More

    ವೀರಗಲ್ಲು ಬಳಿ ತಳ್ಳಾಟ-ನೂಕಾಟ

    ನರಗುಂದ: ಬಂಡಾಯದ ನಾಡು ನರಗುಂದದಲ್ಲಿ ಗುರುವಾರ ಹಮ್ಮಿಕೊಂಡಿದ್ದ 42ನೇ ರೈತ ಹುತಾತ್ಮ ದಿನಾಚರಣೆ ರೈತ, ಕನ್ನಡಪರ ಸಂಘಟನೆಗಳು ಹಾಗೂ ಸಚಿವ ಸಿ.ಸಿ. ಪಾಟೀಲ ಅವರ ಬೆಂಬಲಿಗರ ಮಧ್ಯೆ ಪರಸ್ಪರ ತಳ್ಳಾಟ-ನೂಕಾಟಕ್ಕೆ ಸಾಕ್ಷಿಯಾಯಿತು.
    ವಿವಿಧ ಸಂಘಟನೆಗಳ ಕಾರ್ಯಕರ್ತರು ರೈತ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಮುಂದಾದಾಗ ವೀರಗಲ್ಲಿನ ಕಬ್ಬಿಣದ ಗೇಟ್ ಮುರಿದಿರುವುದನ್ನು ಗಮನಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗೇಟ್ ಅನ್ನು ತಕ್ಷಣವೇ ರಿಪೇರಿ ಮಾಡಿಸಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಯನ್ನು ಅಮಾನತು ಮಾಡಬೇಕು. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸಿದ್ದರು ಆದರೆ, ಅಧಿಕಾರಕ್ಕೆ ಬಂದ ನಂತರ ಯಾವುದೇ ಕ್ರಮ ಕೈಗೊಳ್ಳದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
    ವೀರಗಲ್ಲು ನಿರ್ವಣಕ್ಕೆ ಜಾಗ ನೀಡುವಂತೆ 42 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಿವೇಶನ ಒದಗಿಸುವ ಬಗ್ಗೆ ತಹಸೀಲ್ದಾರರು ಲಿಖಿತವಾಗಿ ಬರೆದುಕೊಡಬೇಕು. ಅಲ್ಲಿಯವರೆಗೂ ಯಾವುದೇ ಪಕ್ಷದ ಮುಖಂಡರಿಗೆ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
    ಈ ವೇಳೆ ಬಸವೇಶ್ವರ ವರ್ತಲದಿಂದ ಬಿಜೆಪಿಯ ನೂರಾರು ಕಾರ್ಯಕರ್ತರೊಂದಿಗೆ ಸಚಿವ ಸಿ.ಸಿ. ಪಾಟೀಲ ಅವರು ಪಾದಯಾತ್ರೆ ಮೂಲಕ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಆಗಮಿಸಿದರು. ಅದಕ್ಕೆ ಧರಣಿನಿರತರು ಅವಕಾಶ ನೀಡದ ಕಾರಣ ಸ್ಥಳದಲ್ಲಿ ಕೆಲಕಾಲ ತಳ್ಳಾಟ-ನೂಕಾಟ ಉಂಟಾಯಿತು. ಸಚಿವರು ವೀರಗಲ್ಲಿಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಆಕ್ರೋಶಗೊಂಡ ಹೋರಾಟಗಾರರು ಕೆಲವರೊಂದಿಗೆ ಕೈ ಕೈ ಮಿಲಾಯಿಸಿ, ವಾಗ್ವಾದಕ್ಕಿಳಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
    ವೀರಗಲ್ಲು ನಿರ್ವಣಕ್ಕೆ ಸಂಬಂಧಿಸಿದಂತೆ ಆ.8ರೊಳಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಭೆ ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲಿ ಎಲ್ಲ ಸಂಘಟನೆಗಳ ಮುಖಂಡರು, ಕಾರ್ಯಕರ್ತರೊಂದಿಗೆ ರ್ಚಚಿಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಹಸೀಲ್ದಾರ್ ಎ.ಡಿ. ಅಮರಾವದಗಿ ಅವರು ಪತ್ರ ಬರೆದುಕೊಟ್ಟಿದ್ದರಿಂದ ಜಯ ಕರ್ನಾಟಕ, ರೈತ ಸಂಘದ ಕಾರ್ಯಕರ್ತರು ಧರಣಿ ಕೈಬಿಟ್ಟರು.
    ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಮಹದಾಯಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ 100 ಕೋಟಿ ರೂ. ಅನುದಾನ ನೀಡಿದೆ. ಕೆಲವರು ಪ್ರಚಾರಕ್ಕಾಗಿ ಹೋರಾಟ ಮಾಡುತ್ತಾರೆ. ಆದರೆ, ನಾವು ಯಾವುದೇ ಡೊಂಬರಾಟದ ಹೋರಾಟ ಮಾಡುವುದಿಲ್ಲ. ಯೋಜನೆ ಅನುಷ್ಠಾನ ವಿಳಂಭವಾಗಿರುವುದಕ್ಕೆ ರೈತರಿಗೆ ವೈಯಕ್ತಿಕವಾಗಿ ನೋವಿರಬಹುದು. ಕೋಟ್ಯಂತರ ರೂ. ಅನುದಾನದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳ ನವೀಕರಣ ಮಾಡಿದ್ದೇವೆ. ಯೋಜನೆ ಕುರಿತು ನಾನು ಬಹಿರಂಗವಾಗಿ ಹೇಳಿಕೆ ನೀಡಿದರೆ ಕಾನೂನಾತ್ಮಕ ದೃಷ್ಟಿಯಿಂದ ನಮ್ಮ ರಾಜ್ಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಯಾವುದೇ ಹೇಳಿಕೆ ನೀಡದೆ ಮಹತ್ವದ ಯೋಜನೆ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts