More

    ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಅನರ್ಹರು!; ಚಿಂತಾಮಣಿಯ ಮಿಂಡಿಗಲ್ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ

    ಚಿಂತಾಮಣಿ: ನಿರಂತರ ಪರಿಷ್ಕರಣೆ, ಪರಿಶೀಲನೆ ನಡುವೆಯೂ ಗ್ರಾಪಂ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರು ಸೇರ್ಪಡೆಯಾಗಿದೆ.

    ಬೆಂಗಳೂರು, ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತಿತರ ಕಡೆ ವಲಸೆ ಹೋಗಿ, ಕಾಯಂ ನಿವಾಸಿಗಳಾಗಿರುವ ಹಲವರ ಹೆಸರು ತಾಲೂಕಿನ ಮಿಂಡಿಗಲ್ ಗ್ರಾಪಂ ವ್ಯಾಪ್ತಿಯ ದಿಗವ ಮಿಂಡಿಗಲ್ ಮತ್ತು ಎಗವ ಮಿಂಡಿಗಲ್ ಗ್ರಾಮದ ಮತದಾರ ಪಟ್ಟಿಯಲ್ಲಿದೆ. ಎರಡೂ ಕಡೆ ಮತ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜತೆಗೆ ಮತದಾರ ಪಟ್ಟಿ ಸಮೇತ ತಾಲೂಕು ಆಡಳಿತಕ್ಕೆ ದೂರು ನೀಡಿ, ಅನರ್ಹರ ಹೆಸರು ತೆಗೆದು ಹಾಕಲು ಒತ್ತಾಯಿಸಿದ್ದಾರೆ.

    ಗೆಲುವು ಸಾಧಿಸಲು ಕೆಲವರು ಮತದಾರರ ಹೆಸರು ಸೇರಿಸಿದ್ದು ಸ್ಥಳೀಯವಾಗಿ ಮತ್ತು ಬೇರೆ ವ್ಯಾಪ್ತಿಯ ಪ್ರದೇಶದಲ್ಲೂ ಮತ ಚಲಾಯಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದುದು. ಈ ಬಗ್ಗೆ ಅರಿವಿದ್ದರೂ ಪರಿಷ್ಕರಣೆ ಸಂದರ್ಭದಲ್ಲಿ ಅನರ್ಹ ಹೆಸರನ್ನು ತೆಗೆದಿಲ್ಲ. ವಾಸ್ತವ್ಯವೇ ಬೇರೆ ಕಡೆ, ಮತ ಚಲಾವಣೆಯೇ ಬೇರೆ ಕಡೆ ಎನ್ನುವಂತಾಗಿದ್ದು, ಇದಕ್ಕೆ ಸುಬ್ಬರಾಯಪಾಳ್ಯ ಒಂದು ನಿದರ್ಶನ ಎನ್ನುತ್ತಾರೆ ಸ್ಥಳೀಯರು.

    ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಅನರ್ಹರ ಹೆಸರುಗಳನ್ನು ಸೇರಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ತಹಸೀಲ್ದಾರ್‌ಗೆ ದೂರು ನೀಡಲಾಗಿದೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಬಾಹಿರ ಮತದಾನ ಮಾಡುವ ತಪ್ಪಿತಸ್ಥರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆ.
    ಶ್ರೀನಿವಾಸ್, ಮಿಂಡಿಗಲ್ ಗ್ರಾಮಸ್ಥ,

    ಕೇವಲ ಮಿಂಡಿಗಲ್ ಗ್ರಾಪಂ ವ್ಯಾಪ್ತಿಯಲ್ಲಿಯೇ 150 ರಿಂದ 200 ಮತದಾರರು ಮಿಂಡಿಗಲ್ ಸೇರಿ ಇತರೆಡೆಯೂ ಮತದಾನದ ಹಕ್ಕು ಹೊಂದಿದ್ದಾರೆ. ಹಾಗೆಯೇ ಬೇರೆ ಗ್ರಾಪಂಗಳಲ್ಲೂ ಅನರ್ಹರ ಸೇರ್ಪಡೆ ಸಾಧ್ಯತೆಯಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಮತದಾರರ ಪಟ್ಟಿಗೆ ಅನರ್ಹರ ಹೆಸರು ಸೇರ್ಪಡೆ ವಿಚಾರವಾಗಿ ದೂರು ಸ್ವೀಕರಿಸಲಾಗಿದೆ. ಈಗಾಗಲೇ ಪಟ್ಟಿಯ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಅಕ್ರಮವಾಗಿ ಹೆಸರು ದಾಖಲಾಗಿದ್ದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
    ಡಿ.ಹನುಮಂತರಾಯಪ್ಪ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts