More

    ಶರಣ ಸಾಹಿತ್ಯದಿಂದ ಮೌಲ್ಯ ಹೆಚ್ಚಳ -ಶಿವಾನಂದ ಗುರೂಜಿ – ಡಾ.ಫ.ಗು.ಹಳಕಟ್ಟಿ ಜಯಂತ್ಯುತ್ಸವ

    ದಾವಣಗೆರೆ: ಪ್ರಕೃತಿಯ ಪ್ರತಿಬಿಂಬ ಶರಣ ಸಾಹಿತ್ಯದಲ್ಲಿದೆ. ಅದನ್ನು ಅನುಸರಿಸಿದರೆ ಜೀವನ ಮೌಲ್ಯಗಳು ಹೆಚ್ಚಲಿವೆ ಎಂದು ಶಿರಮಗೊಂಡನಹಳ್ಳಿಯ ಬಸವ ಗುರು ತಪೋವನದ ಶಿವಾನಂದ ಗುರೂಜಿ ಹೇಳಿದರು.
    ಶರಣ ಸಾಹಿತ್ಯ ಪರಿಷತ್‌ನ ದಾವಣಗೆರೆ ಜಿಲ್ಲಾ ಘಟಕದಿಂದ ಇಲ್ಲಿನ ಎಆರ್‌ಜಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿಯವರ ಜಯಂತ್ಯುತ್ಸವ ಹಾಗೂ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬುದ್ಧಿ ಪ್ರಾಬಲ್ಯ ಹೊಂದಿದ ಬಹುತೇಕರು ಇಂದಿಗೂ ಪುರಾಣ ಕಾಲದಿಂದ ಬಂದ ದೇವರನ್ನು ಪೂಜಿಸುತ್ತಿದ್ದಾರೆ. ಬಸವಣ್ಣನವರು ಹೇಳಿದ ಇಷ್ಟಲಿಂಗ ಪೂಜೆ ಮಾಡುತ್ತಿಲ್ಲ. ಅಜ್ಞಾನದ ತೊಟ್ಟಿಲನ್ನು ತೊಡೆದುಹಾಕಿ ನಿಜವಾದ ಜ್ಞಾನ ಅರಿತರೆ, ವಚನ ಸಾಹಿತ್ಯ ತಿಳಿದುಕೊಂಡರೆ ಅದರಿಂದ ಸಮಾಜ ಸುಧಾರಣೆ ಆಗಲಿದೆ ಎಂದು ಹೇಳಿದರು.
    ನಮ್ಮೊಳಗಿನ ಅರಿಷಡ್ವರ್ಗಗಳನ್ನು ಉದಾತ್ತೀಕರಣಗೊಳಿಸುವುದೇ ಶರಣ ಸಾಹಿತ್ಯದ ಪರಿಕಲ್ಪನೆಯಾಗಿತ್ತು. ನಮ್ಮತನ ಕಳೆದುಕೊಂಡಿರುವ ಇಂದಿನ ಹಬ್ಬ ಹರಿದಿನಗಳು ಪ್ರಾಯಶ್ಚಿತ್ತದ ಆಚರಣೆಗಳಾಗಿವೆ. ಶರಣ ಸಾಹಿತ್ಯ ಒಂದರಿಂದಲೇ ಪಶ್ಚಾತ್ತಾಪ ಸಿಗಲಿದೆ ಎಂದು ಹೇಳಿದರು.
    ಅರಿವು, ಆಚಾರ, ಅನುಭಾವ, ಕಾಯಕ ಮತ್ತು ದಾಸೋಹ ಈ ಪಂಚ ತತ್ವಗಳೇ ಎಲ್ಲ ವಚನ ಸಂಪುಟದ ಆಶಯವಾಗಿದೆ. ಈ ಎಲ್ಲ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಕುಟುಂಬ, ಸಮಾಜದೊಂದಿಗೆ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದರು.
    12ನೇ ಶತಮಾನದಲ್ಲಿ ಹೆಣ್ಣುಮಕ್ಕಳು, ಹರಿಜನರಿಗೆ ದೀಕ್ಷೆ ಅವಕಾಶ ಇಲ್ಲದ್ದನ್ನು ಬಾಲ್ಯಾವಸ್ಥೆಯಲ್ಲೇ ಬಸವಣ್ಣನವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಬ್ರಾಹ್ಮಣ್ಯತ್ವದಲ್ಲಿನ ಕೆಲ ಆಚರಣೆಗಳನ್ನು ವಿರೋಧಿಸಿದರೇ ಹೊರತಾಗಿ ಬ್ರಾಹ್ಮಣ್ಯತ್ವವನ್ನಲ್ಲ ಎಂದು ಹೇಳಿದರು.
    ಫ.ಗು.ಹಳಕಟ್ಟಿಯವರು ಬೈಸಿಕಲ್‌ನಲ್ಲೇ ಪ್ರಯಾಣ ಮಾಡಿ ಬೆಳಗಾವಿ, ಧಾರವಾಡ ಇತರೆಡೆಗಳಲ್ಲಿ ಇದ್ದ ವಚನಗಳನ್ನು ತಂದು ಸಂಗ್ರಹಿಸಿ ಶಿವಾನುಭವ ಪತ್ರಿಕೆ ಮೂಲಕ ಪ್ರಕಟಿಸಿದರು. ಸ್ವಂತ ಮುದ್ರಣಾಲಯ ತೆರೆದು ವಚನಗಳನ್ನು ಮುದ್ರಿಸಿ ಸಂರಕ್ಷಿಸಿದರು ಎಂದು ಸ್ಮರಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ವಚನ ಸಂಶೋಧಕ ಫ. ಗು.ಹಳಕಟ್ಟಿಯವರ ಪರಿಶ್ರಮದಿಂದಾಗಿ ಶರಣರ ಅಮೂಲ್ಯವಾದ ವಚನಗಳು ನಮಗಿಂದು ಸುಲಭವಾಗಿ ಸಿಗುತ್ತಿವೆ. ವಚನ ಸಂರಕ್ಷಣೆಯ ಪರಂಪರೆಯನ್ನು ನಾವು ಮುಂದುವರಿಸಬೇಕಿದೆ ಎಂದರು.
    ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ವಿನೋದಾ ಅಜಗಣ್ಣನವರ್, ಎಆರ್‌ಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಬೊಮ್ಮಣ್ಣ, ಕನ್ನಡ ವಿಭಾಗ ಮುಖ್ಯಸ್ಥ ಡಿ.ಬಿ.ಬಸವರಾಜ್, ಉಪನ್ಯಾಸಕಿ ಎನ್.ಬಿ.ಜಯಶೀಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts