More

    ವ್ಯವಸ್ಥಿತ ಜೀವನ ವಿಧಾನವೇ ಧರ್ಮ

    ಗಜೇಂದ್ರಗಡ: ಪಂಚಪೀಠಗಳು ಜನರ ಕಲ್ಯಾಣದೊಂದಿಗೆ ರಾಷ್ಟ್ರ ಧರ್ಮ ಬೋಧಿಸುತ್ತಿವೆ. ಅಲ್ಲದೆ, ಸನಾತನ ಧರ್ಮ ಜಾಗೃತಿಗೊಳ್ಳಲು ಧರ್ಮಕಾರ್ಯ ಅವಶ್ಯವಾಗಿದೆ. ಧರ್ಮಕಾರ್ಯ ಮಾಡುವುದರಿಂದ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

    ಪಟ್ಟಣದ ಸಮೀಪದ ನಾಗೇಂದ್ರಗಡ ಗ್ರಾಮದ ಶರಣಬಸವೇಶ್ವರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ಕಾಶಿ ಜಗದ್ಗುರುಗಳ ಅಡ್ಡಪಲಕ್ಕಿ ಮಹೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

    ಮನುಕುಲ ಜೀವನದ ಉತ್ಕರ್ಷತೆಗೆ ಕಾರಣವಾಗಿರುವ ಧರ್ಮ ಹಾಗೂ ಅದರ ಪರಿಪಾಲನೆಯನ್ನು ಯಾರೊಬ್ಬರು ಮರೆಯಬಾರದು. ವ್ಯವಸ್ಥಿತವಾದ ಜೀವನ ವಿಧಾನವೇ ಧರ್ಮವಾಗಿದ್ದು, ಈ ನಿಟ್ಟಿನಲ್ಲಿ ಮನುಕುಲದ ಸರ್ವಾಂಗೀಣ ಏಳಿಗೆಗೆ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.

    ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ಧರ್ಮಮಾರ್ಗದಿಂದ ನಡೆಯುವ ಮನುಷ್ಯನ ವ್ಯಕ್ತಿತ್ವವು ವೃದ್ಧಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಇಂತಹ ಧಾರ್ವಿುಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದರು.

    ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಜಿ ಮಾತನಾಡಿ, ನೂತನವಾಗಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಆದರ್ಶರಾಗಿ ಬಾಳಬೇಕೆಂದು ಶುಭ ಹಾರೈಸಿ, ನೂತನ ವಧು-ವರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

    ಸಂಜೆ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಸಕಲ ಸದ್ಭಕ್ತರ ಮಧ್ಯೆ ಮಹಾರಥೋತ್ಸವವು ನಡೆಯಿತು. ರಥಕ್ಕೆ ಬಟ್ಟೆ ಪತಾಕೆಯೊಂದಿಗೆ ಸಂಪೂರ್ಣವಾಗಿ ವಿವಿಧ ಹೂ ಕದಳಿಯಿಂದ ಅಲಂಕರಿಸಿದ ರಥ ಭಕ್ತರನ್ನು ಆಕರ್ಷಿಸಿತು. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಮಹಾರಥೋತ್ಸವವನ್ನು ಭಕ್ತರು ಸಂಭ್ರಮದಿಂದ ಎಳೆದರು. ಜಿಗೇರಿಯ ಗುರುಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರ ಶಿವಾಚಾರ್ಯರು, ಶರಣಬಸವ ಶಾಸ್ತ್ರಿಗಳು, ಶಿವಾನಂದ ಮಠದ, ಎಸ್.ಎ. ಜಿಗಳೂರ, ವಿ.ಕೆ. ಗುರುಮಠ, ಎಸ್.ಎಸ್. ಹಿರೇಮಠ, ವೀರಣ್ಣ ಸಂಗಳದ, ಶರಣಪ್ಪ ಕುರಿ, ಜಗದೀಶ ಕೊಪ್ಪದ ಶಿವಶರಣಯ್ಯ ಮಠದ, ಇತರರಿದ್ದರು.

    ನಮಗಾಗಿ ಸುಖ, ಸೌಭಾಗ್ಯ, ಸಂತೋಷ, ಪ್ರೇಮ, ವಿಶ್ವಾಸ ಮತ್ತು ಸ್ವರ್ಗ ಇತ್ಯಾದಿಗಳನ್ನು ಮಾನವ ಬಯಸುತ್ತಾನೆ. ತಾನು ಎಲ್ಲರಿಗೂ ಅನ್ನುವುದೇ ಧರ್ಮ, ಎಲ್ಲರೂ ತನಗಾಗಿ ಎನ್ನುವುದೇ ಅಧರ್ಮ ಎಂಬುದನ್ನು ಮರೆಯಬಾರದು.

    | ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts