More

    ವಿದ್ಯಾದೇಗುಲದಲ್ಲಿ ಪುಂಡರ ಮೋಜು-ಮಸ್ತಿ

    ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾತ್ರಿಯಾಗುತ್ತಿದ್ದಂತೆ ಪುಂಡರ ಅಡ್ಡೆಯಾಗಿ ಬದಲಾಗುತ್ತಿದ್ದು, ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.

    ಈ ಶಾಲೆ 1 ರಿಂದ 7ನೇ ತರಗತಿವರೆಗೆ ಇದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿ ಎಲ್ಲ ವಿಷಯಗಳಿಗೂ ಶಿಕ್ಷಕರಿದ್ದು, ತರಗತಿ ಕೊಠಡಿಗಳ ವ್ಯವಸ್ಥೆಯೂ ಉತ್ತಮವಾಗಿದೆ. ಶೌಚಗೃಹ, ಬಿಸಿಯೂಟ ತಯಾರಿಕೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಹೊಂದಿದೆ. ಶಾಲಾ ಆವರಣದ ಜಾಗದ ಸುತ್ತ ತಡೆಗೋಡೆ ವ್ಯವಸ್ಥೆ ಇದ್ದು, ಸಕಲ ಸೌಲಭ್ಯಗಳನ್ನು ಹೊಂದಿದೆ.

    ರಾತ್ರಿವೇಳೆ ಪುಂಡರ ತಾಣ: ರಾತ್ರಿವೇಳೆ ಮತ್ತು ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ಸುತ್ತಮುತ್ತಲಿನ ಪುಂಡರು ಶಾಲೆಯ ತಡೆಗೋಡೆ ಹಾರಿ ಮೋಜು-ಮೋಸ್ತಿ ಮಾಡುತ್ತಾರೆ. ಮದ್ಯದ ಬಾಟಲಿಗಳನ್ನು ಅಲ್ಲೇ ಬಿಸಾಡಿ ಹೋಗುತ್ತಾರೆ. ಇದರ ಜತೆಗೆ ತಿಂದ ಮಾಂಸದ ಮೂಳೆ, ಇತರೆ ವಸ್ತುಗಳನ್ನು ಶಾಲಾ ಆವರಣದಲ್ಲೇ ಬಿಸಾಡಿ ಹೋಗುತ್ತಾರೆ. ಮರುದಿನ ಬೆಳಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮದ್ಯದ ಬಾಟಲ್, ಪ್ಲಾಸ್ಟಿಕ್ ಕವರ್, ಇತರೆ ವಸ್ತುಗಳನ್ನು ಸ್ವಚ್ಛಗೊಳಿಸುವುದೇ ಕೆಲಸವಾಗಿದೆ.

    ಮತ್ತೊಂದೆಡೆ ಸ್ಥಳೀಯ ಕೆಲವು ಯುವಕರು ಸಂಜೆ ವೇಳೆಯಲ್ಲಿ ಶಾಲೆಯ ತಡೆಗೋಡೆ ಹಾರಿ, ಆಟದ ಮೈದಾನದಲ್ಲಿ ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್ ಆಟವಾಡುತ್ತಾರೆ. ಹೀಗಾಗಿ ಶಾಲಾ ಕೊಠಡಿಗಳ ಕಿಟಿಕಿ ಗಾಜುಗಳು ಹಾಳಾಗಿವೆ. ಮುಖ್ಯ ಶಿಕ್ಷಕರ ಕಟ್ಟಡದ ಮೇಲ್ಛಾವಣಿ ಮೇಲೆ ಅಳವಡಿಸಿದ ಹಂಚುಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಯುವಕರು ಶಾಲಾ ಆವರಣಕ್ಕೆ ನುಗ್ಗಿ ಆಟವಾಡುತ್ತಿರುವುದನ್ನು ಗಮನಿಸಿದ ಎಸ್‌ಡಿಎಂಸಿ ಅಧ್ಯಕ್ಷರು, ಸ್ಥಳೀಯರು ಯುವಕರಿಗೆ ಆಟ ಆಡಬಾರದಂತೆ ಸೂಚಿಸಿದ್ದಾರೆ. ಜತೆಗೆ ರಾತ್ರಿ ವೇಳೆಯಲ್ಲಿ ಶಾಲೆಯನ್ನು ಪುಂಡರು ಹಾಳು ಮಾಡುತ್ತಿರುವ ಬಗ್ಗೆ ಎಸ್‌ಡಿಎಂಸಿ, ಶಿಕ್ಷಕರು ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

    ಶಾಲೆಯ ಸುತ್ತ ತಡೆಗೋಡೆ ವ್ಯವಸ್ಥೆ ಇದ್ದರೂ ರಾತ್ರಿ ವೇಳೆ ಮತ್ತು ರಜೆ ಇರುವ ಸಂದರ್ಭದಲ್ಲಿ ಪುಂಡರು ತಡೆಗೋಡೆ ಹಾರಿ ಮೋಜು-ಮಸ್ತಿ ಮಾಡುತ್ತಾರೆ. ಮದ್ಯದ ಬಾಟಲಿಗಳು ಸೇರಿದಂತೆ ತಿಂದ ಆಹಾರ ಪದಾರ್ಥ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಲ್ಲೇ ಬಿಸಾಡಿ ಹೋಗುತ್ತಾರೆ. ಪ್ರತಿ ದಿನ ಬೆಳಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸ್ವಚ್ಛಗೊಳಿಸುವುದೇ ಕೆಲಸವಾಗಿದೆ. ಅಲ್ಲದೆ ಸಂಜೆ ವೇಳೆ ಸ್ಥಳೀಯ ಯುವಕರು ಆಟವಾಡುವುದರಿಂದ ಕಿಟಿಕಿ ಗಾಜುಗಳು ಹಾನಿಯಾಗಿವೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
    ಮೋಹನ್, ಅಧ್ಯಕ್ಷ, ಎಸ್‌ಡಿಎಂಸಿ

    ತ್ಯಾಗರಾಜ ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವೇಳೆ ಪುಂಡರು ನುಸುಳಿ ಪಾರ್ಟಿ ಮಾಡಿ ಹಾಳುಮಾಡುತ್ತಿರುವುದು, ಸಂಜೆ ವೇಳೆ ಕೆಲ ಯುವಕರು ಆಟವಾಡಿ ಕಿಟಿಕಿ ಗಾಜು, ಹಂಚುಗಳನ್ನು ಒಡೆದು ಹಾಕುತ್ತಿರುವುದು ಈ ಬಗ್ಗೆ ಶಾಲಾ ಎಸ್‌ಡಿಎಂಸಿ ಸಮಿತಿ ಮತ್ತು ಶಿಕ್ಷಕರಿಂದ ದೂರು ಬಂದಿದೆ. ಈ ಬಗ್ಗೆ ಗ್ರಾಪಂನಿಂದ ತುರ್ತು ಸಭೆ ಕರೆದು, ಕ್ರಮಕೈಗೊಳ್ಳಲಾಗುವುದು.
    ಫರ್ಜಾನ್ ಶಾಹಿದ್ ಖಾನ್, ಅಧ್ಯಕ್ಷೆ, ಶನಿವಾರಸಂತೆ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts