More

    ವ್ಯಸನ ಮುಕ್ತರಾಗದ ವ್ಯಸನಿಗಳು

    ಪಾಂಡವಪುರ: ತಂಬಾಕು ಸೇವನೆ ಮಾಡುವವರಿಗೆ ಎಷ್ಟೇ ದಂಡ ವಿಧಿಸಿ ಜಾಗೃತಿ ಮೂಡಿಸಿದರೂ ಬಹುಪಾಲು ವ್ಯಸನಿಗಳು ವ್ಯಸನ ಮುಕ್ತರಾಗುತ್ತಿಲ್ಲ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಹಾಗೂ ಸರ್ಕಾರಿ ಪ್ರಥಮ ಕಾಲೇಜು ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ. ಅರವಿಂದ ಮಾತನಾಡಿ, ವಿದ್ಯಾವಂತ ಯುವ ಸಮುದಾಯ ಸಿಗರೇಟ್, ಗುಟ್ಖಾ, ಬೀಡಿ ಮುಂತಾದ ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಮಂಚೂಣಿಯಲ್ಲಿದ್ದಾರೆ. ಇವರೆಲ್ಲ ಮಾದಕದ್ರವ್ಯ ವ್ಯಸನಿಗಳಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಪ್ರತಿ ವರ್ಷ ಸರಿಸುಮಾರು 13ರಿಂದ 14 ಲಕ್ಷ ಜನ ತಂಬಾಕು ಬಳಕೆಯಿಂದ ಬಲಿಯಾಗುತ್ತಿದ್ದಾರೆ. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 3 ಕೋಟಿ ಜನ ತಂಬಾಕು ಸೇವನೆ ಮಾಡುತ್ತಿದ್ದಾರೆ. ಶೇ.8.8ರಷ್ಟು ಧೂಮಪಾನಿಗಳು, ಶೇ.16.3ರಷ್ಟು ಧೂಮಪಾನ ರಹಿತ ತಂಬಾಕು ಬಳಕೆದಾರರು ಇದ್ದಾರೆ. ಇವರಲ್ಲಿ ಯುವಕರೇ ಹೆಚ್ಚು ವ್ಯಸನಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಪ್ರಪಂಚದಲ್ಲಿ ಚೀನಾ ತಂಬಾಕು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ತಂಬಾಕು ಬಳಕೆ ಮತ್ತು ಬೆಳೆಯಿಂದ ಆರೋಗ್ಯ ಮಾತ್ರವಲ್ಲದೆ ಪರಿಸರ ಮತ್ತು ರಾಷ್ಟ್ರದ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ. ತಂಬಾಕು ಬೆಳೆಯಿಂದ ರೈತರು ಹಾಗೂ ವ್ಯಾಪಾರಿಗಳಿಗೆ ಲಾಭವಾದರೆ ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ಒಳಗಾದವರ ಚಿಕಿತ್ಸೆಗೆ ಸರ್ಕಾರ ಕೋಟ್ಯಾಂತರ ರೂ. ವೆಚ್ಚ ಮಾಡಬೇಕಿದೆ ಎಂದರು.

    ಕಾರ್ಯಕ್ರಮದಲ್ಲಿ ಉಪವಿಭಾಗೀಯ ಆಸ್ಪತ್ರೆ ವೈದ್ಯಾಧಿಕಾರಿ ನಮ್ರತಾ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಮಧುಸೂದನ್, ವಕೀಲರ ಸಂಘದ ಕಾರ್ಯದರ್ಶಿ ನಾಗರಾಜು, ವಕೀಲ ಎಸ್.ಎನ್.ಮಧು, ಆರೋಗ್ಯ ಇಲಾಖೆಯ ಪುಟ್ಟಸ್ವಾಮಿ, ವಿಜಯಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts