More

    ವಿರೋಧದ ನಡುವೆಯೇ ನಿವೇಶನ ಹಂಚಿಕೆ

    ಹಳಿಯಾಳ: ಆಶ್ರಯ ನಿವೇಶನ ಹಂಚಿಕೆ ಪ್ರಕರಣವನ್ನು ಶಾಸಕ ಆರ್.ವಿ. ದೇಶಪಾಂಡೆ ಅವರು ಬಿಜೆಪಿ ವಿರೋಧ ನಡುವೆಯೂ ನಿಭಾಯಿಸುವ ಮೂಲಕ ಮೇಲುಗೈ ಸಾಧಿಸಿದರು. ತಾವು ಯೋಜಿಸಿದಂತೆ ಫಲಾನುಭವಿಗಳಿಗೆ ಸೋಮವಾರ ನಿವೇಶನ ಹಂಚಿಕೆ ಮಾಡಿದರು. ನಿವೇಶನ ಹಂಚಿಕೆಯು ಸ್ಥಳೀಯ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ.

    ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆಯಿಂದ ಪುರಸಭೆ ಹೊರಗೂ ಹಾಗೂ ಒಳಗೂ ಕಾಂಗ್ರೆಸ್, ಬಿಜೆಪಿ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು. ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಶಾಸಕ ದೇಶಪಾಂಡೆ ಅವರು ಸಭೆ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಅಭಿಪ್ರಾಯ ಮಂಡಿಸಲು ಮುಂದಾದರು. ಪ್ರತಿಪಕ್ಷ ನಾಯಕ ಉದಯ ಹೂಲಿ ಹಾಗೂ ಸಂತೋಷ ಘಟಕಾಂಬ್ಳೆ ಮಾತನಾಡಿ, ‘ಕೇವಲ 23 ನಿವೇಶನ ಹಂಚಿಕೆಗೆ ಪೊಲೀಸ್ ಬಂದೋಬಸ್ತ್ ಬೇಕಾಗಿತ್ತೆ? ಪೊಲೀಸ್ ಬೆಂಗಾವಲಿನಲ್ಲಿ ಆಶ್ರಯ ಸಭೆ ನಡೆಸುವ ಪರಿಸ್ಥಿತಿ ಬಂದಿದ್ದನ್ನು ಕಂಡು ದುಃಖವಾಗುತ್ತಿದೆ. ಪೊಲೀಸರನ್ನು ಕರೆಸುವ ಮೂಲಕ ನಿಮ್ಮ ಹಿರಿತನಕ್ಕೂ ಹಾಗೂ ಸದಸ್ಯರಿಗೂ ಅವಮಾನ ಮಾಡಿದಂತಾಗಿದೆ’ ಎಂದರು.

    ತಪ್ಪು ಮಾಹಿತಿ: 1.10 ಎಕರೆ ಜಮೀನನ್ನು ಕೇವಲ ಆಶ್ರಯ ಯೋಜನೆಗೆ ಬಳಸಲು ಅವಕಾಶವಿದೆ ಎಂದು ದೇಶಪಾಂಡೆ ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು. ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯರು, ‘ಪುರಸಭೆಯ ಮುಖ್ಯಾಧಿಕಾರಿ ತಪ್ಪು ಮಾಹಿತಿ ನೀಡಿದ್ದಾರೆ. ನಿಮಗೊಂದು ಮಾಹಿತಿ, ಸದಸ್ಯರಿಗೊಂದು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ್ದಾರೆ’ ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

    ಪಾರದರ್ಶಕತೆ: ‘ನಿವೇಶನ ಹಂಚಿಕೆ ಪ್ರಕ್ರಿಯೆ ಪಾರದರ್ಶಕತೆಯಿಂದ ನಡೆಯಲಿ ಎಂಬ ಉದ್ದೇಶದಿಂದ ಎಲ್ಲ ಸದಸ್ಯರನ್ನು ಸಭೆಗೆ ಆಮಂತ್ರಿಸಿದ್ದೇನೆ. ಪಟ್ಟಾ ಪಡೆದವರನ್ನು ಕರೆಯಿಸಿ ನಿಮ್ಮ ಸಮ್ಮುಖವೇ ಚೀಟಿ ಎತ್ತಿ ನಿವೇಶನ ಹಂಚಿಕೆ ಮಾಡುತ್ತೇನೆ’ ಎಂದು ಬಿಜೆಪಿ ಸದಸ್ಯರಿಗೆ ದೇಶಪಾಂಡೆ ಮನವರಿಕೆ ಮಾಡಿದರು. ಆಶ್ರಯ ಸಮಿತಿ ಸಭೆ ನಂತರ ನಿವೇಶನ ಹಂಚಿಕೆ ಸಭೆ ನಡೆದಾಗ ಉದಯ ಹೂಲಿ ಮಾತನಾಡಿ, ‘ಫಲಾನುಭವಿಗಳ ಆಯ್ಕೆ ಸರಿಯಾಗಿಲ್ಲ. ಅರ್ಜಿ ಸಲ್ಲಿಸಿದ ನಿಜವಾದ ಬಡವರು ಪುರಸಭೆಯ ಹೊರಗೆ ಕುಳಿತಿದ್ದಾರೆ’ ಎಂದರು. ಹೂಲಿ ಮಾತಿಗೆ ಶಂಕರ ಬೆಳಗಾಂವಕರ ಹಾಗೂ ಸುರೇಶ ತಳವಾರ ಆಕ್ಷೇಪಿಸಿದಾಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ನಿವೇಶನ ಹಂಚಿಕೆ ಪ್ರಕ್ರಿಯೆ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ನಮ್ಮ ವಿರೋಧವಿದೆ ಎಂದು ಹೇಳಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

    ಹೊರಗೂ ವಾಗ್ವಾದ: ಪುರಸಭೆಯ ಹೊರಗೂ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಎರಡೂ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಆಶ್ರಯ ಪಟ್ಟಾ ಪಡೆದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಕಷ್ಟು ತೊಂದರೆಯಾಯಿತು. ನಂತರ ಪೊಲೀಸರ ನೆರವಿನಲ್ಲಿ ಫಲಾನುಭವಿಗಳ ಹೆಸರನ್ನು ಕೂಗಿ ಒಬ್ಬೊಬ್ಬರನ್ನು ಸಭಾಭವನಕ್ಕೆ ಬಿಡಲಾಯಿತು.

    ಚೀಟಿ ಎತ್ತಿ ವಿತರಣೆ
    ಆಶ್ರಯ ಪಟ್ಟಾ ಪಡೆದ ಫಲಾನುಭವಿಗಳ ಉಪಸ್ಥಿತಿಯಲ್ಲಿ ಚಿಕ್ಕಮಕ್ಕಳ ಕೈಯಿಂದ ಚೀಟಿ ಎತ್ತಿ ನಿವೇಶನ ಹಂಚಿಕೆ ಮಾಡಲಾಯಿತು. ಎಸ್​ಸಿ 5, ಅಂಗವಿಕಲ 1, ಹಿರಿಯ ನಾಗರಿಕರು 1, ಇತರ 16 ಸೇರಿ ಒಟ್ಟು 23 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಯಿತು. ‘ನಿವೇಶನ ಹಂಚಿಕೆ ಮಾಡಿದ 23 ಫಲಾನುಭವಿಗಳಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ಪಟ್ಟಾ ರದ್ದು ಪಡಿಸಲಾಗುವುದು. ಪಟ್ಟಾ ಪಡೆದ ಇನ್ನುಳಿದ 9 ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ನಿವೇಶನ ನೀಡಲು ವ್ಯವಸ್ಥೆ ಮಾಡಲಾಗುವುದು’ ಎಂದು ದೇಶಪಾಂಡೆ ಅವರು ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts