More

    ವಿದ್ಯುತ್ ತಗುಲಿ ಬಾಲಕ, ಹಸು ಸಾವು

    ವಿಜಯವಾಣಿ ಸುದ್ದಿಜಾಲ ಕೈಲಾಂಚ : ಹೋಬಳಿಯ ಎಂ.ಜಿ. ಪಾಳ್ಯದಲ್ಲಿ ಬುಧವಾರ ಸಂಜೆ ದನ ಮೇಯಿಸುತ್ತಿದ್ದಾಗ ವಿದ್ಯುತ್ ತಗುಲಿ ಬಾಲಕ ಮತ್ತು ಹಸು ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿದ್ದಾನೆ.

    ಗ್ರಾಮದ ಸಿದ್ದರಾಜು (೧೬) ಮೃತ. ಉರಗಹಳ್ಳಿ ಸರ್ಕಾರಿ ಪ್ರೌಢಶಾಲೆ ೧೦ನೇ ತರಗತಿ ವಿದ್ಯಾರ್ಥಿ.
    ಬುಧವಾರ ಶಾಲೆಗೆ ಹೋಗದೆ ಹಸು, ಮೇಕೆಗಳನ್ನು ಮೇಯಿಸಲು ಗ್ರಾಮದ ಪಕ್ಕದಲ್ಲಿರುವ ಬೆಣ್ಣಹಳ್ಳಿ ಕ್ರಷರ್ ರಸ್ತೆಯಲ್ಲಿರುವ ಗೋಮಾಳಕ್ಕೆ ಕರೆತಂದಿದ್ದ. ಅಲ್ಲೇ ಇದ್ದ ವಿದ್ಯುತ್ ಕಂಬದ ಬಳಿ ಮೇಯುತ್ತಿದ್ದ ಹಸು ವಿದ್ಯುತ್ ತಂತಿ ತಾಗಿ ಮೃತಪಟ್ಟಿದೆ. ಇದನ್ನು ಅರಿಯದ ಸಿದ್ದರಾಜು ಏಕೋ ಹಸು ಮಲಗಿದೆ ಎಂದು ಮುಟ್ಟಿದಾಗ ಆತನಿಗೂ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಕೂಡಲೇ ಸಮೀಪದಲ್ಲಿದ್ದ ಸಿದ್ದರಾಜು ಅಣ್ಣ ರಾಯಪ್ಪ ಓಡಿಬಂದು ಸೋದರನನ್ನು ರಕ್ಷಿಸಲು ಮುಂದಾಗಿದ್ದಾನೆ. ಆತನಿಗೂ ವಿದ್ಯುತ್ ತಗುಲಿದ್ದು, ಕೈಗೆ ಗಾಯವಾಗಿದೆ.

    ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಬೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಲೈನ್ ಸರಬರಾಜು ಕಡಿತಗೊಳಿಸಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯವರಾದ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಎಂ.ಜಿ.ಪಾಳ್ಯದಲ್ಲಿ ವಾಸಿಸುತ್ತಿದ್ದರು. ಮೃತನ ತಂದೆ ತಾಯಿ ಕೂಲಿ ಮಾಡುತ್ತಿದ್ದು, ಜೀವನ ನಿರ್ವಹಣೆಗಾಗಿ ಹಸು ಮತ್ತು ಮೇಕೆಗಳನ್ನು ಸಾಕುತ್ತಿದ್ದರು ಎನ್ನಲಾಗಿದೆ.

    ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಮೃತನ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡಬೇಕು, ಅದುವರೆಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮಾಂತರ ಎಇಇ ಕೃಷ್ಣಮೂರ್ತಿ ಮತ್ತು ಅಧಿಕಾರಿಗಳು ಸರ್ಕಾರದ ಮಾನದಂಡದಲ್ಲೇ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿ ಸ್ಥಳದಿಂದ ಮೃತ ವಿದ್ಯಾರ್ಥಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು.
    ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಶಾಲೆಗೆ ಹೋಗಿದ್ದರೆ ಉಳಿಯುತ್ತಿತ್ತು ಪ್ರಾಣ: ಸಿದ್ದರಾಜು ಬುಧವಾರ ಶಾಲೆಗೆ ಹೋಗಿದ್ದರೆ ಪ್ರಾಣ ಉಳಿಯುತ್ತಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಆತನ ಕುಟುಂಬದವರು ಬೇರೆ ಕಾರ್ಯದ ನಿಮಿತ್ತ ಈತನನ್ನು ಹಸು ಮೇಯಿಸಲು ಕಳುಹಿಸಿದ್ದರು. ಒಳ್ಳೆಯ ಹುಡುಗ, ಆಗಾಗ ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದ. ಹಸು, ಮೇಕೆಗಳ ಮೇಲೆ ಬಹಳಷ್ಟು ಪ್ರೀತಿ. ಅವುಗಳ ಪಾಲನೆ ಮಾಡುತ್ತಿದ್ದ ಸಿದ್ದರಾಜು ಗ್ರಾಮದಲ್ಲಿ ಎಲ್ಲರ ಜತೆ ಉತ್ತಮ ಸ್ನೇಹ ಹೊಂದಿದ್ದ ಎಂದು ಗ್ರಾಮಸ್ಥರು ಆತನ ಸಾವಿಗೆ ಮರುಗುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts