More

    ವಿನಯ ಕುಲಕರ್ಣಿ ಬಿಜೆಪಿಗೆ ಹೊಂಟಾರಂತೆ?

    ಹುಬ್ಬಳ್ಳಿ: ಧಾರವಾಡ ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣ ತನಿಖೆ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಧಾರವಾಡದ ವಿನಯ ಕುಲಕರ್ಣಿ ಅವರು ಬಿಜೆಪಿಗೆ ಸೇರಲು ಪ್ರಯತ್ನ ನಡೆಸಿದ್ದಾರೆ ಎಂಬ ವದಂತಿ ಹರಡಿದ್ದು, ಧಾರವಾಡ ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

    ಯೋಗೀಶಗೌಡ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಸೇರಿ ಅನೇಕರನ್ನು ಕರೆಸಿಕೊಂಡು ಮಾಹಿತಿ ಕಲೆ ಹಾಕಿದ್ದಾರೆ. ವಿಚಾರಣೆ ಸಂಬಂಧ ಸದ್ಯದಲ್ಲೇ ವಿನಯ ಕುಲಕರ್ಣಿಗೂ ಬುಲಾವ್ ಬರಲಿದೆ ಎಂಬ ಮಾತು ಕೇಳಿಬರುತ್ತಿರುವಾಗಲೇ, ಪಕ್ಷಾಂತರದ ವದಂತಿ ಹಬ್ಬಿರುವುದು ಕುತೂಹಲ ಗರಿಗೆದರುವಂತೆ ಮಾಡಿದೆ.

    ವಿನಯ ಕುಲಕರ್ಣಿ ಮಾತ್ರ, ಅಂಥ ಯಾವ ಪ್ರಯತ್ನವನ್ನೂ ಮಾಡಿಲ್ಲ. ತಾವು ಕಾಂಗ್ರೆಸ್​ನ ಕಟ್ಟಾಳು ಎಂದು ಹೇಳಿಕೊಂಡಿದ್ದಾರೆ.

    ಯೋಗೀಶಗೌಡ ಹತ್ಯೆ ಸಂಭವಿಸಿದಾಗ ವಿನಯ ಕುಲಕರ್ಣಿ ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರು. ಬಿಜೆಪಿ ಸರ್ಕಾರ ಬಂದ ಮೇಲೆ ಪ್ರಕರಣವನ್ನು ಸಿಬಿಐಗೆ ವಹಿಸಿತು. ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು, ಈ ಹಿಂದೆ ಬಂಧಿತರಾಗಿದ್ದ ಆರೋಪಿಗಳು ನಿಜವಾದ ಹಂತಕರಲ್ಲ ಎಂದು ಖಾತ್ರಿಪಡಿಸಿಕೊಂಡು, ಬೆಂಗಳೂರು ಮೂಲದ ಸುಪಾರಿ ಹಂತಕರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಧಾರವಾಡದಲ್ಲೇ ಬೀಡುಬಿಟ್ಟಿದ್ದರು.

    ಯೋಗೀಶಗೌಡ ಸಹೋದರ ಗುರುನಾಥ ಗೌಡ ಜತೆ ವಿನಯ ಕುಲಕರ್ಣಿ ಈ ಹಿಂದೆ ಸಂಧಾನಕ್ಕೆ ಯತ್ನಿಸಿದ್ದು ಬಹಿರಂಗವಾಗಿತ್ತು. ಆ ಕುರಿತ ಮಾಹಿತಿಯನ್ನೂ ಕಲೆಹಾಕಿರುವ ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲೂ ವಿನಯ ಕುಲಕರ್ಣಿಗೆ ಸಮನ್ಸ್ ಕಳುಹಿಸಬಹುದಾಗಿದೆ.

    ಈ ಕಾರಣದಿಂದ ವಿನಯ ಕುಲಕರ್ಣಿ ಹೆದರಿದ್ದಾರೆ, ಹೀಗಾಗಿ ಬಿಜೆಪಿ ಸೇರಿ ಸಿಬಿಐ ತನಿಖೆಯಿಂದ ಬಚಾವಾಗಲು ಇಚ್ಛಿಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರು ಸುತಾರಾಂ ಒಪ್ಪುವುದಿಲ್ಲವಾದ್ದರಿಂದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮೂಲಕ ರಾಷ್ಟ್ರೀಯ ಬಿಜೆಪಿ ನಾಯಕರು ಹಾಗೂ ಆರ್​ಎಸ್​ಎಸ್​ನ ಕೆಲ ಮುಖಂಡರ ಭೇಟಿಗೆ ದೆಹಲಿಗೆ ತೆರಳಿದ್ದಾರೆ, ಪ್ರಮುಖ ನಾಯಕರು ಭೇಟಿಗೆ ಅವಕಾಶ ನೀಡಿಲ್ಲ ಎಂದೆಲ್ಲ ಕೇಳಿಬಂದಿದೆ.

    ಆಧಾರ ರಹಿತ, ಊಹಾಪೋಹ…

    ತಾವು ಬಿಜೆಪಿ ಸೇರಲು ಪ್ರಯತ್ನಿಸಿರುವ ಕುರಿತು ಹರಡಿರುವ ಸುದ್ದಿಯೆಲ್ಲವೂ ಆಧಾರ ರಹಿತ, ಊಹಾಪೋಹ. ಯಾರೋ ಕೆಲವರು ಸೃಷ್ಟಿಸಿರುವ ವದಂತಿ ಎಂದು ಪತ್ರಿಕೆಗೆ ವಿನಯ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.

    ಸಿ.ಪಿ. ಯೋಗೇಶ್ವರ ಅವರನ್ನು ಭೇಟಿಯಾಗಿಲ್ಲ, ಅವರೊಂದಿಗೆ ತೆರಳುವುದೆಲ್ಲಿ ಬಂತು? ನಾನು ಕಾಂಗ್ರೆಸ್​ನವನು. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಧಾರವಾಡದಲ್ಲಿ ನನ್ನ ಡೇರಿ, ಫಾಮ್ರ್ ಇದೆ. ನನ್ನಲ್ಲಿದ್ದ ಕುದುರೆಗಳನ್ನು ಇತ್ತೀಚೆಗೆ ಚಿತ್ರನಟ ದರ್ಶನ್​ಗೆ ಮಾರಾಟ ಮಾಡಿದ್ದೆ. ಹೊಸ ಕುದುರೆಗಳನ್ನು ಕೊಳ್ಳಬೇಕಿತ್ತು. ಅದಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದೆ ಅಷ್ಟೆ ಎಂದು ಹೇಳಿದರು.

    ಬಿಜೆಪಿಯಲ್ಲಿ ಚರ್ಚೆಯೂ ಆಗಿಲ್ಲ

    ವಿನಯ ಕುಲಕರ್ಣಿ ಬಿಜೆಪಿಗೆ ಸೇರಲು ಯತ್ನಿಸುತ್ತಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಚಿವ ಜಗದೀಶ ಶೆಟ್ಟರ್ ಅವರನ್ನು ಕೇಳಿದಾಗ, ಪಕ್ಷದಲ್ಲಿ ಆ ಬಗ್ಗೆ ಚರ್ಚೆಯೂ ಆಗಿಲ್ಲ ಎಂದು ಪ್ರತಿಕ್ರಿಯಿಸಿದರು.

    ಬಿಜೆಪಿ ರಾಷ್ಟ್ರೀಯ ಪಕ್ಷ. ಕೇಡರ್ ಆಧಾರಿತ ಪಕ್ಷ. ಹಾಗೆ ಹಿರಿಯ ನಾಯಕರನ್ನು ನೇರ ಭೇಟಿಯಾಗಿ ಸೇರಲು ಬರುವುದಿಲ್ಲ. ಜಿಲ್ಲೆ ಮತ್ತು ರಾಜ್ಯ ನಾಯಕರೊಂದಿಗೆ ರಾಷ್ಟ್ರೀಯ ನಾಯಕರು ರ್ಚಚಿಸುತ್ತಾರೆ. ನಾನೇ ಸ್ಥಳೀಯ ಜನಪ್ರತಿನಿಧಿ ಇದ್ದೇನೆ. ಅಂಥ ಯಾವ ಚರ್ಚೆಯೂ ನಡೆದಿಲ್ಲ. ಬಿಜೆಪಿ ಸೇರ್ಪಡೆ ಯತ್ನದ ಕುರಿತು ಯಾವ ಮಾಹಿತಿಯೂ ಇಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts