More

    ವೀರಶೈವ ಅಧಿವೇಶನದಲ್ಲಿ ಉತ್ತಮ ಆತಿಥ್ಯ : ಪೂರ್ವಭಾವಿ ಸಭೆಯಲ್ಲಿ ಗಣ್ಯರು, ಮುಖಂಡರ ಚರ್ಚೆ

    ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಹಿನ್ನಲೆಯಲ್ಲಿ ಬರುವ ಮುಖಂಡರು, ಸಮಾಜದವರಿಗೆ ಊಟ-ವಸತಿ ಜತೆಗೆ ಉತ್ತಮ ಆತಿಥ್ಯ ಕಲ್ಪಿಸುವ ಕುರಿತು ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.
    ನಗರದ ಎಂ.ಬಿ.ಎ ಕಾಲೇಜು ಮೈದಾನದಲ್ಲಿ ಡಿ. 23 ಮತ್ತು 24ರಂದು ಆಯೋಜಿಸಿರುವ ಅಧಿವೇಶನಕ್ಕೆ ಬರುವ ಸುಮಾರು 1.5 ಲಕ್ಷ ಸಮಾಜದವರಿಗೆ ಊಟ, ಉಪಾಹಾರ ಕಲ್ಪಿಸಬೇಕು. ಗಣ್ಯರು, ಪ್ರಮುಖರಿಗೆ ನಗರದ ಹಾಸ್ಟೆಲ್‌ಗಳು, ಹೋಟೆಲ್‌ಗಳನ್ನು ತಾಲೂಕು, ಜಿಲ್ಲಾ ಸಮಿತಿಯವರು ಈಗಿನಿಂದಲೇ ನಿಗದಿ ಪಡಿಸಿಕೊಳ್ಳಲು ಸೂಚನೆ ನೀಡಲಾಯಿತು.
    ಬಾಪೂಜಿ ವಿದ್ಯಾಸಂಸ್ಥೆಯ ಹಾಸ್ಟೆಲ್‌ಗಳಿಗೆ ಡಿ. 23ರಂದು ರಜೆ ನೀಡಲಾಗುತ್ತಿದ್ದು ಅವನ್ನು ಬಳಸಿಕೊಳ್ಳಲು ಸೂಚಿಸಲಾಯಿತು. ನಗರದಲ್ಲಿ ಕಲ್ಯಾಣಮಂಟಪಗಳು ಲಭ್ಯವಿಲ್ಲವಾದ್ದರಿಂದ ವಸತಿಗೃಹಗಳನ್ನು ಸಂಪರ್ಕಿಸಿ ಬುಕಿಂಗ್ ಮಾಡುವ ಬಗ್ಗೆಯೂ ಸಲಹೆ ವ್ಯಕ್ತವಾಯಿತು. ಮಹಾ ಅಧಿವೇಶನಕ್ಕೆ ವೀರಶೈವ ಸಮಾಜದ ಎಲ್ಲ ಗುರು-ವಿರಕ್ತರು, ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನಿಸಲು ನಿಶ್ಚಯಿಸಲಾಯಿತು.
    ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಅಧಿವೇಶನವನ್ನು ಕಳೆದ ವರ್ಷ ಸಿದ್ದರಾಮೋತ್ಸವ ಆಯೋಜಿಸಿದ್ದ, ದಾವಣಗೆರೆ ಹೊರವಲಯದ ಎಸ್‌ಎಸ್ ಪ್ಯಾಲೇಸ್ ಮೈದಾನದಲ್ಲಿ ನಡೆಸಬೇಕೆಂದು ಕೆಲವರು ಸಲಹೆ ನೀಡಿದರು. ಆದರೆ ಅಲ್ಲಿ ಗಣ್ಯರು, ಅತಿಥಿಗಳು ವಸತಿ ಸೌಕರ್ಯ ಕಲ್ಪಿಸುವುದು ಕಷ್ಟ. ಹೀಗಾಗಿ ನಿಗದಿಯಾಗಿರುವಂತೆ ಎಂಬಿಎ ಕಾಲೇಜು ಮೈದಾನವೇ ಸೂಕ್ತ ಎಂದು ನಿರ್ಧರಿಸಲಾಯಿತು.
    ಸಭೆಯ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ ಈ ಅಧಿವೇಶನ ಐತಿಹಾಸಿಕ ಕಾರ್ಯಕ್ರಮವಾಗಿದೆ. ಹೀಗಾಗಿ ದಾವಣಗೆರೆಗೆ ಬರುವ ಜನರಿಗೆ ಉತ್ತಮ ಆತಿಥ್ಯ ನೀಡುವ ಜವಾಬ್ದಾರಿ ನಮ್ಮದಾಗಿದೆ. ಕಾರ್ಯಕರ್ತರು, ಸಮಿತಿಗಳು ಹೆಚ್ಚಿನ ಶ್ರಮ ವಹಿಸಬೇಕು. ಸಾಮಾಜಿಕ ಜಾಲತಾಣದಲ್ಲೂ ಹೆಚ್ಚಿನ ಪ್ರಚಾರ ಮಾಡಬೇಕು ಎಂದರು.
    ಉದ್ಯಮಿ ಬಿ.ಸಿ.ಉಮಾಪತಿ ಮಾತನಾಡಿ ವೀರಶೈವ ಮಹಾಧಿವೇಶನ ರಾಜಕೀಯ ಶಕ್ತಿ ಪ್ರದರ್ಶನವಲ್ಲ. ಸಮಾಜದವರು ಸ್ವಯಂಪ್ರೇರಿತವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
    ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಎಸ್.ಎಸ್.ಗಣೇಶ್,
    ರಾಷ್ಟ್ರೀಯ ಕಾರ್ಯದರ್ಶಿ ರೇಣುಕ ಪ್ರಸನ್ನ, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಬಿ.ಜೆ. ರಮೇಶ್, ಮುಖಂಡರಾದ ಕೆ.ಜಿ.ಶಿವಕುಮಾರ್, ಡಾ.ಎಂ.ಜಿ.ಈಶ್ವರಪ್ಪ, ಬಾ.ಮಾ.ಬಸವರಾಜಯ್ಯ, ಪುಷ್ಪಾ ವಾಲಿ, ಯಶೋದಮ್ಮ, ಡಾ. ಅರುಣ್, ಪ್ರಕಾಶ್ ಪಾಟೀಲ್, ಅರವಿಂದ್, ಪ್ರೊ.ವೈ.ವೃಷಭೇಂದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts