More

    ವಿಜಯಪುರ ಜಿಪಂ ಸಾಮಾನ್ಯ ಸಭೆಯಲ್ಲಿ ಹಗರಣಗಳ ಹೂರಣ… ಅಕ್ಷರ ದಾಸೋಹ, ಹಾಲಿನ ಪುಡಿ, ಗೊಬ್ಬರದಲ್ಲಿ ಭ್ರಷ್ಟಾಚಾರ

    ವಿಜಯಪುರ: ಅಕ್ಷರ ದಾಸೋಹ ಅಧಿಕಾರಿಗಳ ಲಂಚಾವತಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಾಲಿನ ಪುಡಿ ಹಗರಣ, ಕೃಷಿ ಇಲಾಖೆಯಲ್ಲಿ ರಸಗೊಬ್ಬರ ಹಗರಣ….ಹೀಗೆ ವಿವಿಧ ಇಲಾಖೆಗಳ ಹಗರಣಗಳ ಹೂರಣವನ್ನು ಜಿಪಂ ಸದಸ್ಯರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
    ಇಲ್ಲಿನ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತಿಮ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಬೇಜಾವಾಬ್ದಾರಿ ಮತ್ತು ಭ್ರಷ್ಟಾಚಾರದ ಬಗ್ಗೆ ಗಂಭೀರ ಚರ್ಚೆ ನಡೆದಿದೆ.
    ಅಕ್ಷರ ದಾಸೋಹ ಅಧಿಕಾರಿ ಎಸ್.ಎಸ್. ಮುಜಾವರ ಅವರ ಪತಿ ಎಸ್.ಎ. ಮುಜಾವರ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಅಕ್ಷರ ದಾಸೋಹ ಇಲಾಖೆಯಲ್ಲೂ ಮೂಗು ತೂರಿಸುತ್ತಿದ್ದಾರೆಂಬ ಆರೋಪ ಕಳೆದ ಸಭೆಯಲ್ಲಿ ಕೇಳಿ ಬಂದಿತ್ತು. ಇದೀಗ ಅನುಸರಣಾ ವರದಿಯಲ್ಲಿ ಆ ಬಗ್ಗೆ ಸದಸ್ಯೆ ಪ್ರತಿಭಾ ಪಾಟೀಲ ಚರ್ಚೆಗೆ ಮುನ್ನುಡಿ ಬರೆದರು. ಈವರೆಗೂ ಅಧಿಕಾರಿ ಮೇಲೆ ಕ್ರಮ ಕೈಗೊಂಡಿಲ್ಲವೇಕೆಂದು ಪ್ರಶ್ನಿಸಿದರು.
    ಅಡುಗೆ ಸಿಬ್ಬಂದಿಯಿಂದ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. ನೋಟಿಸ್ ಕೊಡುವ ಮುಂಚೆಯೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರೂ ಈವರೆಗೆ ತನಿಖೆಯಾಗಿಲ್ಲವೇಕೆಂದು ಪ್ರತಿಭಾ ಪಾಟೀಲ ಪ್ರಶ್ನಿಸಿದರು. ಇದಕ್ಕೆ ಸದಸ್ಯ ಮಹಾಂತಗೌಡ ಪಾಟೀಲ ಧ್ವನಿಗೂಡಿಸಿದರು. ಸಭೆಯಲ್ಲಿದ್ದ ಅಕ್ಷರ ದಾಸೋಹ ಅಧಿಕಾರಿ ಎಸ್.ಎಸ್. ಮುಜಾವರ ತಮ್ಮ ಪತಿಯ ಮೇಲೆ ದೂರಿದ್ದು ಸರಿಯಲ್ಲ ಎಂದರು. ಅದಕ್ಕೆ ಮಹಾಂತಗೌಡ ತಮ್ಮ ಪತಿ ಎಂಬುದು ನಮಗೆ ಕನಸು ಬಿದ್ದಿಲ್ಲ. ನಾನು ಸಿಇಒ ಹಾಗೂ ಅಧ್ಯಕ್ಷರನ್ನುದ್ದೇಶಿಸಿ ಮಾತನಾಡುತ್ತಿರುವೆ ಎಂದರು. ಬಳಿಕ ಸಿಇಒ ಮಧ್ಯೆ ಪ್ರವೇಶಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಪಿಐಗೆ ಏ. 16 ರೊಳಗೆ ವರದಿ ನೀಡಲು ಸೂಚಿಸಿದರು. ಅಂತಿಮವಾಗಿ ಅಧಿಕಾರಿ ಮುಜಾವರ ಸಭೆಯ ಕ್ಷಮೆ ಯಾಚಿಸಿದರು.
    ಇನ್ನು ಕೃಷಿ ಇಲಾಖೆ ಅಧಿಕಾರಿಗಳು ನಕಲಿ ರಸಗೊಬ್ಬರ ಕಾರ್ಖಾನೆ ಜೊತೆ ಶಾಮೀಲಾಗಿದ್ದಾರೆಂದು ಯಂಟಮಾನ ಆರೋಪಿಸಿದರು. ಕನ್ನೊಳ್ಳಿ ಬಳಿಯ ನಕಲಿ ರಸಗೊಬ್ಬರ ಕಾರ್ಖಾನೆ ಬಂದ್ ಮಾಡದ ಬಗ್ಗೆ ಆಕ್ರೋಶ ಹೊರಹಾಕಿದರು. ಅದಕ್ಕೆ ಕೃಷಿ ಅಧಿಕಾರಿ ಕಾನೂನು ಪ್ರಕಾರ 21 ದಿನ ಪರವಾನಿಗೆ ಅಮಾನತು ಮಾಡಿದ್ದು ಪ್ರಕರಣ ನ್ಯಾಯಾಲಯದ ಮಟ್ಟದಲ್ಲಿರುವುದರಿಂದ ಬಂದ್ ಮಾಡಿಲ್ಲವೆಂದರು. ಅದಕ್ಕೆ ಸದಸ್ಯರು ನ್ಯಾಯಾಲಯದ ಆದೇಶ ತರುವತನ ಬಂದ್ ಮಾಡಿ. ಅಲ್ಲಿಯವರೆಗೆ ಅವನು ನಕಲಿ ರಸಗೊಬ್ಬರ ಮಾರಬಹುದೇ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಕೃಷಿ ಅಧಿಕಾರಿಗಳೇ ನಕಲಿ ರಸಗೊಬ್ಬರ ಮಳಿಗೆಗಳ ಜೊತೆ ಶಾಮೀಲಾಗಿದ್ದಾರೆಂದು ಆರೋಪಿಸಿದರು.
    ಇನ್ನು ಹಾಲಿನ ಪುಡಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಡಿಪಿಒ ಜೈಲು ಪಾಲಾಗಿದ್ದು ಇದರಲ್ಲಿ ಜಿಲ್ಲಾಧಿಕಾರಿಯನ್ನೂ ಹೊಣೆಗಾರನನ್ನಾಗಿಸಬೇಕೆಂದು ಸದಸ್ಯ ಮಹಾಂತಗೌಡ ಪಟ್ಟು ಹಿಡಿದರು. ಜಿಲ್ಲೆಯ ಹಾಲಿನ ಪುಡಿ ಬಾಗಲಕೋಟೆವರೆಗೆ ಹೋಗಿ ಅಲ್ಲಿನ ಪೊಲೀಸರು ದಾಳಿ ಮಾಡುವವರೆಗೆ ಇಲ್ಲಿನ ಅಧಿಕಾರಿ ನಿದ್ದೆ ಮಾಡುತ್ತಿದ್ದರಾ? ಪ್ರಕರಣದಲ್ಲಿ ಇವರದ್ದೂ ಕೈವಾಡ ಇದೆ. ತನಿಖೆ ಮುಗಿವವರೆಗೆ ಇವರನ್ನು ರಜೆ ಮೇಲೆ ಕಳುಹಿಸಿ ಎಂದರು. ಆರೋಗ್ಯ ಇಲಾಖೆ ಅಧಿಕಾರಿ ರಾಜಕುಮಾರ ಯರಗಲ್ಲ ಅವರ ಕಾರ್ಯವೈಖರಿ ಸರಿಯಿಲ್ಲ. ಇವರ ಸೇವೆ ನಮಗೆ ಬೇಡವೆಂದು ಠರಾವು ಮಂಡಿಸಲು ಒತ್ತಾಯಿಸಿದರು. ಅಂತಿಮವಾಗಿ ರಾಜಕುಮಾರ ಯರಗಲ್ಲ ಕ್ಷಮೆ ಯಾಚಿಸಿದರು ಕೂಡ. ಹೀಗೆ ಹಲವು ಹಗರಣ, ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪಗಳ ಮಧ್ಯೆ ಅಂತಿಮ ಸಾಮಾನ್ಯ ಸಭೆ ಮುಕ್ತಾಯ ಕಂಡಿತು.
    ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸಿಇಒ ಗೋವಿಂದ ರೆಡ್ಡಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts