More

    ವೈಭವದಿಂದ ಜರುಗಿದ ಪಲ್ಲಕ್ಕಿ ಉತ್ಸವ

    ಚಿತ್ರದುರ್ಗ: ಕಬೀರಾನಂದಾಶ್ರಮದ 94ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರ ಪಲ್ಲಕ್ಕಿ ಹಾಗೂ ಜನಪದ ಉತ್ಸವ ಶುಕ್ರವಾರ ವೈಭವದಿಂದ ಜರುಗಿತು.

    ಹಳದಿ, ನೀಲಿ, ಬಿಳಿ, ಕಲರ್ ಸೇವಂತಿ, ಕನಕಾಂಬರ, ಚೆಂಡು ಹೂ ಸೇರಿ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಪಲ್ಲಕ್ಕಿಯನ್ನು ಟ್ರಾೃಕ್ಟರ್‌ನಲ್ಲಿ ಇಡಲಾಯಿತು. ನಂತರ ಸ್ವಾಮೀಜಿ ಆಸೀನರಾದರು. ನೂರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಸಾಗಿದರು.

    ಕಬೀರಾನಂದಸ್ವಾಮಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಉತ್ಸವಕ್ಕೆ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಸಿ.ನಾಗರಾಜ್ ಶ್ರೀಮಠದ ಮುಂಭಾಗ ಚಾಲನೆ ನೀಡಿದರು.

    ಕಹಳೆ, ಉರುಮೆ, ತಮಟೆ, ಕೀಲು ಕುದುರೆ, ಜಾಂಜ್, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ತಟ್ಟೆರಾಯ, ಶಾರದಾ ಬ್ರಾಸ್‌ಬ್ಯಾಂಡ್, ಗೊರವಪ್ಪ, ಛತ್ರಿ ಚಾಮರ ಸೇರಿ ಇತರೆ ಜನಪದ ಕಲಾ ತಂಡಗಳು ಮೆರುಗು ನೀಡಿದವು.

    ಆಶ್ರಮದಿಂದ ಆರಂಭವಾದ ಮೆರವಣಿಗೆ ದೊಡ್ಡಪೇಟೆ, ಮೈಸೂರ್ ಕೆಫೆ, ವಾಸವಿ ವಿದ್ಯಾಸಂಸ್ಥೆ, ಪಾರ್ಶ್ವನಾಥ ಸ್ಕೂಲ್, ಆನೆಬಾಗಿಲು, ಗಾಂಧಿ ವೃತ್ತ, ಎಸ್‌ಬಿಐ ಬ್ಯಾಂಕ್, ಇ.ಪಿ.ಬ್ರದರ್ಸ್‌, ರಂಗಯ್ಯನ ಬಾಗಿಲು, ಉಜ್ಜಯಿನಿ ಮಠ, ಕರುವಿನಕಟ್ಟೆ ವೃತ್ತದ ಮಾರ್ಗವಾಗಿ ಸಂಚರಿಸಿ ಸಂಜೆ ಮಠ ತಲುಪಿತು.

    ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಜ್ಞಾನ ವಿಕಾಸ ಪಾಲಿಟೆಕ್ನಿಕ್, ಕಬೀರಾನಂದಸ್ವಾಮಿ ನರ್ಸಿಂಗ್, ಪ್ರಥಮ ದರ್ಜೆ ಬಿ.ಇಡಿ, ಪಿಯು ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಮಠದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ರಾಜ್ಯದ ಉಡುಗೆ ಧರಿಸಿ ಭಾವೈಕ್ಯತೆ ಸಂದೇಶ ಸಾರಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ನಾಗರಿಕರು ಮೆರವಣಿಗೆ ವೀಕ್ಷಿಸಿದರು.

    ಉತ್ಸವ ಸಮಿತಿ, ವಿವಿಧ ಸಂಘಟನೆ ಮುಖಂಡರಾದ ನಂದಿ ನಾಗರಾಜ್, ಪ್ರಶಾಂತ್, ನಾಗರಾಜ್ ಸಂಗಂ, ಸತೀಶ್, ಓಂಕಾರ್, ರುದ್ರೇಶ್, ಪ್ರಭಂಜನ್, ಪೈಲ್ವಾನ್ ತಿಪ್ಪೇಸ್ವಾಮಿ, ನಿರಂಜನಮೂರ್ತಿ, ನಾಗರಾಜ್ ಶಾಸ್ತ್ರೀ, ತಿಪ್ಪೇಸ್ವಾಮಿ, ಯೋಗೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts