ್ತು ಸಹೋದರಿ ಪರವಾನಗಿ ಕೇಳಿರುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಕಾಗೋಡು ತಿಮ್ಮಪ್ಪನವರು ನಮ್ಮನ್ನು ಮಾತ್ರ ಮದ್ಯದ ವ್ಯಾಪಾರ ಮಾಡುವವರು ಎಂದು ಟೀಕಿಸುವುದು ಎಷ್ಟು ಸರಿ. ಈ ಹಿಂದೆ ಅವರನ್ನು ಪರಾಭವಗೊಳಿಸಿ ಶಾಸಕರಾದವರು ಏನು ವ್ಯಾಪಾರ ಮಾಡುತ್ತಿದ್ದರು. ಸಾರ್ವಜನಿಕವಾಗಿ ಇಂತಹ ಪ್ರಶ್ನೆಗಳನ್ನು ಪ್ರಸ್ತಾಪಿಸುವುದು ಒಳ್ಳೆಯದಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts