More

    ವಿದ್ಯಾರ್ಥಿನಿಯರಿಗೆ ಕ್ರೀಡಾ ಸಮವಸ್ತ್ರ, ಶೂ ವಿತರಣೆ

    ಬೇಲೂರು: ಬೇಲೂರು ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ತರಕಾರಿ ವ್ಯಾಪಾರಿ ಪುನೀತ್, ಕ್ರೀಡಾ ಸಮವಸ್ತ್ರ ಹಾಗೂ ಓಟದ ಶೂಗಳನ್ನು ಕೊಡುಗೆಯಾಗಿ ವಿತರಿಸಿದರು.

    ಪಟ್ಟಣದ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಯ ತರಕಾರಿ ವ್ಯಾಪಾರಿ ಪುನೀತ್ ಮಾತನಾಡಿ, ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗೆ ಬಹುತೇಕ ಬಡ ಮಕ್ಕಳೆ ಬರುವುದರಿಂದ ಹಾಗೂ ಅವರು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಗಮನಿಸಿ, ಈಗ ನಡೆಯಲಿರುವ ಕ್ರೀಡಾಕೂಟದಲ್ಲಿ ಸಮವಸ್ತ್ರದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲಲ್ಲಿ ಎಂಬ ಉದ್ದೇಶದಿಂದ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಸಹಕಾರ ನೀಡಬೇಕೆಂದು ಚಿಕ್ಕದಾಗಿ ಮಕ್ಕಳಿಗೆ ಸಮವಸ್ತ್ರ, ಶೂಗಳನ್ನು ಕೊಡಿಸಿದ್ದೇನೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿ ಶಾಲೆಗೆ, ನಮ್ಮ ಗ್ರಾಮಕ್ಕೆ ಹೆಸರು ತರಲಿ ಎಂದು ಶುಭ ಹಾರೈಸಿದರು.

    ಮುಖ್ಯಶಿಕ್ಷಕ ಚಂದ್ರಶೇಖರ್ ಮಾತನಾಡಿ, ಪ್ರೌಢಶಾಲಾ ಮಕ್ಕಳಿಗೆ ಕ್ರೀಡಾಕೂಟಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದ ತರಕಾರಿ ವ್ಯಾಪಾರಿ ಪುನಿತ್ ಅವರು 13000 ರೂ. ಮೌಲ್ಯದ ಕ್ರೀಡಾ ಸಮವಸ್ತ್ರ ಹಾಗೂ ಶೂಗಳನ್ನು ನಮ್ಮ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ. ಅದೇ ರೀತಿ ಸಾಕಷ್ಟು ಜನರು ನಮ್ಮ ಶಾಲಾ ಶೈಕ್ಷಣಿಕ ಪ್ರಗತಿಯನ್ನು ನೋಡಿ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದೆ ಬರುತ್ತಿದ್ದಾರೆ. ಹೀಗೆ ಸಾರ್ವಜನಿಕರು, ಪಾಲಕರು, ಶಿಕ್ಷಕರು ಒಂದಾಗಿ ಕೆಲಸ ಮಾಡಿದ್ದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ ಕುಮಾರ್ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts