More

    ವ್ಯಕ್ತಿಪೂಜೆಗಾಗಿ ಅಲ್ಲ ಪಾದಯಾತ್ರೆ; ಪಕ್ಷದ ನಿರ್ದೇಶನದಂತೆ ಆಯೋಜನೆ: ಮಂಜುನಾಥಗೌಡ

    ತೀರ್ಥಹಳ್ಳಿ: ಸ್ವಾತಂತ್ರೃ ಅಮೃತ ಮಹೋತ್ಸವದ ಸವಿನೆನಪಿಗೆ ಪಕ್ಷದ ನಿರ್ದೇಶನದಂತೆ ಜು.28ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ, ಇದು ನನ್ನ ವ್ಯಕ್ತಿಪೂಜೆಯ ಕಾರ್ಯಕ್ರಮ ಅಲ್ಲ, ಈ ಪಾದಯಾತ್ರೆಗೆ ಕಿಮ್ಮನೆ ರತ್ನಾಕರ್ ಅವರಿಗೂ ಆಹ್ವಾನ ನೀಡುತ್ತೇನೆ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥಗೌಡ ಹೇಳಿದ್ದಾರೆ.
    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಜಿಲ್ಲೆಯ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷದ ಬ್ಯಾನರ್ ಅಡಿಯಲ್ಲೇ ಪಕ್ಷ ಕಟ್ಟುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮಾಡಲಾಗುತ್ತಿದೆ. ಪಕ್ಷದ ಅಧ್ಯಕ್ಷರು ಕರೆದರೆ ಕಿಮ್ಮನೆ ರತ್ನಾಕರ್ ಆಯೋಜಿಸಿರುವ ಪಾದಯಾತ್ರೆಯಲ್ಲೂ ಭಾಗವಹಿಸುತ್ತೇನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕೆಪಿಸಿಸಿ ಮಾರ್ಗದರ್ಶನದಂತೆ ಹಮ್ಮಿಕೊಂಡಿರುವ ಈ ಪಾದಯಾತ್ರೆ ಐತಿಹಾಸಿಕವಾಗಿದೆ. ಸ್ವಾತಂತ್ರ್ಯಪೂರ್ವದ ಇತಿಹಾಸದೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಮಾಡಿದ ಸಾಧನೆ ಹಾಗೂ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತ್ಯಾಗ ಬಲಿದಾನದ ಮೂಲಕ ಹೋರಾಡಿದ ಮಹನೀಯರ ಕುರಿತಾಗಿ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯಕ್ರಮ ಇದು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಧ್ರುವ ನಾರಾಯಣ್ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು ಮತ್ತು ಇತರೆ ಸಂಘಟನೆಗಳ ಮುಖಂಡರು ಕೂಡಾ ಭಾಗವಹಿಸಲಿದ್ದಾರೆ ಎಂದು ಹೇಳಿದರು.
    ನಾನೇಕೆ ಪಕ್ಷ ಬಿಡಲಿ?: ಪಕ್ಷದ ಸಂಘಟನೆಗೆ ನಾನು ಕೂಡ ದುಡಿದ ಹಣ ವಿನಿಯೋಗಿಸಿದ್ದೇನೆ. ಬಗರ್‌ಹುಕುಂ, ಕಸ್ತೂರಿರಂಗನ್ ವರದಿ ಮತ್ತು ಶರಾವತಿ ಸಂತ್ರಸ್ತರ ಪರವಾಗಿ ಹೋರಾಟ ನಡೆಸಿದ್ದೇನೆ. ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಂಜುನಾಥಗೌಡ ಹೇಳಿದರು. ಕಿಮ್ಮನೆ ರತ್ನಾಕರ್ ಬಹಿರಂಗ ಪತ್ರದಲ್ಲಿ ಹೇಳಿರುವಂತೆ ಪಾದಯಾತ್ರೆ ನನ್ನ ವ್ಯಕ್ತಿ ಪೂಜೆಗಾಗಿ ಅಲ್ಲ. ಅವರ ಈ ಹೇಳಿಕೆಗೆ ನನ್ನ ಧಿಕ್ಕಾರವಿದೆ. ಅವರ ಬಗ್ಗೆಯೂ ಮೊದಲ ಪತ್ರ ಬರೆಯುತ್ತಿದ್ದು, ಇನ್ನೂ ನೂರು ಪತ್ರ ಬರೆಯುವುದಕ್ಕಿದೆ. ಆದರೆ ಪತ್ರವನ್ನು ನೇರವಾಗಿ ಪತ್ರಿಕೆಗೆ ಬಿಡುಗಡೆ ಮಾಡುವ ಅನಾಗರಿಕ ನಾನಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ನಾನೇ ಸೀನಿಯರ್: ಕಿಮ್ಮನೆ ರತ್ನಾಕರ್ ಕೂಡ ಚುನಾವಣೆಗಾಗಿಯೇ ಕಾಂಗ್ರೆಸ್ಸಿಗೆ ಬಂದವರು. ಪಕ್ಷದಲ್ಲಿ ನಾನು ಅವರಿಗಿಂತಲೂ ಸೀನಿಯರ್, ಮೊದಲ ಅವಕಾಶ ನನಗೆ ಸಿಗಬೇಕಿತ್ತು. ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದೇನೆಯೇ ಹೊರತು ಚುನಾವಣೆ ಟಿಕೆಟ್‌ಗಾಗಿ ಅಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ನಾನೂ ಕೂಡ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೇ. ನನ್ನ ಸಾಮರ್ಥ್ಯದ ಬಗ್ಗೆ ವಿರೋಧಿಗಳಿಗೆ ಅರಿವಿದೆ ಎಂದೂ ಮಾರ್ಮಿಕವಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts