More

    ವೀರಶೈವ ಲಿಂಗಾಯತ ಸಮುದಾಯ 2 ಎಗೆ ಸೇರ್ಪಡೆ ಮಾಡಿ: ಶಾಸಕ ಯಶವಂತರಾಯಗೌಡ ಪಾಟೀಲ

    ವಿಜಯಪುರ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ರಾಜ್ಯ ಸರ್ಕಾರ ದಶಕದ ಬೇಡಿಕೆ ಈಡೇರಿಸಿದ್ದು ಸರ್ಕಾರಕ್ಕೆ ಧನ್ಯವಾದ ತಿಳಿಸುವುದರ ಜತೆಗೆ ಸದರಿ‌ ಸಮುದಾಯವನ್ನು 2 ಎ ಗೆ ಸೇರ್ಪಡೆ ಮಾಡಲು ಇಂಡಿ ವಿಧಾನ ಸಭೆ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು.

    ಕಳೆದ ಮಾರ್ಚ್ ನಲ್ಲಿ ನಡೆದ ಅಧಿವೇಶನದಲ್ಲಿ ನಾನು ವೀರಶೈವ ಅಭಿವೃದ್ಧಿ ನಿಗಮದ
    ಬಗ್ಗೆ ಧ್ವನಿ ಎತ್ತಿದಾಗ ಅನೇಕ ಶಾಸಕರು ಬೆಂಬಲಿಸಿದ್ದರು. ಸರ್ಕಾರ ಆ ಬೇಡಿಕೆಗೆ ಇಂದು ಸ್ಪಂದಿಸಿದ್ದು ಸ್ವಾಗತಾರ್ಹ. ಸಮುದಾಯದ ಪರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ವೀರೇಶ್ವರ ಲಿಂಗಾಯತ ಸಮುದಾಯದಲ್ಲಿ ಅನೇಕರು ಬಡವರಿದ್ದಾರೆ. ಸಮುದಾಯಕ್ಕೆ ತನ್ನ ದೇ ಆದ ಸಾಂಸ್ಕೃತಿಕ ಹಿರಿಮೆ ಇದೆ. ಸದರಿ ಅಭಿವೃದ್ಧಿ ನಿಯಮಕ್ಕೆ ಇಂತಿಷ್ಟೆ ಅನುದಾನ ನೀಡಬೇಕೆಂದು ನಾನು ಒತ್ತಾಯಿಸಲ್ಲ. ಏಕೆಂದರೆ ಕರೊನಾ ಹಿನ್ನೆಲೆ ಸರ್ಕಾರ ಆರ್ಥಿಕವಾಗಿ ಬಳಲುತ್ತಿರುವುದು ನನ್ನ ಗಮನಕ್ಕೆ ಇದೆ. ಹೀಗಾಗಿ ಸರ್ಕಾರ ತಕ್ಕಮಟ್ಟಿಗೆ ಅನುದಾನ ನೀಡಲಿ ಎಂದು ಅವರು ತಿಳಿಸಿದರು.

    ಈ ಹಿಂದೆ ದೇವರಾಜ ಅರಸು ನಿಗಮದಲ್ಲಿದ್ದಾಗ ಸಮುದಾಯಕ್ಕೆ ಅಷ್ಟೊಂದು ಅನುಕೂಲ ಸಿಕ್ಕಿರಲಿಲ್ಲ. ನಾನು ಸದನದಲ್ಲಿ ಧ್ವನಿ‌ ಎತ್ತಿದಾಗ ದಲಿತ ಶಾಸಕ‌ ಅನ್ನದಾನಿ ಸಹ ಆ ಬಗ್ಗೆ ಮನವರಿಕೆ ಮಾಡಿದ್ದರು. ಅವರನ್ನು ನಾನಿಂದು ನೆನೆಯುವೆ. ಜತೆಗೆ ಈಶ್ವರ ಖಂಡ್ರೆ ಸೇರಿದಂತೆ ಅನೇಕರು ಸಹಕರಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

    ಯಾವುದೇ ಸರ್ಕಾರ ಆಗಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಡಿ ಸಾಗಬೇಕು. ಸರ್ಕಾರದ ಮೇಲೆ ನಾವೆಲ್ಲರೂ ಒತ್ತಡ ಹಾಕಿದ ಹಿನ್ನೆಲೆ ಯಡಿಯೂರಪ್ಪ ಅವರು ನಿಗಮ ಮಾಡಿದ್ದಕ್ಕೆ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.

    ಜತೆಗೆ ಒಬಿಸಿ ಪಟ್ಟಿಯಲ್ಲಿ ಕೇಂದ್ರ ಸರ್ಕಾರ ಸೇರಿಸಬೇಕು. ವೀರಶೈವ ಲಿಂಗಾಯತ ಸಮುದಾಯಕ್ಕೆ 2 ಎ ನಲ್ಲಿ ಸೇರ್ಪಡೆ ಮಾಡಬೇಕು. ಇದರಿಂದ ಶೈಕ್ಷಣಿಕವಾಗಿ ಸಾಕಷ್ಟು ಅನುಕೂಲವಾಗಲಿದೆ ಎಂದರು.

    ನೆರೆ ಪರಿಹಾರ: ನೆರೆ ಹಾನಿಗೆ ಸಂಬಂಧಿಸಿದಂತೆ ಆಡಳಿತ ಪಕ್ಷದವರು ಭೀಮೆ ದಡಕ್ಕೆ ಬಂದು ನೋಡಬೇಕು. ನೆರೆ ಹಾನಿಗೆ ಜನರ ಬದುಕು ಕೊಚ್ಚಿಕೊಂಡು ಹೋಗಿದೆ. ನೆರೆಯ ಮಹಾರಾಷ್ಟ್ರ ದ ಸರ್ಕಾರ ಆ ಭಾಗದ ಭೀಮೆ ದಡಕ್ಕೆ ಬಂದು ಹೋಗಿದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ಭೀಮೆ ಜನರ ಸಮಸ್ಯೆ ಆಲಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts