More

    ವೇತನ ಚೀಟಿ ಸಲ್ಲಿಕೆ ಆದೇಶ ಕೈಬಿಡಿ  – ಕೆ.ಮಹಾಂತೇಶ್ ಆಗ್ರಹ -ಕಟ್ಟಡ ಕಾರ್ಮಿಕರ ಜಿಲ್ಲಾ ಸಮ್ಮೇಳನ 

    ದಾವಣಗೆರೆ: ಕಟ್ಟಡ ಕಾರ್ಮಿಕರ ಸದಸ್ಯತ್ವ ಮುಂದುವರಿಸಲು ವೇತನ ಚೀಟಿ ಅಥವಾ ಹಾಜರಾತಿ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕೆಂಬ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಆಗ್ರಹಿಸಿದರು.
    ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಸಿಐಟಿಯು ನೇತೃತ್ವದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
    ನಕಲಿ ಕಾರ್ಡ್‌ದಾರರನ್ನು ತಡೆಹಿಡಿಯಲು ಅಭ್ಯಂತರವಿಲ್ಲ. ಆದರೆ ಕಾರ್ಡ್ ನವೀಕರಣಕ್ಕೆ ಆದೇಶ ಮಾಡಿರುವುದು ಸರಿಯಲ್ಲ. ಮೇಸ್ತ್ರಿ ಬಳಿಯೇ ವೇತನ ಚೀಟಿ, ಹಾಜರಾತಿ ಇಲ್ಲವೆಂದ ಮೇಲೆ ಕಟ್ಟಡ ಕಾರ್ಮಿಕರ ಬಳಿ ಅದು ಬರುವುದಾದರೂ ಹೇಗೆ. ಆದೇಶ ಕೈಬಿಡಬೇಕೆಂದು ಆಗ್ರಹಿಸಿದರು.
    ಕಟ್ಟಡ ಕಾರ್ಮಿಕರಿಗೆ ಆಂದ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿಲ್ಲದ ಮಾದರಿ ಸೌಲಭ್ಯಗಳು ಕರ್ನಾಟಕದಲ್ಲಿವೆ. ಅವು ದುರ್ಬಳಕೆಯಾಗದಂತೆ ತಡೆಹಿಡಿಯಬೇಕು. ಕಾರ್ಮಿಕ ಇಲಾಖೆ ಕಚೇರಿಗಳ ಬಳಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲದ ಇಂಥವರ ಕಡಿವಾಣಕ್ಕೆ ಸಂಘಟನೆ ಮುಂದಾಗಬೇಕು ಎಂದರು.
    ಕಟ್ಟಡ ಕಾರ್ಮಿಕರ ಕಲ್ಯಾಣಮಂಡಳಿಯಲ್ಲಿರುವ 12,500 ಕೋಟಿ ರೂ. ಹಣ ಸರಿಯಾಗಿ ಬಳಕೆಯಾಗಬೇಕು. ಸಂಘಟನೆ ಹೋರಾಟದ ಫಲವಾಗಿ ವಿವಿಧ ಸೇವಾ ಸೌಲಭ್ಯಗಳ ಸಹಾಯಧನದ ಮೊತ್ತ ಏರಿಕೆಯಾಗಿವೆ. ಕಟ್ಟಡ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗಳ ಕುರಿತ ಚರ್ಚೆಗೆ ಕಾರ್ಮಿಕ ಸಂಘಟನೆಗಳೊಂದಿಗೆ ಜು.20ರಂದು ಸಭೆ ಕರೆಯುವುದಾಗಿ ಹೇಳಿದಂತೆ ಸಚಿವರು ನಡೆದುಕೊಳ್ಳಲಿ ಎಂದು ಆಗ್ರಹಿಸಿದರು.
    ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಮೊತ್ತವನ್ನು 10 ಸಾವಿರ ರೂ. ಗೆ ಏರಿಸಬೇಕು. ಅವರಿಗೆ ಭದ್ರತೆ ಕಲ್ಪಿಸಬೇಕು. ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಿದ್ದನ್ನು ಕೈಬಿಡಬೇಕು. ಬೋಗಸ್ ಕಾರ್ಡ್‌ಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಆಗಸ್ಟ್ 20ರಂದು ದೇಶವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
    ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣಕುಮಾರ್ ಮಾತನಾಡಿ ದೇಶವನ್ನು ಕಟ್ಟುವ ಕೆಲಸದಲ್ಲಿ ಕಟ್ಟಡ ಕಾರ್ಮಿಕರ ಪರಿಶ್ರಮವಿದೆ. ಆದರೆ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸರ್ಕಾರಿ ನೇಮಕಾತಿಯೇ ಕಡಿಮೆ ಆಗಿರುವಾಗ ಹೊರಗುತ್ತಿಗೆ ಹೆಸರಲ್ಲಿ ಕಾರ್ಮಿಕರ ಜೀತಗಾರಿಕೆ ನಡೆಯುತ್ತಿದೆ ಎಂದು ವಿಷಾದಿಸಿದರು.
    ಗ್ರಾಮ ಪಂಚಾಯ್ತಿಗಳ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಬಸವರಾಜು ಮಾತನಾಡಿ ವಸತಿ ಉದ್ದೇಶದ ಕಟ್ಟಡ ನಿರ್ಮಾಣ ಮಾಡುವ ಮಾಲೀಕರು ಶೇ.1ರಷ್ಟು ಸೆಸ್ ಸಲ್ಲಿಸಬೇಕಿದೆ. ವಾಣಿಜ್ಯ, ಕೈಗಾರಿಕಾ ಕಟ್ಟಡಗಳಲ್ಲಿಯೂ ಇದಕ್ಕೆ ರಿಯಾಯ್ತಿ ಇಲ್ಲ. ಬಹುತೇಕ ಕಟ್ಟಡ ಕಾರ್ಮಿಕರಿಗೆ ತಮಗಿರುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡಿಲ್ಲ ಎಂದರು.
    ಬೀದಿಬದಿ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಮ್ಮ ಗಜೇಂದ್ರಪ್ಪ ಮಾತನಾಡಿ ಕಾರ್ಮಿಕರಲ್ಲಿ ಸಂಘಟನೆ ಬಲ ಇಲ್ಲವಾದರೆ ಜನಪ್ರತಿನಿಧಿಗಳೂ ಸಹ ಮಾತು ಕೇಳುವುದಿಲ್ಲ. ನ್ಯಾಮತಿ ಭಾಗದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದ್ದು ಇವು ನಿಲ್ಲಬೇಕು ಎಂದರು.
    ಎಲ್‌ಐಸಿ ಏಜೆಂಟ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಿವಮೂರ್ತಿ ಮಾತನಾಡಿ ಕಟ್ಟಡ ಕಾರ್ಮಿಕರು ಭವಿಷ್ಯದ ಹಿತದೃಷ್ಟಿಯಿಂದ ಗುಂಪು ವಿಮೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜು, ನೇತ್ರಾವತಿ, ಸಹ ಸಂಚಾಲಕ ಕೆ. ಮುದಿ ಮಲ್ಲನಗೌಡ, ಕೆ. ಶ್ರೀನಿವಾಸಮೂರ್ತಿ, ಕುಂದೂರು ಮುಜೀಬ್, ಬಾತಿ ಶಿವಣ್ಣ, ಆಲೂರು ಮಂಜುನಾಥ, ಹೊಸೂರು ಲೋಕೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts