More

    ವೇಮಗಲ್‌ನಲ್ಲಿ ಸಂತೆ ಮೈದಾನಕ್ಕೆ ಕಾಯಕಲ್ಪ

    ವೇಮಗಲ್: ವೇಮಗಲ್‌ನಲ್ಲಿ ದಶಕಗಳಿಂದ ಕಾಡುತ್ತಿದ್ದ ಸಂತೆ ಮೈದಾನದ ಸಮಸ್ಯೆಗೆ ಕಡೆಗೂ ಮುಕ್ತಿಸಿಕ್ಕಿದ್ದು, ಸೀತಿ ರಸ್ತೆಯಲ್ಲಿನ ತಾಲೂಕು ಮಟ್ಟದ ಕ್ರೀಡಾಂಗಣದ ಸಮೀಪದ ಸುಮಾರು 1 ಎಕರೆ ಜಾಗದಲ್ಲಿ ಜ.20ರಿಂದ ಸಂತೆ ವಹಿವಾಟು ಆರಂಭವಾಗಲಿದೆ.

    ಕೋಲಾರ ತಾಲೂಕಿನ ವೇಮಗಲ್ ಹೋಬಳಿ ಕೇಂದ್ರ ಸ್ಥಾನ. ಪ್ರಸ್ತುತ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುತ್ತಿದೆ. ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಹೊಂದುತ್ತಿದೆ. ಜನಸಂಖ್ಯೆ, ವಾಹನ ದಟ್ಟಣೆ ಹೆಚ್ಚುತ್ತಿದೆ. ಪಟ್ಟಣವಾಗಲಿರುವ ಪ್ರದೇಶಕ್ಕೆ ತಕ್ಕಂತೆ ಮೂಲಸೌಲಭ್ಯ ಹೊಂದುವುದು ಅಗತ್ಯವಾಗಿರುವುದರಿಂದ ವಾರದ ಸಂತೆಗೆ ಕಾಯಂ ಸ್ಥಳಾವಕಾಶ ಸಿಕ್ಕಿದೆ.

    ವೇಮಗಲ್‌ನಲ್ಲಿ ಪ್ರತಿ ಬುಧವಾರ ವಾರದ ಸಂತೆ ನಡೆಯುವುದು ರೂಢಿ. ಹಿಂದೆ ಅಂಗಡಿ ಬೀದಿಯ ದ್ರೌಪದಮ್ಮ ಧರ್ಮರಾಯ ದೇವಾಲಯದ ಎದುರಿನ ಅಶ್ವತ್ಥಕಟ್ಟೆ ಮೇಲೆ ಹಾಗೂ ಅಕ್ಕ-ಪಕ್ಕ ಸಂತೆ ನಡೆಯುತ್ತಿತ್ತು. ಊರು ಬೆಳೆದ ನಂತರ ವೇಮಗಲ್ ಠಾಣೆ ಪಕ್ಕದಲ್ಲಿನ ಖಾಸಗಿ ಜಾಗದಲ್ಲಿ ಕೆಲ ವರ್ಷ ನಡೆಯಿತು. ಮಾಲೀಕರು ಅಂಗಡಿ ಮಳಿಗೆ ಸ್ಥಾಪಿಸಿದ ನಂತರ ಇಲ್ಲಿಂದ ಸರ್.ಎಂ.ವಿಶ್ವೇಶ್ವರಯ್ಯ ಮಿನಿ ಕ್ರೀಡಾಂಗಣಕ್ಕೆ ಸಂತೆ ಸ್ಥಳಾಂತರಿಸಿ ಪ್ರತಿ ಬುಧವಾರ ಸಂತೆ ನಡೆಸಲು ತೀರ್ಮಾನಿಸಿದ್ದರು.

    ಸಂತೆಗೆ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದುದರಿಂದ ಕಲ್ವಮಂಜಲಿ ಗ್ರಾಮಸ್ಥರು, ವಾಹನ ಸವಾರರು ಪಂಚಾಯಿತಿಗೆ ಅರ್ಜಿಗಳನ್ನು ನೀಡಿದ್ದರು. ಆಗ ಪಂಚಾಯಿತಿಯವರು ಕೆಲವು ಷರತ್ತುಗಳನ್ನು ಹಾಕಿ ಕೆಲ ದಿನದ ಮಟ್ಟಿಗೆ ಕ್ರೀಡಾಂಗಣದ ಒಳಗೆ ಸಂತೆ ಮಾಡಲು ಸೂಚಿಸಲಾಗಿತ್ತು.

    ಕಳೆದ ಮಾರ್ಚ್ 24ರಿಂದ ಕರೊನಾ ಲಾಕ್‌ಡೌನ್ ಘೋಷಣೆ ನಂತರ ವಾರದ ಸಂತೆ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ಸಡಿಲಿಕೆ ನಂತರ ಕೆಲ ವ್ಯಾಪಾರಸ್ತರು ಬಸ್ ನಿಲ್ದಾಣದಲ್ಲೆ ನಿತ್ಯ ವಹಿವಾಟು ನಡೆಸುತ್ತಿದ್ದರು. ಇಲ್ಲಿನ ಅನನುಕೂಲವನ್ನು ಮನಗಂಡ ಗ್ರಾಪಂ ಪಿಡಿಒ ಬಿ.ಆರ್.ರಮೇಶ್‌ಬಾಬು ದಶಕಗಳ ಹಿಂದೆಯೇ ಸಂತೆ ಮೈದಾನಕ್ಕೆಂದು ಗುರುತಿಸಿ ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ನರೇಗಾ ಯೋಜನೆಯಡಿ 5 ಲಕ್ಷ ರೂ. ಅಧಿಕ ವೆಚ್ಚ ಮಾಡಿ ತರಕಾರಿ ಜೋಡಿಸಲು ಎತ್ತರದ ದಿಂಡುಗಳನ್ನು ಕಟ್ಟಿ, ನೀರು, ಶೌಚಗೃಹ ಇನ್ನಿತರ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ.

    100ಕ್ಕೂ ಹೆಚ್ಚು ಹಣ್ಣಿ, ತರಕಾರಿ ವ್ಯಾಪಾರಸ್ಥರು, ಸಂತೆಗೆ ಬರುವುದರಿಂದ ಜಾಗದ ಕಿತ್ತಾಟ ತಪ್ಪಿಸಲು ಸೋಮವಾರ ವ್ಯಾಪಾರಸ್ಥರ ಸಮ್ಮುಖದಲ್ಲೇ ಗ್ರಾಪಂನಲ್ಲಿ ಲಾಟರಿ ಮೂಲಕ ಸ್ಥಳ ಗೊತ್ತುಪಡಿಸಲಾಗಿದೆ. ಸಂತೆ ಮೈದಾನದ ಶುಲ್ಕ ವಸೂಲಾತಿಗೆ ಗ್ರಾಪಂನಿಂದ ಹರಾಜು ಕೂಗಿ ಗುತ್ತಿಗೆ ನೀಡಲಾಗಿದೆ. ಇನ್ನು ಮುಂದೆ ಪ್ರತಿ ಬುಧವಾರ ನಿಗದಿತ ಸ್ಥಳದಲ್ಲಿ ಸಂತೆ ಸುಸೂತ್ರವಾಗಿ ನಡೆಯಲಿದೆ.

    ನರೇಗಾ ಯೋಜನೆ ಬಳಸಿಕೊಂಡು ಸಂತೆ ಮೈದಾನ ಅಭಿವೃದ್ಧಿಪಡಿಸಿ ಸುಸಜ್ಜಿತ ಸ್ಥಳದಲ್ಲಿ ಪ್ರತಿ ಬುಧವಾರ ಸಂತೆ ನಡೆಯಲಿದೆ. ಪ್ರತಿ ಗುರುವಾರ ಕುರಿ, ಮೇಕೆ, ಜಾನುವಾರುಗಳ ಸಂತೆಗೂ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು, ರೈತರು ಸದುಪಯೋಗ ಪಡೆಯಬೇಕು.
    ಬಿ.ಆರ್.ರಮೇಶ್‌ಬಾಬು, ಗ್ರಾಪಂ ಪಿಡಿಒ, ವೇಮಗಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts