More

    ವಾಸಪ್ಪ ಗೌಡ ಮತ್ತೆ ರಾಜೀನಾಮೆ

    ಹೊಸನಗರ: ಹೊಸನಗರ ತಾಲೂಕು ಪಂಚಾಯಿತಿ ಅಧ್ಯಕ್ಷ ವಾಸಪ್ಪ ಗೌಡ ಅವರ ರಾಜೀನಾಮೆ ಪ್ರಹಸನ ಮುಂದುವರೆದಿದೆ. ಒಮ್ಮೆ ರಾಜೀನಾಮೆ ಕೊಟ್ಟು ವಾಪಸ್ ಪಡೆದಿದ್ದ ಅವರು, ಆರು ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಗುರುವಾರ ನೋಟಿಸ್ ನೀಡುತ್ತಿದ್ದಂತೆ ಶುಕ್ರವಾರ ಮತ್ತೆ ಜಿಲ್ಲಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

    ರಾಜೀನಾಮೆ ನೀಡಿದಕ್ಕೆ ಕಾರಣ ಹಾಗೂ ವಾಪಸ್ ಪಡೆದಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದ ವಾಸಪ್ಪ ಗೌಡ ಅವರನ್ನು ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ ತರಾಟೆ ತೆಗೆದುಕೊಂಡು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಗೌರವ ಎಂದು ಎಚ್ಚರಿಕೆ ನೀಡಿದ್ದರು. ಈ ಬೆಳವಣಿಗೆ ಮರುದಿನವೇ ಆರು ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆಯ ನಿರ್ಧಾರ ಮಾಡಿ ಸಭೆ ಕರೆಯಲು ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದ್ದಾರೆ.

    ತಾಪಂ ಉಪಾಧ್ಯಕ್ಷೆ ಸುಶೀಲಮ್ಮ ನೇತೃತ್ವದಲ್ಲಿ ಕಾಂಗ್ರೆಸ್​ನ 5 ಜನ ಸದಸ್ಯರು ಮತ್ತು ಪಕ್ಷೇತರ ಸದಸ್ಯ ವೀರೇಶ್ ಆಲವಳ್ಳಿ ಅವರು ಜಿಲ್ಲಾಧಿಕಾರಿ ಭೇಟಿ ಮಾಡಿ ವಾಸಪ್ಪ ಗೌಡ ವಿರುದ್ಧ ಅವಿಶ್ವಾಸ ತರುವ ನಿರ್ಧಾರವನ್ನು ತಿಳಿಸಿದ್ದಾರೆ.

    2016 ರ ಜನವರಿಯಲ್ಲಿ ನಡೆದ ತಾಪಂ ಚುನಾವಣೆಯಲ್ಲಿ ಬಿಜೆಪಿ 6 ಕಾಂಗ್ರೆಸ್ 5 ಸ್ಥಾನಗಳನ್ನು ಗಳಿಸಿದ್ದು, ಒಬ್ಬರು ( ವೀರೇಶ್ ಆಲವಳ್ಳಿ) ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಆಗ ಅಧಿಕ ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರ ಹಿಡಿಯಬಹುದು ಎಂದು ಭಾವಿಸಲಾಗಿತ್ತು. ಆದರೆ ಅಧ್ಯಕ್ಷ ಚುನಾವಣೆ ವೇಳೆ ನಡೆದ ರಾಜಕೀಯ ನಾಟಕದಲ್ಲಿ ಎಲ್ಲರ ನಿರೀಕ್ಷೆ ಹುಸಿಯಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದ ವಾಸಪ್ಪಗೌಡ ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

    ಈ ಬೆಳವಣಿಗೆಗೆ ಕಾರಣವಾಗಿದ್ದು ಇಬ್ಬರು ಬಿಜೆಪಿ ಸದಸ್ಯರ ಅನರ್ಹತೆಯ ಪ್ರಶ್ನೆ. ರುಕ್ಮಿಣಿರಾಜು ಹಾಗೂ ಅಶ್ವಿನಿ ಪಾಟೀಲ್ ಅವರು ಕ್ರಮವಾಗಿ ಎಂ.ಗುಡ್ಡೆಕೊಪ್ಪ ಹಾಗೂ ಮುಡುಗೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ತಾಪಂಗೆ ಆಯ್ಕೆಯಾದಾಕ್ಷಣ ಗ್ರಾಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿತ್ತು. ತಾಂತ್ರಿಕ ಕಾರಣಗಳಿಂದ ಸಕಾಲದಲ್ಲಿ ರಾಜೀನಾಮೆ ನೀಡದಿರುವುದರಿಂದ ತಾಪಂ ಅಧ್ಯಕ್ಷ ಚುನಾವಣೆಯಲ್ಲಿ ಮತದಾನದ ಹಕ್ಕು ಕಳೆದುಕೊಂಡಿದ್ದರು. ಇದರ ಪರಿಣಾಮ ಬಿಜೆಪಿಯ ಮತ ಸಂಖ್ಯೆ 4 ಕ್ಕೆ ಕುಸಿದಿತ್ತು. ಆದರಲ್ಲಿಯೂ ವಾಸಪ್ಪಗೌಡ ಕಾಂಗ್ರೆಸ್​ನೊಂದಿಗೆ ಒಳ ಒಪ್ಪಂದ ಮಾಡಿಕೊಂಡ ಕಾರಣ ಕಾಂಗ್ರೆಸ್ 6 ಮತ ಸದಸ್ಯ ಬಲ ಹೊಂದಿ ಅಧ್ಯಕ್ಷರಾಗಿ ವಾಸಪ್ಪಗೌಡ ಮತ್ತು ಉಪಾಧ್ಯಕ್ಷರಾಗಿ ಸುಶೀಲಮ್ಮ ಆಯ್ಕೆಯಾಗಿದ್ದರು.

    ಚಂದ್ರಮೌಳಿಗೆ ತಪ್ಪಿದ ಅವಕಾಶ: ಕಾಂಗ್ರೆಸ್ ಸದಸ್ಯ ಬಿ.ಜಿ. ಚಂದ್ರಮೌಳಿ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಹೊಸನಗರ ತಾಪಂನಲ್ಲಿ ಅಧಿಕಾರ ಹಿಡಿಯುವ ಬಯಕೆ ಹೊಂದಿದ್ದ ಕೆಲ ಕಾಂಗ್ರೆಸ್ ಮುಖಂಡರು ಬಿಜೆಪಿ ಸದಸ್ಯ ವಾಸಪ್ಪಗೌಡ ಅವರೊಂದಿಗೆ ಚರ್ಚೆ ಮಾಡಿ ಮೊದಲ ಎರಡೂವರೆ ವರ್ಷ ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಈ ಅವಧಿ ಮುಗಿದ ನಂತರ ರಾಜೀನಾಮೆ ನೀಡಿ ಚಂದ್ರಮೌಳಿ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದರು.

    ಒಪ್ಪಂದದ ಪ್ರಕಾರ ಎರಡೂವರೆ ವರ್ಷ ಅವಧಿ ಮುಗಿದರೂ ವಾಸಪ್ಪಗೌಡ ರಾಜೀನಾಮೆ ಕೊಟ್ಟಿರಲಿಲ್ಲ. ಅಧಿಕಾರ ಬಿಟ್ಟುಕೊಡುವ ಒಪ್ಪಂದ ನೆನಪು ಮಾಡಿದರೆ ಸಬೂಬು ಹೇಳುತ್ತಲೇ ಕಾಲ ತಳ್ಳಿದ್ದರು ಎನ್ನಲಾಗಿದೆ. ಈಗ ತಾಪಂ ಅವಧಿ ಒಂದು ವರ್ಷ ಮಾತ್ರ ಬಾಕಿ ಇದ್ದು, ಈ ಸಮಯದಲ್ಲಿ ಅವರು ರಾಜೀನಾಮೆ ಕೊಟ್ಟಿದ್ದರು. ಈ ರಾಜೀನಾಮೆ ವಾಪಸ್ ಪಡೆದದ್ದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತ್ತು.ಹೀಗಾಗಿ ಅವಿಶ್ವಾಸ ಗೊತ್ತುವಳಿ ಮೂಲಕ ಅವರನ್ನು ಪದಚ್ಯುತಗೊಳಿಸಿ ಚಂದ್ರಮೌಳಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗೆ ಸಭೆ ಕರೆಯಲು ನೋಟಿಸ್ ನೀಡಿದ್ದಾರೆ. ಪಕ್ಷೇತರವಾಗಿ ಗೆದ್ದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ವೀರೇಶ್ ಆಲವಳ್ಳಿ ಕೂಡ ಈಗ ಕಾಂಗ್ರೆಸ್ ಸದಸ್ಯರಿಗೆ ಸಾಥ್ ನೀಡಿದ್ದಾರೆ.

    ಬಿಜೆಪಿ ನಿಲುವೇನು: ಬಿಜೆಪಿಯಿಂದ ಆಯ್ಕೆಯಾಗಿ ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ವಾಸಪ್ಪ ಗೌಡ ಅವರ ಬಗ್ಗೆ ಬಿಜೆಪಿ ನಾಯಕರಿಗೆ ಸಿಟ್ಟಿದೆ. ಹೀಗಾಗಿ ಈ ರಾಜಕೀಯ ಬೆಳವಣಿಗೆಯಲ್ಲಿ ಅವರ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ. ಈ ರಾಜಕೀಯ ಬೆಳವಣಿಗೆ ಬಗ್ಗೆ ಬಿಜೆಪಿ ತಾಪಂ ಸದಸ್ಯರಾಗಲಿ ಪಕ್ಷದ ಮುಖಂಡರಾಗಲಿ ಚಕಾರ ಎತ್ತಿಲ್ಲ.

    ನೋಟಿಸ್​ಗೆ ಸಹಿ ಮಾಡಿದವರು: ಉಪಾಧ್ಯಕ್ಷೆ ಸುಶೀಲಮ್ಮ, ಏರಗಿ ಉಮೇಶ್, ಬಿ.ಜಿ. ಚಂದ್ರಮೌಳಿ, ಶಕುಂತಲಾ, ಚಂದ್ರೇಶ್, ವೀರೇಶ್ ಆಲವಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts