More

    ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ

    ಭಟ್ಕಳ: ಇತ್ತೀಚೆಗೆ ರೋಗಿಗಳೆ ತನಗೆ ಆಕ್ಷಿಜನ್, ಬೆಡ್ ಕೊಡಿ, ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಿ ಎಂದು ವೈದ್ಯರನ್ನು ಪೀಡಿಸುತ್ತಿದ್ದಾರೆ. ದಯವಿಟ್ಟು ಇನ್ಮುಂದೆ ಇಂಥ ವರ್ತನೆ ಮಾಡಬೇಡಿ. ಇದರಿಂದ ನಿಜವಾಗಿ ಅವಶ್ಯಕತೆ ಇದ್ದವರಿಗೆ ತೊಂದರೆಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗಾ ಎಂ. ಮನವಿ ಮಾಡಿದರು.

    ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಅವರು, ಆಮ್ಲಜನಕ ಸಂಗ್ರಹ, ಸೋಂಕಿತರ ಚಿಕಿತ್ಸೆಗಳ ಬಗ್ಗೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಸಾವಿರದ ಗಡಿ ದಾಟುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ಮುಂದಿನ ಕ್ರಮಕ್ಕೆ ಜಿಲ್ಲಾಡಳಿತ, ತಾಲೂಕಾಡಳಿತ ಅಣಿಯಾಗುತ್ತಿದೆ. ಯಾರೊಬ್ಬರೂ ಭಯಪಡುವ ಅವಶ್ಯಕತೆ ಇಲ್ಲ. ಎಲ್ಲರೂ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯಲು ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದಿದೆ. ಯಾರು ಎಲ್ಲಿ ಇರಬೇಕು? ಯಾರಿಗೆ ಎಷ್ಟು ಆಮ್ಲಜನಕ, ಚಿಕಿತ್ಸೆ ನೀಡಬೇಕು ಎಂದು ವೈದ್ಯರು ನಿರ್ಣಯಿಸುತ್ತಾರೆ. ಅವರ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದರು.

    ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಸೋಂಕಿತರಿಗೆ ಅವಶ್ಯವಿರುವ ಬೆಡ್, ಅಮ್ಲಜನಕ ಹಾಗೂ ಇನ್ನಿತರ ಸೌಲಭ್ಯಗಳ ಕೊರತೆಯಾಗದಂತೆ ವ್ಯವಸ್ಥೆ ಮಾಡಲಿದೆ. ಖಾಸಗಿ ಅಸ್ಪತ್ರೆಗಳು ಕೋವಿಡ್ ಲಕ್ಷಣವುಳ್ಳ ರೋಗಿಗಳ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದು ಬಂದಿದೆ. ಈ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

    ಅಧಿಕಾರಿಗಳ ಜತೆ ಸಭೆ ನಡೆಸಿ ತಾಲೂಕಿನ ಕೋವಿಡ್ ಪ್ರಕರಣಗಳ ಬಗ್ಗೆ ವಿವರ ಪಡೆದಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಅವಶ್ಯವಿರುವ ಹೆಚ್ಚುವರಿ ಬೆಡ್​ಗಳು ಹಾಗೂ ಅಮ್ಲಜನಕದ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಜನಸಾಮಾನ್ಯರು ಕೋವಿಡ್ 2ನೇ ಅಲೆಯಿಂದ ಜಾಗೃತರಾಗಿರಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು. ಕೋವಿಡ್ ನಿಯಂತ್ರಿಸುವಲ್ಲಿ ಅಧಿಕಾರಿಗಳ ಪ್ರಯತ್ನಕ್ಕಿಂತ ಸಾರ್ವಜನಿಕರ ಸಹಕಾರ ಅವಶ್ಯ ಎಂದರು.

    ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸವಿತಾ ಕಾಮತ, ಪ್ರಭಾರೆ ಟಿಎಚ್​ಒ ಡಾ. ಬಾಲಚಂದ್ರ ಮೇಸ್ತ, ತಾಪಂ ಆಡಳಿತಾಧಿಕಾರಿ ರವೀಂದ್ರ ಬಾಡ್ಕರ, ತಾಪಂ ಇಒ ಪ್ರಭಾಕರ ಚಿಕ್ಕಣಮನೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts