More

    ಶಕ್ತಿದೇವತೆಗಳ ಪುರ ಪ್ರವೇಶಕ್ಕೆ ಭವ್ಯ ಸ್ವಾಗತ

    ಚಿತ್ರದುರ್ಗ: ಕೋಟೆನಗರಿಯ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಗಳಾದ ಏಕನಾಥೇಶ್ವರಿ, ತಿಪ್ಪಿನಘಟ್ಟಮ್ಮ, ಅಂತರಘಟ್ಟಮ್ಮ ದೇವಿಯರ ಕಡೇ ಕಾರ್ತಿಕ ದೀಪೋತ್ಸವದ ಅಂಗವಾಗಿ ರಾಜ ಬೀದಿಗಳಲ್ಲಿ ಮಂಗಳವಾರ ಭವ್ಯ ಮೆರವಣಿಗೆ ಜರುಗಿತು. ಪುರ ಪ್ರವೇಶಕ್ಕೆ ಭವ್ಯ ಸ್ವಾಗತ ದೊರೆಯಿತು.

    ಕರುವಿನಕಟ್ಟೆ ರಸ್ತೆಯ ಏಕನಾಥೇಶ್ವರಿ ಪಾದಗಟ್ಟೆ ದೇಗುಲ ಮುಂಭಾಗ ಮೂರು ದೇವತೆಗಳ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ವೈಭವೋಪೇತವಾಗಿ ಅಲಂಕರಿಸಿ, ಟ್ರ್ಯಾಕ್ಟರ್‌ನಲ್ಲಿ ಕೂರಿಸಲಾಯಿತು. ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.

    ತಮಟೆ, ಡೊಳ್ಳು, ಉರುಮೆ, ಬ್ಯಾಂಡ್‌ಸೆಟ್ ಸೇರಿ ಜನಪದ ಕಲಾತಂಡಗಳು ಮೆರುಗು ಹೆಚ್ಚಿಸಿದವು. ಯುವಕರು ವಾದ್ಯ, ಡಿಜೆ ಸದ್ದಿಗೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭಕ್ತರು ಅಲಂಕೃತ ದೇವಿಯರ ಮೂರ್ತಿ ಕಣ್ತುಂಬಿಕೊಂಡರು.

    ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಗಾಂಧಿ ವೃತ್ತ, ಧರ್ಮಶಾಲಾ, ಉಜ್ಜಿನಿಮಠದ ರಸ್ತೆ ಸೇರಿ ಹಲವೆಡೆ ಸಂಚರಿಸಿದ ನಂತರ ಪುನಃ ದೇಗುಲಕ್ಕೆ ಕರೆತರಲಾಯಿತು.

    ಡಿ. 27ರಂದು ವಿಶೇಷ ಪೂಜೆ, ದೀಪೋತ್ಸವ, ಪ್ರಸಾದ ವಿತರಣೆ, 28ರಂದು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಲಿದೆ ಎಂದು ಕಾರ್ತಿಕ ಮಹೋತ್ಸವ ಸಮಿತಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts