More

    ವಿವಿ ವಿದ್ಯಾರ್ಥಿಗಳಲ್ಲೇ ಜಾತಿ ವ್ಯಾಮೋಹ ಹೆಚ್ಚಳ

    ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲೇ ಜಾತಿ ವ್ಯಾಮೋಹ ಹೆಚ್ಚಾಗುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಜಿ.ಪ್ರಶಾಂತ್‌ನಾಯಕ್ ಕಳವಳ ವ್ಯಕ್ತಪಡಿಸಿದರು.


    ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ‘ಡಾ.ಅಂಬೇಡ್ಕರ್ ಮತ್ತು ಸಾಂಸ್ಕೃತಿಕ ಜವಾಬ್ದಾರಿ’ ಕುರಿತು ಮಾತನಾಡಿದರು. ಕುವೆಂಪು, ಅಂಬೇಡ್ಕರ್, ಗಾಂಧಿ ಅವರನ್ನು ಸರಿಯಾಗಿ ಓದಿಕೊಳ್ಳದೆ ಅವರ ಜಯಂತಿ ಆಚರಣೆ ಮಾಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಎಂದರು.


    ಈ ಹಿಂದೆಲ್ಲ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಮಹಾನ್ ವ್ಯಕ್ತಿಗಳ ವಿಚಾರವನ್ನು ಚರ್ಚೆ ಮಾಡುವ ದೊಡ್ಡ ವಿದ್ಯಾರ್ಥಿ ಸಮೂಹವಿತ್ತು. ಆದರೀಗ ವಿದ್ಯಾರ್ಥಿಗಳು ಕೇವಲ ಒಂದು ವಿಷಯಕ್ಕೆ ಅಷ್ಟೇ ಸೀಮಿತಗೊಂಡಿದ್ದು, ವಾಟ್ಸ್‌ಆ್ಯಪ್ ಯೂನಿರ್ವಸಿಟಿ ಮಾಹಿತಿಯ ಓದುಗರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


    ಅಂಬೇಡ್ಕರ್ ಜಯಂತಿ ಆಚರಿಸುವ ಮುನ್ನ ಅವರ ಕುರಿತು ಅವಲೋಕಿಸುವುದು ಅಗತ್ಯವಾಗಿದೆ. ಗಾಂಧೀಜಿಗೆ ಅಸ್ಪತ್ಯತೆ ಸಂಕಷ್ಟ ತಟ್ಟಲಿಲ್ಲ. ಅದಕ್ಕಾಗಿ ಅವರು ಸಮಾನತೆಗಿಂತ ಸ್ವಾತಂತ್ರೃಕ್ಕಾಗಿ ಹೋರಾಡಿದರು. ಆದರೆ, ಅಂಬೇಡ್ಕರ್ ಜಾತಿ ಅಪಮಾನವನ್ನು ಎದುರಿಸುತ್ತಲೇ ಬದುಕಿದವರು. ಅದಕ್ಕಾಗಿಯೇ ಅವರು ಸ್ವಾತಂತ್ರೃಕ್ಕಿಂತಲೂ ಸಮಾನತೆಗಾಗಿ ಹೋರಾಡಿದರು. ಅವರೊಬ್ಬ ಮಹಾನ್ ದಾರ್ಶನಿಕ ಎಂದು ಬಣ್ಣಿಸಿದರು.


    ಮೈವಿವಿ ಕುಲಪತಿ ಪ್ರೊ.ಎಸ್.ಕೆ.ಲೋಕನಾಥ್ ಮಾತನಾಡಿ, ಮಾಹಿತಿ ತಂತ್ರಜ್ಞಾನ ಸೌಲಭ್ಯವಿದ್ದರೂ ವಿದ್ಯಾರ್ಥಿಗಳು ಓದಿನ ಕಡೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


    ಅಂಬೇಡ್ಕರ್ ಅವರಿಗೆ ಹೊಟ್ಟೆ ಹಸಿವಿಗಿಂತ ಜ್ಞ್ಞಾನದ ಹಸಿವು ಜಾಸ್ತಿ ಇದ್ದ ಕಾರಣವೇ ಅವರು ಮಹಾನ್ ವ್ಯಕ್ತಿಯಾಗಲು ಸಾಧ್ಯವಾಯಿತು. ಈಗಿನ ಭಾರತದ ಪ್ರಗತಿಯ ಹಿಂದೆ ಅಂಬೇಡ್ಕರ್ ಅವರ ಶ್ರಮವಿದೆ. ಅವರ ಮಾರ್ಗದಲ್ಲಿ ನಾವು ನಡೆದರೆ ಅದೇ ನಾವು ಅಂಬೇಡ್ಕರ್‌ರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.


    ಪಿಎಚ್.ಡಿ ಪಡೆದವರು, ಸ್ನಾತಕೋತ್ತರ, ಸ್ನಾತಕ ಪದವಿಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕುಲಸಚಿವ ಪ್ರೊ.ಕೆ.ಎಂ. ಮಹದೇವನ್, ಅಂಬೇಡ್ಕರ್ ಪೀಠದ ಪ್ರೊ.ಆರ್. ಇಂದಿರಾ, ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಡಾ.ಸೋಮಶೇಖರ್, ವಿಶೇಷ ಅಧಿಕಾರಿ ಪ್ರೊ.ಎಸ್.ಮಹದೇವಮೂರ್ತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts