More

    ವೈಜ್ಞಾನಿಕತೆ ದಂಗಲ್‌ನತ್ತ ಹಾಕಿ ಹೆಜ್ಜೆ – ಹುಲಿಕಲ್ ನಟರಾಜ್ ಆಶಯ -ಗುರುಚೇತನ, ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ

    ದಾವಣಗೆರೆ: ಇಂದು ವೈಜ್ಞಾನಿಕತೆ, ವೈಚಾರಿಕತೆಯ ದಂಗಲ್ ಹಾಗೂ ಮನಸ್ಸುಗಳನ್ನು ಬೆಸೆಯುವ ಕಡೆ ನಾವು ಹೆಜ್ಜೆ ಹಾಕಬೇಕಿದೆ ಎಂದು ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜ್ ಆಶಿಸಿದರು.
    ಶಿಕ್ಷಣ ತಜ್ಞ ಡಾ. ಎಚ್.ವಿ.ವಾಮದೇವಪ್ಪ ಚಾರಿಟಬಲ್ ಟ್ರಸ್ಟ್ ಮತ್ತು ಎಜುಕೇಷನಲ್ ಟ್ರಸ್ಟ್ ವತಿಯಿಂದ ನಗರದ ಮಾಗನೂರು ಬಸಪ್ಪ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುಚೇತನ, ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಅವಿಭಕ್ತ ಕುಟುಂಬ ಬದಲಾಗಿ ವಿಭಕ್ತ ಕುಟುಂಬಗಳು ಬಂದು ನಾವಿಂದು ರೋಬೋ ಆಗುತ್ತಿದ್ದೇವೆ. ಚಂದ್ರನ ಮೇಲೆ ಕಾಲಿಡುವಷ್ಟರ ಮಟ್ಟಿಗೆ ವಿಜ್ಞಾನ ಬೆಳೆದಿದ್ದರೂ ಮೌಢ್ಯ, ಕಂದಾಚಾರ, ವಾಮಾಚಾರದ ಪಾತಾಳದತ್ತ ಹೋಗುತ್ತಿದ್ದೇವೆ. ವಿದ್ಯಾವಂತರೇ ಮೌಢ್ಯಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ವಿಷಾದಿಸಿದರು.
    ವೈಜ್ಞಾನಿಕತೆ ಬಿತ್ತಬೇಕಾದ ಸಮೂಹ ಮಾಧ್ಯಮಗಳು ಮೌಢ್ಯದತ್ತ ಜೋತು ಬಿದ್ದಿವೆ. ದಿನಬೆಳಗಾದರೆ ಸುಳ್ಳು ಹೇಳಿಸುವ ವ್ಯವಸ್ಥೆ ನಡೆದಿದೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಪಂಚಾಂಗದ ಬದಲಾಗಿ ಪಂಚ ಅಂಗಗಳತ್ತ ಗಮನ ನೀಡಬೇಕಿದೆ. ಮನೆಯ ವಾಸ್ತು ಕೈಬಿಟ್ಟು ಮನಸ್ಸಿನ ವಾಸ್ತುವಿನತ್ತ ಹೊರಳಿದರೆ ಬದುಕು ಹಸನಾಗಲಿದೆ ಎಂದರು.
    ಶಿಕ್ಷಣ ಮಾರಾಟದ ಸರಕಾಗಿದೆ. ಇದು ಮುಂದುವರಿದರೆ ಮುಂದಿನ ದಿನದಲ್ಲಿ ಗುರುಗಳು ಸಿಗುವುದಿಲ್ಲ. ಇನ್ನು 30 ವರ್ಷನಂತರದಲ್ಲಿ ಕಾಲೇಜುಗಳು ಇರುವುದಿಲ್ಲ. ಮನೆಯಲ್ಲೇ ಆನ್‌ಲೈನ್ ಪರೀಕ್ಷೆ ಬರೆಯುವ ಸ್ಥಿತಿ ಬರಲಿದೆ ಎಂದ ಅವರು ಬಿಲ್‌ಗಾಗಿ ಮತ್ತು ಬೆಲ್ ಅವಧಿಗಾಗಿ ಶಿಕ್ಷಕರಾಗುವುದಾದರೆ ಈ ಕ್ಷೇತ್ರಕ್ಕೆ ಬಾರದಿರಿ ಎಂದು ಕಿವಿಮಾತು ಹೇಳಿದರು.
    ಮತ್ತೊಬ್ಬರ ಮನಸ್ಸನ್ನು ನೋಯಿಸದಿರುವುದೇ ನಿಜವಾದ ಧರ್ಮ. ಗ್ರಹಚಾರ, ಹಣೆಬರಹ ನಮ್ಮಲ್ಲಿವೆಯೇ ಹೊರತು ದೇವರ ಕೈಯಲ್ಲಿಲ್ಲ. ಇಂದಿನ ವಿದ್ಯಾರ್ಥಿಗಳು ಸೆಲ್‌ಫೋನ್, ಚಾಟಿಂಗ್, ಕ್ರಿಕೆಟ್‌ನಿಂದ ದೂರವಿರಬೇಕು. ದೇವರೇ ಅಂತಿಮವಲ್ಲ. ನಿಮ್ಮ ಮನಸ್ಸಿನಂತೆ ಜೀವನ ಸೃಷ್ಟಿಯಾಗಲಿದೆ. ಹೀಗಾಗಿ ಸಕಾರಾತ್ಮಕ ಚಿಂತನೆಗಳಿರಲಿ. ಕಲ್ಲು ದೇವರ ಬದಲಾಗಿ ನಿಮ್ಮ ಹೆತ್ತವರು, ಗುರು-ಹಿರಿಯರನ್ನು ಗೌರವಿಸಿ ಎಂದು ಹೇಳಿದರು.
    ಗುರುಚೇತನ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಟಿ.ವಿ.ಸೋಮಶೇಖರ್, ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಏಕಾಗ್ರತೆ, ಶಿಸ್ತು ರೂಢಿಸಿಕೊಳ್ಳಬೇಕು ಎಂದರು.
    ಗುರುಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾದ ಜಗಳೂರಿನ ಸಹ ಶಿಕ್ಷಕ ಮಂಜುನಾಥ ಸಾಹುಕಾರ್ ಮಾತನಾಡಿ ತರಗತಿ ಕೋಣೆಯಲ್ಲಿ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸುವುದರಿಂದ ಹೊಣೆಗಾರಿಕೆ ಹೆಚ್ಚಲಿದೆ ಎಂದು ಹೇಳಿದರು.
    ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ ಮಾತನಾಡಿ, ಅರ್ಜಿಗಳಿಲ್ಲದೆಯೇ ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಉತ್ತಮ ಶಿಕ್ಷಕರನ್ನು ಕಳೆದ ಆರು ವರ್ಷದಿಂದ ಟ್ರಸ್ಟ್ ಹುಡುಕಿ ಪ್ರಶಸ್ತಿ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಪ್ರೊ.ಎಚ್.ಎಸ್. ಶಾಂತವೀರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts