More

    ವೈಕುಂಠ ಏಕಾದಶಿ ಸಂಭ್ರಮ; ಭದ್ರಾವತಿಯಲ್ಲಿ ತಡರಾತ್ರಿಯಿಂದಲೇ ಕ್ಯೂ

    ಭದ್ರಾವತಿ: ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಸೋಮವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಆಚರಿಸಲಾಯಿತು. ತಡರಾತ್ರಿ 2 ಗಂಟೆಯಿಂದಲೆ ಸರತಿ ಸಾಲಿನಲ್ಲಿ ಭಕ್ತರು ಕಾದು ದೇವರ ದರ್ಶನ ಪಡೆದರು.
    ದೇವಾಲಯದ ಪ್ರಧಾನ ಅರ್ಚಕ ರಂಗನಾಥಶರ್ಮ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಮೂಲದೇವರಿಗೆ ವಿಶೇಷಾಲಂಕಾರ ಮಾಡಿದ ನಂತರ ನಿತ್ಯಪೂಜಾದಿಗಳನ್ನು ನೆರವೇರಿಸಲಾಯಿತು. ನಂತರ ದೇವಾಲಯದ ಸುತ್ತ ಭೂದೇವಿ, ಶ್ರೀದೇವಿ ಸಹಿತನಾದ ಶ್ರೀನಿವಾಸ ದೇವರ ಉತ್ಸವ ಮೂರ್ತಿಯನ್ನು ಚಂಡೆವಾದ್ಯ, ಮಂಗಳವಾದ್ಯ ಸಹಿತವಾಗಿ ಉತ್ಸವ ನಡೆಸಲಾಯಿತು. ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಕೃತಕ ವಿದ್ಯುತ್ ದೀಪಾ ಅಲಂಕೃತ ರಾಜಗೋಪುರದ ವೈಕುಂಠ ಮಹಾದ್ವಾರದ ಪೂಜೆ ಮಾಡಿ, ಬೆಳಗಿನ ಜಾವ 4.30ಕ್ಕೆ ವೈಕುಂಠದ ಸಪ್ತದ್ವಾರಗಳನ್ನು ಓಂ ನಾರಾಯಣ ನಾಮಸ್ಮರಣೆಯೊಂದಿಗೆ ಒಂದೊಂದಾಗಿ ತೆರೆಯಲಾಯಿತು. ಕೊನೆಯ ದ್ವಾರ ತೆರೆದು ಶ್ರೀ ಲಕ್ಷ್ಮೀ ಸಹಿತನಾದ ವೈಕುಂಠನಾಥನ ದರ್ಶನವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಗೋವಿಂದಾ ಗೋವಿಂದ ಎಂದು ಸ್ಮರಣೆ ಮಾಡುತ್ತ ದರ್ಶನ ಪಡೆದರು. ಬಳಿಕ ಭೂದೇವಿ ಶ್ರೀದೇವಿ ಸಹಿತನಾದ ಶ್ರೀ ಶ್ರೀನಿವಾಸ ದೇವರ ದೇವರ ಉತ್ಸವ ಮೂರ್ತಿಯನ್ನು ವೈಕುಂಠದ ರಾಜಗೋಪುರದ ಪ್ರವೇಶ ದ್ವಾರದ ಬಳಿ ಉಯ್ಯಲೆಯಲ್ಲಿ ಪ್ರತಿಷ್ಠಾಪಿಸಲಾಯಿತು.
    ಮಂಗಳವಾದ್ಯ ಸಹಿತವಾಗಿ ವಿಷ್ಣು ಸಹಸ್ರನಾಮ ಪಠಣದೊಂದಿಗೆ ಗೋವಿಂದ ಗೋಪಾಲ ಎನ್ನುತ್ತ ಮಕ್ಕಳು, ಯುವತಿಯರು ಕೋಲಾಟಾಡುತ್ತ ರಥಬೀದಿಯಲ್ಲಿ ಶ್ರೀ ಗೋದಾದೇವಿಯ ಉತ್ಸವದಲ್ಲಿ ಭಾಗವಹಿಸಿದ್ದರು. ವೇದ ಪಾಠಶಾಲೆ ವಿದ್ಯಾರ್ಥಿಗಳು ವೇದ ಪಠಣ ಮಾಡಿದರು. ವಿಷ್ಣು ಸಹಸ್ರನಾಮ ಮಹಿಳಾ ಮಂಡಳಿಯವರು ವಿಷ್ಣು ಸಹಸ್ರನಾಮ ಪಠಿಸಿದರು.
    ಮಿಲಿಟರಿ ಕ್ಯಾಂಪ್ ಶ್ರೀ ಶ್ರೀನಿವಾಸ ದೇವಸ್ಥಾನದಲ್ಲಿಯೂ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ವೈಕುಂಠ ನಾಥನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಭಕ್ತರು ಬೆಳಗ್ಗಿನಿಂದಲೇ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts