More

    ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದಿರಿ : ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಕಿವಿಮಾತು



    ಮಂಡ್ಯ : ವಿರೋಧಿಗಳು ಮಾಡುವ ಅಪಪ್ರಚಾರ ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಕಾಂಗ್ರೆಸ್-ರೈತ ಸಂಘದ ಕಾರ್ಯಕರ್ತರು ತಲೆಕಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.


    ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಗಂಭೀರ ಚುನಾವಣೆಯಾಗಿದ್ದು ಎದುರಾಳಿಗಳು ಮತದಾರರನ್ನು ದಿಕ್ಕು ತಪ್ಪಿಸಲು ಉದ್ದೇಶಪೂರ್ವಕವಾಗಿ ಮಾಡುವ ಅಪಪ್ರಚಾರಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು. ಬೂತ್ ಮಟ್ಟದಲ್ಲಿ ಮತ ಹೆಚ್ಚಿಸಿಕೊಳ್ಳಲು ನಮ್ಮ ಪಾಡಿಗೆ ನಾವು ಶ್ರಮಪಡೋಣ. ಚುನಾವಣೆಗೆ ಕೇವಲ 11 ದಿನಗಳು ಬಾಕಿ ಉಳಿದಿದ್ದು, ಈ ದಿನಗಳಲ್ಲಿ ನಾವು ಏನು ಕೆಲಸ ಮಾಡಬೇಕು? ನಮ್ಮ ಮೇಲಿನ ಜವಾಬ್ದಾರಿಗಳು ಏನು? ಎಂದು ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಿ ಸಾಂಘಿಕವಾಗಿ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.


    ಕಾಂಗ್ರೆಸ್ ಮತ್ತು ರೈತ ಸಂಘದ ಕಾರ್ಯಕರ್ತರು ಗ್ರಾಮದಿಂದ ಹೊರ ಹೋಗಿ ಕೆಲಸ ಮಾಡುವ ಅಗತ್ಯವಿಲ್ಲ. ತಮ್ಮ ತಮ್ಮ ಗ್ರಾಮಗಳಲ್ಲೇ ಇದ್ದುಕೊಂಡು ಏಕೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಮತ ನೀಡಬೇಕು ಎಂಬುದನ್ನು ಮತದಾರರಿಗೆ ಅರ್ಥೈಸುವ ಜವಾಬ್ದಾರಿ ನಿಭಾಯಿಸಬೇಕು. ಇಲ್ಲಿ ನಾನೊಬ್ಬ ನೆಪ ಮಾತ್ರಕ್ಕೆ ಅಭ್ಯರ್ಥಿಯಾಗಿ ನಿಮ್ಮನ್ನು ಪ್ರತಿನಿಧಿಸುತ್ತಿದ್ದೇನೆ. ನಾನು ಗೆದ್ದರೆ ಕ್ಷೇತ್ರದ ಮತದಾರರು ಗೆದ್ದಂತೆ. ಮಹಿಳೆಯರು ಕೂಡ ತಮ್ಮ ಅಕ್ಕ ಪಕ್ಕದ ಮನೆಯವರು, ಸ್ನೇಹಿತರು, ಬಂಧುಗಳು, ಸ್ತ್ರೀ ಸ್ವಸಹಾಯ ಸಂಘಗಳ ಸ್ನೇಹಿತರಿಗೆ ಮನದಟ್ಟು ಮಾಡಿಕೊಟ್ಟು ಮತ ಸೆಳೆಯಬೇಕು ಎಂದು ಮನವಿ ಮಾಡಿದರು.


    ಕಳೆದ ಚುನವಣೆಗಳಲ್ಲಿ ಇದ್ದ ಗುರುತು ಈ ಚುನಾವಣೆಯಲ್ಲಿ ಸಿಕ್ಕಿಲ್ಲವಾದ್ದರಿಂದ ಹೊಸದಾಗಿ ಸಿಕ್ಕಿರುವ ಕಹಳೆ ಊದುತ್ತಿರುವ ಮನುಷ್ಯನ ಗುರುತನ್ನು ಮತದಾರರಿಗೆ ಮನಮುಟ್ಟುವಂತೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಬೇಕು ಎಂದರು.


    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ, ಕಾಂಗ್ರೆಸ್ ಮುಖಂಡ ಬಿ.ರೇವಣ್ಣ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ರೈತಸಂಘ ತಾಲೂಕು ಅಧ್ಯಕ್ಷ ನಾಗರಾಜು, ಚಿಕ್ಕಾಡೆ ವಿಜಯೇಂದ್ರ, ಲಕ್ಷ್ಮೇಗೌಡ, ಮಂಡಿಬೆಟ್ಟಹಳ್ಳಿ ಜಗದೀಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts