More

    ವ್ಯಾಪಾರ- ವಹಿವಾಟಿಗೆ ಏಟು

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲೇ ಪ್ರಮುಖ ವಾಣಿಜ್ಯ ಕೇಂದ್ರ ಹುಬ್ಬಳ್ಳಿ. ಬಟ್ಟೆ, ಕಟ್ಟಡ ನಿರ್ಮಾಣ ಸಾಮಗ್ರಿ, ಎಲೆಕ್ಟ್ರಾನಿಕ್ ವಸ್ತು, ಯಂತ್ರೋಪಕರಣ… ಹೀಗೆ ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳ ವ್ಯಾಪಾರ ವಹಿವಾಟು ಇಲ್ಲಿ ನಿತ್ಯವೂ ಭರ್ಜರಿಯಾಗಿಯೇ ಸಾಗುತ್ತದೆ. ಜಿಲ್ಲೆ ಮಾತ್ರವಲ್ಲದೆ, ಉತ್ತರ ಕರ್ನಾಟಕದ ಬಹುತೇಕ ಊರುಗಳ ಜನರು ಹೋಲ್​ಸೇಲ್ ಖರೀದಿಗೆ ಆಗಮಿಸುವುದು ಹುಬ್ಬಳ್ಳಿಗೆ. ಹೀಗಾಗಿ, ಇದಕ್ಕೆ ಛೋಟಾ ಮುಂಬೈ ಎಂದೂ ಕರೆಯುತ್ತಾರೆ.

    ಈ ಕಾರಣಕ್ಕಾಗಿ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸದಾ ವಾಹನ ಹಾಗೂ ಜನ ದಟ್ಟಣೆ ಇದ್ದೇ ಇರುತ್ತದೆ. ಕಳೆದ ವರ್ಷದಿಂದ ಈ ಪ್ರದೇಶದಲ್ಲಿ ವ್ಯಾಪಾರ – ವಹಿವಾಟು ಸಾಕಷ್ಟು ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ಕರೊನಾ ಹಾವಳಿ.

    ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೋವಿಡ್ ಮೊದಲನೇ ಅಲೆ ಬೀಸಿದ್ದರಿಂದ ಲಾಕ್​ಡೌನ್ ಘೊಷಿಸಲಾಯಿತು. ಪ್ರಧಾನಿ ಮೋದಿ ಅವರು ಮಾರ್ಚ್ 25ರಿಂದ 21 ದಿನಗಳ ಕಾಲ ಲಾಕ್​ಡೌನ್ ಘೊಷಿಸಿದರು. ಒಟ್ಟಾರೆಯಾಗಿ ಎರಡು ತಿಂಗಳಿಗೂ ಅಧಿಕ ಕಾಲ ಈ ಲಾಕ್​ಡೌನ್ ಮುಂದುವರಿಯಿತು. ಈ ಅವಧಿಯಲ್ಲಿ ವ್ಯಾಪಾರಸ್ಥರು ಸಾಕಷ್ಟು ನಷ್ಟ ಅನುಭವಿಸಿದರು. ಮತ್ತೆ ಕೋವಿಡ್ ಎರಡನೇ ಅಲೆ ವಕ್ಕರಿಸಿದ್ದರಿಂದ 2021ರ ಏಪ್ರಿಲ್ 23ರಿಂದ ಲಾಕ್​ಡೌನ್ ಹೇರಲಾಯಿತು. ಇದರಿಂದ ಮತ್ತೆರಡು ತಿಂಗಳು ವಹಿವಾಟಿಗೆ ಹೊಡೆತ ಬಿತ್ತು.

    ಈಗ ಸಂಜೆ 5ರವರೆಗೆ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ವ್ಯಾಪಾರ ಚಟುವಟಿಕೆಗಳು ಚೇತರಿಸತೊಡಗಿವೆ. ಇದರ ನಡುವೆಯೇ ಮಾರುಕಟ್ಟೆ ಪ್ರದೇಶದಲ್ಲಿ ಗುಂಡಿಗಳನ್ನು ತೆಗೆದು ರಸ್ತೆ ಮೇಲೆ ಮಣ್ಣು ಸುರಿದಿರುವುದು ವ್ಯಾಪಾರಸ್ಥರಿಗೆ ಸಮಸ್ಯೆಯನ್ನು ಸೃಷ್ಟಿಸಿದೆ. ಎರಡು ತಿಂಗಳ ಕಾಲ ನಯಾಪೈಸೆ ಆದಾಯವೂ ಇಲ್ಲದೆ ಕಂಗಾಲಾಗಿರುವ ವರ್ತಕರಿಗೆ ಸ್ಮಾರ್ಟ್ ಸಿಟಿಯ ಈ ಅವ್ಯವಸ್ಥಿತ ಕಾರ್ಯವೈಖರಿಯು ‘ಗಾಯದ ಮೇಲೆ ಬರೆ’ ಹಾಕಿದ ಅನುಭವ ನೀಡುತ್ತಿದೆ.

    ಮಾರುಕಟ್ಟೆ ಪ್ರದೇಶದಲ್ಲಿ ಕಾಮಗಾರಿ ನಿರ್ವಹಿಸಲು ಲಾಕ್​ಡೌನ್ ಉತ್ತಮ ಸಮಯವಾಗಿತ್ತು. ಈ ವೇಳೆಯನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಈಗ ಮಳೆಗಾಲದಲ್ಲಿ ಗುಂಡಿ ತೋಡಿ ಸಂಚಾರಕ್ಕೆ ತೊಂದರೆ ಮಾಡಿದ್ದಾರೆ ಎಂದು ವ್ಯಾಪಾರಸ್ಥರು ಅಸಮಾಧಾನ ಹೊರ ಹಾಕುತ್ತಾರೆ.

    ಲೋಡ್ – ಅನ್​ಲೋಡ್ ಸಮಸ್ಯೆ: ಕಂಚಗಾರ ಗಲ್ಲಿ, ತಾಡಪತ್ರಿ ಗಲ್ಲಿ, ಅಂಚಟಗೇರಿ ಓಣಿ, ಮಹಾವೀರ ಗಲ್ಲಿ, ವಿಕ್ಟೋರಿಯಾ ರಸ್ತೆ ಇವೆಲ್ಲವೂ ಮೊದಲೇ ಕಿರಿದಾಗಿವೆ. ಈಗ ಇಲ್ಲಿ ಗಟಾರ್ ಕಾಮಗಾರಿಗಾಗಿ ತೆಗೆದ ಮಣ್ಣನ್ನು ರಸ್ತೆಯ ಮೇಲೆಯೇ ಹಾಕಲಾಗಿದೆ. ಇದರಿಂದಾಗಿ ಇಲ್ಲಿ ಈಗ ನಿರಂತರವಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ.

    ಇದಲ್ಲದೆ, ಇಲ್ಲಿ ವಹಿವಾಟು ನಡೆಸುವ ಹಾರ್ಡ್​ವೇರ್ ಅಂಗಡಿ, ಪ್ಲಾಸ್ಟಿಕ್ ಸಾಮಗ್ರಿ ಅಂಗಡಿ, ಕಬ್ಬಿಣ, ಫ್ಲೈವುಡ್ ಅಂಗಡಿಗಳಿಗೆ ಬರುವ ಸಾಮಗ್ರಿಗಳನ್ನು ಇಳಿಸಲು ಮತ್ತು ಗ್ರಾಹಕರು ಖರೀದಿಸಿದ ವಸ್ತುಗಳನ್ನು ಲೋಡ್ ಮಾಡಲು ಜಾಗ ಇಲ್ಲದಂತಾಗಿದೆ. ಇದರಿಂದಾಗಿ ಅನೇಕ ಗ್ರಾಹಕರು ಈ ರಸ್ತೆಯ ಕಡೆ ಮುಖ ಮಾಡುತ್ತಿಲ್ಲ. ವಾಹನ ನಿಲ್ಲಿಸಲು ಜಾಗ ಇಲ್ಲವೆಂದರೆ, ಮುಂದೆ ಸಾಗುತ್ತಾರೆ ಎಂಬುದು ಅಂಚಟಗೇರಿ ಓಣಿಯ ವ್ಯಾಪಾರಸ್ಥರ ಅಳಲು.

    ಮಾರುಕಟ್ಟೆಯ ಬಹುತೇಕ ಪ್ರದೇಶಗಳಲ್ಲಿ ಇದೇ ಪರಿಸ್ಥಿತಿ ಇದೆ. ಖರೀದಿಗೆ ಆಗಮಿಸುವ ಜನರು ವಾಹನಗಳ ಮೂಲಕ ಮಾರುಕಟ್ಟೆ ಪ್ರದೇಶಗಳಿಗೆ ತೆರಳುವುದು ದುಸ್ತರವಾಗಿದೆ. ವಾಹನ ರ್ಪಾಂಗ್ ಮಾಡಲು ಜಾಗವಂತೂ ಸಿಗುವುದೇ ಇಲ್ಲ. ಹೀಗಾಗಿ, ಖರೀದಿಗೆ ಹುಬ್ಬಳ್ಳಿ ಆಗಮಿಸಲು ಜನರು ಹಿಂಜರಿಯುತ್ತಿದ್ದಾರೆ. ಬೇರೆ ಊರುಗಳಿಗೆ ತೆರಳುತ್ತಿದ್ದಾರೆ. ಇದರಿಂದ ನಮ್ಮ ಆದಾಯಕ್ಕೆ ಸಾಕಷ್ಟು ಪೆಟ್ಟು ಬೀಳುತ್ತಿದೆ ಎಂದು ವ್ಯಾಪಾರಸ್ಥರು ಗೋಳು ತೋಡಿಕೊಳ್ಳುತ್ತಾರೆ.

    ಎರಡು ತಿಂಗಳ ಲಾಕ್​ಡೌನ್ ಇತ್ತು. ಆಗ ರಸ್ತೆ ಅಗೆಯುವುದು, ಚರಂಡಿ ನಿರ್ಮಾಣ ಮಾಡುವ ಕೆಲಸ ಮಾಡಬಹುದಿತ್ತು. ಈಗ ಎಲ್ಲ ಕಡೆ ಅಗೆದು ಇಟ್ಟಿದ್ದಾರೆ. ಸ್ಮಾರ್ಟ್​ಸಿಟಿ ಕಾಮಗಾರಿ ಎನ್ನುತ್ತಾರೆ. ಆದರೆ, ಕೆಲಸ ಮಾತ್ರ ಸ್ಮಾರ್ಟ್ ಆಗಿ ನಿರ್ವಹಣೆ ಮಾಡುತ್ತಿಲ್ಲ.
    | ಈಶ್ವರ ಸಿಂಗ್ ಬಟ್ಟೆ ವ್ಯಾಪಾರಿ, ಜವಳಿಸಾಲ

    ಟ್ರಾಫಿಕ್ ಜಾಮ್ ರ್ಪಾಂಗ್ ಸಮಸ್ಯೆ, ಲೋಡ್-ಅನ್​ಲೋಡ್ ಮಾಡುವುದು ಇಂದು ಸದ್ಯ ನಮ್ಮ ಏರಿಯಾದಲ್ಲಿ ಕಾಡುತ್ತಿರುವ ದೊಡ್ಡ ಪ್ರಾಬ್ಲಂ. ಸಮಸ್ಯೆ ಪರಿಹಾರ ಮಾಡುವಂತೆ ಪಾಲಿಕೆಗೆ ಮನವಿಯನ್ನು ಮಾಡಲಾಗಿದೆ. ಪ್ರಯೋಜನ ಆಗಿಲ್ಲ.
    | ಶಿವರಾಜ ದೊಡ್ಮನಿ ಗೃಹೋಪಯೋಗಿ ವಸ್ತುಗಳ ಮಾರಾಟಗಾರ, ತಾಡಪತ್ರಿ ಗಲ್ಲಿ

    ಅಂಗಡಿ ಬಾಗಿಲಿಗೆ ಟಾನ್ಸ್​ಪರೆಂಟ್ ಪ್ಲಾಸ್ಟಿಕ್ ಅಳವಡಿಸಿಕೊಂಡು ವ್ಯಾಪಾರ ಮಾಡಬೇಕಾಗಿದೆ. ಇಲ್ಲದಿದ್ದರೆ ಧೂಳು ಅಂಗಡಿ ತುಂಬ ಆಗುತ್ತದೆ. ಎರಡು ತಿಂಗಳು ಲಾಕ್ ಡೌನ್​ನಿಂದ ಅಂಗಡಿ ಬಾಗಿಲು ಹಾಕಬೇಕಾಯಿತು. ಈಗ ಈ ಕೆಲಸದ ಕಾರಣದಿಂದ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ.
    | ಮುಬಾರಕ್ ಪಾಷಾ ಖಾದ್ರಿ ಹಾರ್ಡ್​ವೇರ್ ವ್ಯಾಪಾರಿ, ತಾಡಪತ್ರಿ ಗಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts