More

    ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್

    ಕಾರವಾರ: 1- ಸ್ನಾನಗೃಹದಲ್ಲಿ ಬಿದ್ದು ತಲೆಗೆ ಪೆಟ್ಟಾದ ನಗರದ ವ್ಯಕ್ತಿಯೊಬ್ಬರನ್ನು ಕ್ರಿಮ್್ಸ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಆದರೆ, ತಲೆಯ ಶಸ್ತ್ರ ಚಿಕಿತ್ಸೆ ಮಾಡುವ ವ್ಯವಸ್ಥೆ ಇಲ್ಲಿಲ್ಲದ ಕಾರಣ ಅವರನ್ನು ಉಡುಪಿ ಅಥವಾ ಮಂಗಳೂರು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಅವರು ಸಾವನ್ನಪ್ಪಿದರು.

    2-ಗರ್ಭಿಣಿಯೊಬ್ಬಳ ಹೆರಿಗೆಗೆ ಸಮಸ್ಯೆಯಾದ ಕಾರಣ ಆಕೆಯನ್ನು ಗೋವಾ ಬಾಂಬೋಲಿಂ ಆಸ್ಪತ್ರೆಗೆ ಕೊಂಡೊಯ್ಯಲು ಶಿಫಾರಸು ಮಾಡಲಾಗುತ್ತದೆ. ಆಕೆಯನ್ನು ಕರೆದೊಯ್ಯಲು ಉಕ ಜಿಲ್ಲಾಧಿಕಾರಿ ಅನುಮತಿ ಪತ್ರ ನೀಡಿದ್ದರು. ಆದರೆ, ಗೋವಾ ಸರ್ಕಾರದಿಂದ ಅನುಮತಿ ಪಡೆಯಬೇಕು ಎಂಬ ಕಾರಣ ನೀಡಿ ಗೋವಾ ಗಡಿಯಲ್ಲಿ ಆಂಬುಲೆನ್ಸ್ ತಡೆಯಲಾಯಿತು. ಹೆರಿಗೆ ನೋವಿನಲ್ಲಿ ಬಳಲುತ್ತಿದ್ದ ಗರ್ಭಿಣಿ ಇದ್ದ ಆಂಬುಲೆನ್ಸ್ ಸುಮಾರು ಎರಡು ತಾಸು ಗೋವಾ ಗಡಿಯಲ್ಲಿ ನಿಲ್ಲುವಂತಾಯಿತು. ಕರೊನಾ ಸಮಯದಲ್ಲಿ ಕಾರವಾರದಲ್ಲಿ ನಡೆದ ಆರೋಗ್ಯ ತುರ್ತು ಪರಿಸ್ಥಿತಿಯ ಎರಡು ಸನ್ನಿವೇಶಗಳಿವು. ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಇಂಥ ಹತ್ತಾರು ಸಂದರ್ಭಗಳು ಬಂದಿವೆ. ತುರ್ತು ಚಿಕಿತ್ಸೆ ಸಿಗದೇ ಮೃತಪಟ್ಟವರಿದ್ದಾರೆ.

    ಜಿಲ್ಲೆಯಲ್ಲಿ ಅಂಥ ಸೌಲಭ್ಯವಿಲ್ಲದ ಕಾರಣ ಆರೋಗ್ಯ ಸೌಲಭ್ಯ ಪಡೆಯಲು ಬೇರೆ ಜಿಲ್ಲೆ, ರಾಜ್ಯಗಳ ಬಳಿ ಉತ್ತರ ಕನ್ನಡ ಅಕ್ಷರಶಃ ಅಂಗಲಾಚುವ ಪರಿಸ್ಥಿತಿ ನಿರ್ವಣವಾಗಿದೆ. ಉಡುಪಿ ಗಡಿಯಲ್ಲಿ ಆಂಬುಲೆನ್ಸ್ ಕೊಂಡೊಯ್ದು ಅಲ್ಲಿನವರ ಪರವಾನಗಿಗಾಗಿ ಕಾದು ನಿಲ್ಲುವ ದಯನೀಯ ಪರಿಸ್ಥಿತಿ ಬಂದೊದಗಿದೆ. ಜಿಲ್ಲೆಗೆ ತುರ್ತು ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅತಿ ಅವಶ್ಯಕತೆ ಕರೊನಾ ಸಮಯದಲ್ಲಿ ಸ್ಪಷ್ಟವಾಗುತ್ತಿದೆ.

    ಅಪಘಾತ, ಹೃದಯಾಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ಇಲ್ಲಿನ ಜನರ ಜೀವ ಉಳಿಸುವ ವ್ಯವಸ್ಥೆ ಇಲ್ಲೇ ಬೇಕು ಎಂದು ಹಿಂದಿನಿಂದಲೇ ಕೂಗಿದೆ. ‘ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್’ ಎಂಬ ಅಭಿಯಾನ ಕಳೆದ ವರ್ಷ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿತ್ತು. ಅದಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿತ್ತು. ಆಳುವವರಿಂದ ಭರವಸೆಯೂ ಸಿಕ್ಕಿತ್ತು. ಆದರೆ, ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ಅಭಿಯಾನ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಸಂಬಂಧ ಮತ್ತೆ ಚರ್ಚೆ ನಡೆಸಿದ್ದಾರೆ.

    ಕನಸು ದೂರ..?: ಮಂಗಳೂರು ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಕುಮಟಾದ ಖೈರೆಯಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟುವುದಾಗಿ ಒಪ್ಪಿಕೊಂಡಿದ್ದರು. ಅದಕ್ಕೆ ಮಾಜಿ ಶಾಸಕ ಸತೀಶ ಸೈಲ್ ಜಾಗ ನೀಡುವ ಭರವಸೆ ನೀಡಿದ್ದರು. ಕುಮಟಾ ಶಾಸಕ ದಿನಕರ ಶೆಟ್ಟಿ ಅವರನ್ನು ಕರೆಸಿ, ಮಾತುಕತೆ ನಡೆಸಿ ಎಲ್ಲ ಸಹಕಾರ ನೀಡುವ ಭರವಸೆ ನೀಡಿದ್ದರು. ಆಸ್ಪತ್ರೆಯೊಂದು ನಿರ್ವಣವಾಗುವ ಕನಸು ಚಿಗುರಿತ್ತು. ಆದರೆ, ಬಿ.ಆರ್.ಶೆಟ್ಟಿ ಅವರ ಉದ್ಯಮ ಸೌಧ ಯುಎಇನಲ್ಲಿ ಕುಸಿದು ಬಿದ್ದಿದೆ. ಅವರ ಒಡೆತನದ ಎನ್​ಎಂಸಿ ಹೆಲ್ತ್ ಸಂಸ್ಥೆಯುನ್ನು ಲಂಡನ್​ನ ಪ್ರಸಿದ್ಧ ಸ್ಟಾಕ್ ಎಕ್ಸ್​ಚೇಂಜ್ ಎಫ್​ಟಿಎಸ್​ಇ-100 ನಿಂದ ಹೊರಗಿಡಲಾಗಿದೆ. ಶೆಟ್ಟಿ ಹಾಗೂ ಅವರ ಕುಟುಂಬದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಖಾಸಗಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥೆ ಹೊಂದುವ ಉತ್ತರ ಕನ್ನಡದ ಕನಸು ಸಧ್ಯಕ್ಕೆ ನನಸಾಗುವ ಲಕ್ಷಣ ಕಾಣುತ್ತಿಲ್ಲ.

    ಇತ್ತೀಚೆಗೆ ಬಿದ್ದು, ತಲೆಗೆ ಪೆಟ್ಟಾದ ವ್ಯಕ್ತಿ ನನ್ನ ಸ್ನೇಹಿತ. ಕ್ರಿಮ್ಸ್​ನಲ್ಲಿ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗದ ಕಾರಣ ಬೇರೆ ಆಸ್ಪತ್ರೆಗೆ ಕೊಂಡೊಯ್ಯುವ ಪರಿಸ್ಥಿತಿ ಬಂತು. ಇಲ್ಲಿಯೇ ಸುಪರ್ ಸ್ಪೆಷಾಲಿಟಿ ಸೌಲಭ್ಯ ಇದ್ದರೆ ಆತ ಬದುಕುತ್ತಿದ್ದ ಎನಿಸುತ್ತಿತ್ತು. ಸರ್ಕಾರ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. | ಆನಂದ ಅಸ್ನೋಟಿಕರ್ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts