More

    ಮಹಾಮಾರಿಗೆ ನಲುಗಿದ ಪ್ರವಾಸೋದ್ಯಮ

    ಹೀರಾನಾಯ್ಕ ಟಿ.
    ವಿಜಯಪುರ : ಕರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸುತ್ತಿದ್ದು, ಇದರ ನಡುವೆ ಭಾರತೀಯ ಪುರತತ್ವ ಇಲಾಖೆ ಸ್ಮಾರಕಗಳ ದರ್ಶನಕ್ಕೆ ಬ್ರೇಕ್ ಹಾಕಿದ್ದು, ಇದರಿಂದ ಮತ್ತೆ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ.

    ಕೋವಿಡ್ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳಗೊಳ್ಳುತ್ತಿದ್ದು, ಇದರಿಂದಾಗಿ ಜನರಲ್ಲಿ ಆತಂಕ ಮೂಡಿಸಿದೆ. ಇನ್ನೂ ಪ್ರವಾಸಿಗರು ಸ್ಮಾರಕಗಳ ವೀಕ್ಷಣೆಗೆ ಆಗಮಿಸುವವರಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.

    ಪ್ರವಾಸಿಗರ ಸಂಖ್ಯೆ ಇಳಿಕೆ
    ವಿಜಯಪುರ ಜಿಲ್ಲೆಯ ಆಲಮಟ್ಟಿ, ಗೋಳಗುಮ್ಮಟ, ಇಬ್ರಾಹಿಂರೋಜಾಕ್ಕೆ ವಾರ್ಷಿಕ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಬರೋಬ್ಬರಿ ಹತ್ತು ಲಕ್ಷ. ಕಳೆದ 2019-20ರಲ್ಲಿ ಸಾಲಿನಲ್ಲಿ ಒಟ್ಟು 9.86 ಲಕ್ಷ ದೇಶದ ವಿವಿಧ ರಾಜ್ಯ, ಜಿಲ್ಲೆಗಳಿಂದ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ 3,278 ವಿದೇಶಿಗರು ಇಲ್ಲಿ ಭೇಟಿ ನೀಡಿರುವುದು ವಿಶೇಷ. ಆದರೆ, ಇದೀಗ ಕರೊನಾ ಭೀತಿಯಿಂದಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ.

    ಪ್ರಸಕ್ತ ವರ್ಷ ಜನವರಿಯಲ್ಲಿ 82,848, ಫೆಬ್ರವರಿಯಲ್ಲಿ 62,878, ಮಾರ್ಚ್‌ನಲ್ಲಿ 1,88,050 ಜನ ಪ್ರವಾಸಿಗರು ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ ಸ್ಮಾರಕ ವೀಕ್ಷಣೆ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಕರೊನಾ ಎರಡನೇ ಅಲೆ ಹೆಚ್ಚಾದ ಪರಿಣಾಮ ಭಾರತೀಯ ಪುರತತ್ವ ಇಲಾಖೆ ಸ್ಮಾರಕಗಳ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.

    ಆದಾಯಕ್ಕೂ ಕುತ್ತು ತಂದ ಕರೊನಾ
    ಕರೊನಾ ಭೀತಿಯಿಂದಾಗಿ ಪ್ರವಾಸೋದ್ಯಮದ ಆದಾಯಕ್ಕೂ ಕುತ್ತು ತಂದಂತಾಗಿದೆ. ಪ್ರವಾಸಿ ತಾಣಗಳಲ್ಲಿ ದೇಶಿ ಪ್ರವಾಸಿಗರಿಗೆ 25 ರೂ. ಪ್ರವೇಶ ಶುಲ್ಕ ಇದ್ದರೆ, ವಿದೇಶಿಗರಿಗೆ 300 ರೂ. ಇದೆ. ಕಳೆದ ಸಾಲಿನಲ್ಲಿ ವಿಜಯಪುರದ ಗೋಳಗುಮ್ಮಟ, ಇಬ್ರಾಹಿಂ ರೋಜಾಕ್ಕೆ 9.86 ಲಕ್ಷ ದೇಶಿ ಪ್ರವಾಸಿಗರು ಭೇಟಿ ನೀಡಿದ್ದು, ಅದರಿಂದ 2.46 ಕೋಟಿ ರೂ. ಆದಾಯ ಹರಿದು ಬಂದಿತ್ತು. ಅದರಲ್ಲಿ 69.83 ಲಕ್ಷ ರೂ. ವಿದೇಶಿ ಪ್ರವಾಸಿಗರಿಂದ ಆದಾಯ ಬಂದಿದೆ. ಆದರೆ ಪ್ರಸಕ್ತ ವರ್ಷವಿಡೀ ಕರೊನಾ ಹಿನ್ನೆಲೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡದೆ ಇರುವುದರಿಂದ ಬಹಳಷ್ಟು ನಷ್ಟವಾಗಿದೆ ಎನ್ನುತ್ತಿದ್ದಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

    ಮೇ 15ರ ವರೆಗೆ ಸಂಪೂರ್ಣ ಬಂದ್
    ಕರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ ಭೇಟಿಯನ್ನು ಮೇ 15ರ ವರೆಗೆ ಸಂಪೂರ್ಣ ಬಂದ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ವಿಶ್ವ ವಿಖ್ಯಾತ ಗೋಳಗುಮ್ಮಟ, ಇಬ್ರಾಹಿಂ ರೋಜಾ ಇನ್ನಿತರ ಪ್ರವಾಸಿ ತಾಣಗಳ, ಸ್ಮಾರಕಗಳ ವೀಕ್ಷಣೆಯನ್ನೂ ಬಂದ್ ಮಾಡಿ ಭಾರತೀಯ ಪುರತತ್ವ ಇಲಾಖೆಯ ಸ್ಮಾರಕಗಳ ನಿರ್ದೇಶಕ ಎನ್.ಕೆ. ಪಾಠಕ್ ಆದೇಶಿಸಿದ್ದಾರೆ.

    ಕರೊನಾ ಮಹಾಮಾರಿಯಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಇದರಿಂದಾಗಿ ಆದಾಯದಲ್ಲಿ ಗಣನೀಯವಾಗಿ ಇಳಿಕೆ ಆಗಿದೆ. ಭಾರತೀಯ ಪುರತತ್ವ ಇಲಾಖೆಯಿಂದ ಮೇ 15ರ ವರೆಗೆ ಸ್ಮಾರಕಗಳ ಬಂದ್‌ಗೆ ಆದೇಶಿಸಿದ್ದು, ಎಲ್ಲ ಕಡೆಗಳಲ್ಲಿ ಬಂದ್ ಮಾಡಲಾಗಿದೆ.
    ಮಲ್ಲಿಕಾರ್ಜುನ ಭಜಂತ್ರಿ ಸಹಾಯಕ ನಿರ್ದೇಶಕ
    ಪ್ರವಾಸೋದ್ಯಮ ಇಲಾಖೆ

    ಪ್ರವಾಸೋದ್ಯಮವನ್ನು ನೆಚ್ಚಿ ಬದುಕು ಸಾಗಿಸುತ್ತಿದ್ದ ಲಕ್ಷಾಂತರ ಕುಟುಂಬಗಳು ಉದ್ಯೋಗವಿಲ್ಲದೆ, ಖಾಲಿ ಕುಳಿತುಕೊಂಡಂತಾಗಿದೆ. ಪ್ರವಾಸಿಗರು ಬಂದರಷ್ಟೇ ನಮ್ಮ ಹೊಟ್ಟೆ ತುಂಬುತ್ತದೆ. ಇಲ್ಲ ಅಂದರೆ ತಣ್ಣೀರು ಬಟ್ಟೆಯೇ ಗತಿ. ಕರೊನಾದಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದ್ದು, ಕಳೆದ ಒಂದು ವರ್ಷದಿಂದ ಜೀವನ ನಡೆಸುವುದು ಕಷ್ಟವಾಗಿದೆ.
    ಶ್ರೀಮಂತಕಟ್ಟಿ, ಪ್ರವಾಸಿ ಮಾರ್ಗದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts