More

    ವಿಶೇಷ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ

    ಗುತ್ತಲ: ರಸ್ತೆ ಯೋಜನೆಗೆ ನಾವು ಭೂಮಿ ಕೊಡಲು ಸಿದ್ಧ. ಆದರೆ, ವಿಶೇಷ ಭೂಸ್ವಾಧೀನ ಎಂಬುದನ್ನು ಕೈಬಿಟ್ಟು ಸಾಮಾನ್ಯ ಸ್ವಾಧೀನ ಪ್ರಕ್ರಿಯೆಗೆ ಅವಕಾಶ ನೀಡಬೇಕು. ಇದರಿಂದ ನ್ಯಾಯಾಲಯದಲ್ಲಿ ನಮ್ಮ ಭೂಮಿಗೆ ನ್ಯಾಯಯುತ ಬೆಲೆ ಪಡೆದುಕೊಳ್ಳಲು ಅವಕಾಶ ಸಿಗುತ್ತದೆ.

    ಇದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳಲಿರುವ ರೈತರ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಧಿಕಾರಿಗಳ ಸಭೆಯಲ್ಲಿ ರೈತರು ಕೈಗೊಂಡ ಒಕ್ಕೊರಲ ನಿರ್ಣಯ.

    ಜಿ.ಪಂ. ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ ಮಾತನಾಡಿ, ನಾವು ಬಂಗಾರದಂತಹ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಪಟ್ಟಣದ ಸಮೀಪದಲ್ಲಿಯೇ ಇರುವ ನಮ್ಮ ಭೂಮಿಗೆ ಅಪಾರವಾದ ಬೆಲೆಯಿದೆ. ಸರ್ಕಾರದ ಯೋಜನೆಗೆ ನಮ್ಮ ವಿರೋಧವಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ 1ರಿಂದ 3 ಕಿ.ಮೀ.ಗೆ ಒಳಪಡುವ ಜಮೀನಿನುಗಳ ಪ್ರತಿ ಗುಂಟೆಗೆ ಕನಿಷ್ಠ 90 ಸಾವಿರ ರೂ. ಬೆಲೆಯಿದೆ. ಆದರೆ, ಭೂಸ್ವಾಧೀನದಡಿ ಪ್ರತಿ ಗುಂಟೆಗೆ ನೀಡುವ 20ರಿಂದ 30 ಸಾವಿರ ರೂ. ದರಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದರು.

    ನ್ಯಾಯಾಲಯಗಳು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅನೇಕ ತೀರ್ಪು ನೀಡಿವೆ. ಅದರ ಅನ್ವಯ ಹೆಚ್ಚಿನ ಪರಿಹಾರ ಪಡೆದುಕೊಳ್ಳಲು ಸಾಮಾನ್ಯ ಸ್ವಾಧೀನ ಪ್ರಕ್ರಿಯೆ ಮಾಡಿ. ಇದರಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸಹಾಯವಾಗುತ್ತದೆ. ಸಾಮಾನ್ಯ ಸ್ವಾಧೀನ ಪ್ರಕ್ರಿಯೆ ಅಧಿಸೂಚನೆ ಹೊರಡಿಸಿದ ದಿನವೇ ನಾವು ನಮ್ಮ ಭೂಮಿ ಖರೀದಿ ಮಾಡಿಕೊಟ್ಟು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.

    ಕಂದಾಯ ಇಲಾಖೆ ಅಧಿಕಾರಿಗಳನ್ನು ಸಭೆಗೆ ಕರೆದುಕೊಂಡ ಬಾರದ ತಾವಷ್ಟೇ ಬಂದಿದ್ದರಿಂದ ನಾವೆಲ್ಲ ರೈತರು ಸಭೆ ಬಹಿಷ್ಕರಿಸಬೇಕು ಎಂದು ತೀರ್ವನಿಸಿದ್ದೇವು. ಆದರೆ, ತಮಗೆ ಗೌರವ ಕೊಟ್ಟು ಸಭೆಯಲ್ಲಿ ನಮ್ಮ ನಿರ್ಧಾರ ತಿಳಿಸಿದ್ದೇವೆ ಎಂದರು.

    ರೈತ ತೇಜರಾಜ ಜಾನ್ಮನಿ ಮಾತನಾಡಿ, ರಾಜ್ಯ ಹೆದ್ದಾರಿ ನಿರ್ವಣವಾದರೆ ವಾಣಿಜ್ಯ ಮಳಿಗೆ, ಡಾಬಾ, ಪೆಟ್ರೋಲ್ ಬಂಕ್ ಸ್ಥಾಪನೆ ಹೀಗೆ ಹಲವು ಉದ್ಯಮಗಳನ್ನು ಮಾಡಿ ಶ್ರೀಮಂತರಾಗಬಹುದೆಂಬ ಹಲವು ಆಮಿಷಗಳನ್ನು ರೈತರಿಗೆ ನೀಡಿದ್ದೀರಿ. ಎಲ್ಲರಿಗೂ ಅವುಗಳನ್ನು ಮಾಡಲು ಸಾಧ್ಯವೇ. ಅಷ್ಟೊಂದು ಬಂಡವಾಳ ಹೂಡಲು ರೈತರಿಗೆ ಎಲ್ಲಿಂದ ಬರಬೇಕು ಹಣ ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಉತ್ತರಿಸಲಾರದೆ ತಡವರಿಸಿದರು.

    ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕಾರ್ಯ ನಿರ್ವಾಹಕ ಇಂಜಿನಿಯರ್ ಎಚ್.ಎಸ್. ಆನಂದ ಮಾತನಾಡಿ, ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ನೀಡುತ್ತೇನೆ. ನಿಮ್ಮ ಬೇಡಿಕೆಯಂತೆ ಸಾಮಾನ್ಯ ಸ್ವಾಧೀನ ಪ್ರಕ್ರಿಯೆ ಮಾಡಲು ತುಂಬ ಸಮಯ ಬೇಕಾಗುತ್ತದೆ. ಹೆದ್ದಾರಿ ಕಾಮಗಾರಿ ಆರಂಭಿಸಲು ತಾವು ಅವಕಾಶ ಕೊಡಿ ಎಂದು ವಿನಂತಿಸಿದರು. ಇದಕ್ಕೊಪ್ಪದ ಎಲ್ಲ ರೈತರು, ನಮ್ಮ ಬೇಡಿಕೆ ಈಡೇರಿಸದ ಹೊರತು ನಾವು ಒಪ್ಪಿಗೆ ನೀಡಲ್ಲ. ನೀವು ರೈತರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು. ಆಗ ಅಧಿಕಾರಿ, ಮೇಲಧಿಕಾರಿಗಳೊಂದಿಗೆ ರ್ಚಚಿಸುವೆ ಎಂದು ಸಭೆ ಮೊಟಕುಗೊಳಿಸಿದರು.

    ರೈತರಾದ ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಪಿ.ಎಂ. ಕೋವಳ್ಳಮಠ, ಕುಮಾರ ಕುರಬಗೇರಿ, ಮಾಲತೇಶ ಕಿತ್ತೂರ, ಖಲೀಲಹ್ಮದ ಖಾಜಿ, ನೀಲಮಣಿಗಾರ, ವಿಶ್ವನಾಥ ನಂದಿ ಸೇರಿ ಅನೇಕ ರೈತರು ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಎಇ ಜಗದೀಶ ದೊಡ್ಡಮನಿ, ಎಇಇ ಶ್ರೀಶೈಲ ಹೊನಕೇರಿ, ಅನೇಕ ರೈತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts