More

    ವಿ.ವಿ.ಸಾಗರ ನೀರು 158 ಗ್ರಾಮಗಳಿಗೆ

    ಚಿತ್ರದುರ್ಗ: ತಾಲೂಕಿನ 158 ಗ್ರಾಮಗಳಿಗೆ ವಿ.ವಿ.ಸಾಗರ ಜಲಾಶಯದಿಂದ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಭರವಸೆ ನೀಡಿದರು.

    ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ನಗರಸಭೆಯಿಂದ ತರಾಸು ರಂಗಮಂದಿರದಲ್ಲಿ ಬುಧುವಾರ ನಡೆದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

    ಕುಡಿಯುವ ನೀರಿನ ಬವಣೆ ನಿವಾರಣೆಗೆ ಶಾಶ್ವತ ಪರಿಹಾರ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ತಾಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಲ್ಲಿನ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ಗ್ರಾಮಸ್ಥರು ತಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಿಎಂ ಸಿದ್ದರಾಮಯ್ಯ ಅವರ ದೂರದೃಷ್ಟಿ ಫಲವಾಗಿ ಸರ್ಕಾರಿ ಅಧಿಕಾರಿಗಳೇ ಜನರ ಬಳಿಗೆ ತೆರಳಿ ಸಮಸ್ಯೆ ಆಲಿಸುವಂತಾಗಿದೆ. ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಬಗೆಹರಿಸಲಾಗುವುದು. 3 ತಿಂಗಳ ಬಳಿಕ ನಡೆಯಲಿರುವ ಚಿತ್ರದುರ್ಗ ತಾಲೂಕಿನ ಜನತಾ ದರ್ಶನದಲ್ಲಿ ಪರಿಹಾರ ದೊರಕದವರು ಜನಪ್ರತಿನಿಧಿಗಳ ಗಮನಕ್ಕೆ ತರಬಹುದು ಎಂದರು.

    ಈ ಹಿಂದೆ ತಾಲೂಕಿನ ಎಸ್ಸಿ, ಎಸ್ಟಿ ವರ್ಗಕ್ಕೆ ಮಂಜೂರಾಗಿದ್ದ 822 ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಈಗ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಬರ ಸಂಬಂಧ ಗ್ರಾಮೀಣ ಭಾಗದಿಂದ ವಲಸೆ ತಪ್ಪಿಸಲು ನರೇಗಾದಡಿ 150 ದಿನಗಳ ಕೆಲಸ ನೀಡಲಾಗುತ್ತಿದೆ. ಇದರಡಿ ರೈತರು ಜಮೀನುಗಳಿಗೆ ಬದುಗಳನ್ನು ನಿರ್ಮಿಸಿಕೊಳ್ಳಬಹುದು ಎಂದು ಹೇಳಿದರು.

    ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಪ್ರತಿ 15 ದಿನಗಳಿಗೊಮ್ಮೆ ಜಿಲ್ಲೆಯ ತಾಲೂಕೊಂದರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು. ಜನರಿಂದ ಸ್ವೀಕರಿಸಿದ ಅಹವಾಲು ವಿಳಂಬ ಮಾಡದೆ ತಕ್ಷಣ ಬಗೆಹರಿಸಲಾಗುವುದು. ಸಕಾಲದಲ್ಲಿ ಜನರಿಗೆ ಸೇವೆ ನೀಡಿ ಸರ್ಕಾರದ ಯೋಜನೆ ತಲುಪಿಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.

    ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಪಂ ಅಭಿವೃದ್ಧಿ, ಅರ್ನಿಬಂಧಿತ, ಡಿಎಂಎಫ್ ಅನುದಾನದಡಿ 16 ಫಲಾನುಭವಿಗಳಿಗೆ ಮೊಪೈಡ್ ತ್ರಿಚಕ್ರವಾಹನ ವಿತರಿಸಲಾಯಿತು.

    ಗೃಹಲಕ್ಷ್ಮೀ, ಸುಕನ್ಯಾ ಸಮೃದ್ಧಿ, ಇಂದಿರಾಗಾಂಧಿ ವೃದ್ಧಾಪ್ಯ, ಅಂಗವಿಕಲರ ವೇತನ, 94 ‘ಸಿ’ ಅಡಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಿದ ಹಕ್ಕು ಪತ್ರ, ಆತ್ಮಹತ್ಯೆ ಪ್ರಕರಣದಲ್ಲಿ ರೈತರ ಕುಟುಂಬದವರಿಗೆ ಪರಿಹಾರ ಧನ, ರೇಷ್ಮೆ ಮನೆ ನಿರ್ಮಾಣಕ್ಕೆ ಸಹಾಯಧನದ ಚೆಕ್ ಸೇರಿ ಮಂಜೂರಾತಿ ಆದೇಶ ಪತ್ರ, ಸೌಲಭ್ಯ ವಿತರಿಸಲಾಯಿತು.

    ಜಿಪಂ ಸಿಇಒ ಎಸ್.ಜಿ.ಸೋಮಶೇಖರ್, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ತಾಪಂ ಇಒ ಹನುಮಂತಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts