More

    ವೈದ್ಯರಿಲ್ಲದೆ ತಾಯಿ-ಮಗು ಬಲಿ ; ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ

    ಮಧುಗಿರಿ: ತಾಲೂಕಿನ ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ವೈದ್ಯರ ಸೇವೆ ದೊರೆಯದೆ ನರ್ಸ್ ಒಬ್ಬರು ಹೆರಿಗೆ ಮಾಡಿದ ಪರಿಣಾಮ ಹಸುಗೂಸು ಆಸ್ಪತ್ರೆಯಲ್ಲೇ ಮೃತಪಟ್ಟು, ತಾಯಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದು ಗುರುವಾರ ನಡೆದಿದೆ.

    ಐಡಿಹಳ್ಳಿ ಹೋಬಳಿಯ ಬ್ರಹ್ಮಸಮುದ್ರದ ಕೋಮಲ (25) ಮತ್ತು ಹಸುಗೂಸು ಮೃತರು. ಗ್ರಾಮದ ನಾಗರಾಜು ಪತ್ನಿ ಕೋಮಲಾಗೆ ಗುರುವಾರ ಬೆಳಗ್ಗೆ 4 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಪತಿ ನಾಗರಾಜು ಗ್ರಾಪಂ ಸದಸ್ಯ ದೇವರಾಜು ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹೊಸಕೆರೆ ಮತ್ತು ಐ.ಡಿ ಹಳ್ಳಿಯ ಆಂಬುಲೆನ್ಸ್‌ಗೆ ಕರೆ ಮಾಡಿದಾಗ ಸ್ಪಂದನೆ ದೊರೆತಿಲ್ಲ. ಬಾಡಿಗೆ ವಾಹನದಲ್ಲಿ ಆಶಾ ಕಾರ್ಯಕರ್ತೆ ನೆರವಿನೊಂದಿಗೆ ಬೆಳಗ್ಗೆ 5.30ಕ್ಕೆ ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಹಿನ್ನೆಲೆಯಲ್ಲಿ ನರ್ಸ್ ಒಬ್ಬರೇ ಹೆರಿಗೆ ಮಾಡಿದ್ದು, ಹೆರಿಗೆಯ ನಂತರ ನಿಮಗೆ ಹೆಣ್ಣು ಮಗು ಹುಟ್ಟಿದೆ.

    ಆದರೆ ಮಗು ಹೊಟ್ಟೆಯಲ್ಲೇ ನೀರು ಕುಡಿದು ಮೃತಪಟ್ಟಿದೆ. ತಾಯಿಯ ಪರಿಸ್ಥಿತಿಯೂ ಗಂಭೀರವಾಗಲಿದ್ದು, ತಕ್ಷಣ ಮಧುಗಿರಿ ಆಸ್ಪತ್ರೆಗೆ ಹೋಗುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಬಾಣಂತಿಯನ್ನು ಬೇರೆ ಕರೆದುಕೊಂಡು ಹೋಗಲು ಇಲ್ಲಿಯೂ ಆಂಬುಲೆನ್ಸ್ ಸಮಸ್ಯೆ ತಲೆದೋರಿ, ಖಾಸಗಿ ವಾಹನದಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಕೋಮಲ ಮೃತಪಟ್ಟಿದ್ದಾರೆ ಎಂದು ಪತಿ ಅಳಲು ತೋಡಿಕೊಂಡರು.

    4 ಮಕ್ಕಳಲ್ಲಿ ಒಂದೂ ಉಳಿಯಲಿಲ್ಲ: ಕೋಮಲಾಗೆ ಈ ಹಿಂದೆಯೂ ಹೆರಿಗೆ ಸಂದರ್ಭದಲ್ಲಿ ಮೂರು ಮಕ್ಕಳು ಮೃತಪಟ್ಟಿದ್ದು, 4ನೇ ಹೆರಿಗೆ ವೇಳೆ ತಾಯಿ, ಮಗು ಮೃತಪಟ್ಟಿರುವುದು ದುರ್ದೈವ.

    ಮುಗಿಲು ಮುಟ್ಟಿದ ಪೋಷಕರ ಆಕ್ರಂದನ: ಮಧುಗಿರಿ ಶವಾಗಾರದ ಎದುರು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಸಕೆರೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗಳು ಮತ್ತು ಹಸುಗೂಸು ಮೃತಪಟ್ಟಿದೆ ಎಂದು ತಾಯಿ ಗಂಗಮ್ಮಮತ್ತು ಕುಟುಂಬಸ್ಥರು ಕಣ್ಣೀರು ಹಾಕಿದ್ದರು.

    ಇಬ್ಬರ ಜೀವ ಉಳಿಸಬಹುದಿತ್ತು !: ಬ್ರಹ್ಮ ಸಮುದ್ರದಲ್ಲಿ ಮೊಬೈಲ್ ಟವರ್ ಸಮಸ್ಯೆಯಿಂದ ಸಿಗ್ನಲ್ ಸಿಗುವುದಿಲ್ಲ. ಕರೆ ಮಾಡಬೇಕೆಂದರೆ ಗ್ರಾಮದಿಂದ 4 ಕಿ.ಮೀ ದೂರ ಬಂದು ಕರೆ ಮಾಡಬೇಕು. ರಾತ್ರಿ ವೇಳೆ ಹೊರ ಬರಬೇಕೆಂದರೆ ಕರಡಿ ಕಾಟ ಹೆಚ್ಚು. ಆದರೂ ಬೆಳಗ್ಗೆ 4 ಗಂಟೆಗೆ ಗ್ರಾಮದಿಂದ ಹೊರಬಂದು 108ಗೆ ಕರೆ ಮಾಡಿದರೂ ಸ್ಪಂದನೆ ವ್ಯಕ್ತವಾಗಲಿಲ್ಲ. ಇದರಿಂದ ತಾಯಿ ಮಗು ಇಬ್ಬರೂ ಮೃತಪಟ್ಟಿದ್ದು, ಸಕಾಲಕ್ಕೆ ಆಂಬುಲೆನ್ಸ್ ಸೇವೆ ದೊರೆತಿದ್ದರೆ ಜೀವಗಳನ್ನು ಉಳಿಸಬಹುದಿತ್ತು ಎನ್ನುತ್ತಾರೆ ಗ್ರಾಪಂ ಸದಸ್ಯರಾದ ದೇವರಾಜು, ಚಿತ್ತಯ್ಯ, ನಾರಾಯಣ ಮೂರ್ತಿ.

    ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರ ಸೇವೆ ಇರುವುದಿಲ್ಲ, ಮೂವರು ದಾದಿಯರ ಸೇವೆ ಇರುತ್ತದೆ. ಕೋಮಲ ಆಸ್ಪತ್ರೆಗೆ ಬರುವ ವೇಳೆಗೆ ಹೊಟ್ಟೆಯಲ್ಲೇ ಮಗು ಮೃತಪಟ್ಟಿದ್ದು, ಸಿಬ್ಬಂದಿ ಕಾರಣವಲ್ಲ. ಕೆಲ ವಿರಳ ಪ್ರಕರಣಗಳಲ್ಲಿ ಶ್ವಾಸಕೊಶದ ಪಲ್ಮನರಿ ಎಂಬಾಲಿಸಂ ಬ್ಲಾಕ್ ಆಗಿ ಸಾವು ಸಂಭವಿಸುತ್ತದೆ, ಹೀಗೂ ಆಗಿರಬಹುದು. ಶವ ಪರೀಕ್ಷೆ ನಂತರ ಕಾರಣ ತಿಳಿಯಲಿದೆ.
    ಡಾ. ರಮೇಶ್ ಬಾಬು, ಟಿಎಚ್‌ಒ

    ಹೊಸಕೆರೆ ಆಸ್ಪತ್ರೆಯಲ್ಲಿ ಬೆಳಗ್ಗೆ 5.30ಕ್ಕೆ ಕೋಮಲಾಳನ್ನು ಹೆರಿಗೆಗೆ ದಾಖಲಿಸಿದ್ದು, ವೈದ್ಯರ ಸೇವೆ ದೊರೆಯದೆ ನರ್ಸ್ ಒಬ್ಬರು ಹೆರಿಗೆ ಮಾಡಿದರು. ಕೋಮಲ ಮತ್ತು ಹಸುಗೂಸಿನ ಸಾವಿಗೆ ಹೆರಿಗೆ ಸಂದರ್ಭದಲ್ಲಿ ತೋರಿದ ನಿರ್ಲಕ್ಷ್ಯವೇ ಕಾರಣ.
    ನಾಗರಾಜು, ಕೋಮಲ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts