More

    ವಾರಾಂತ್ಯದ ಕರ್ಯ್ೂಗೆ ಜನಬೆಂಬಲ, ಜಿಲ್ಲೆಯಲ್ಲಿ ಲಾಕ್‌ಡೌನ್ ಯಶಸ್ವಿ, ಅನಗತ್ಯ ಓಡಾಟಕ್ಕೆ ಖಾಕಿ ಬ್ರೇಕ್

    ಬೆಂಗಳೂರು ಗ್ರಾಮಾಂತರ: ವಾರಾಂತ್ಯದ ಕರ್ಯ್ೂಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶನಿವಾರ ಮುಂಜಾನೆ ಅಗತ್ಯ ವಸ್ತುಗಳ ಖರೀದಿಗೆ ಅಲ್ಲಲ್ಲಿ ಜನರ ಗುಂಪು ಕಂಡುಬಂದರೂ ಬೆಳಗ್ಗೆ 9 ಗಂಟೆ ಬಳಿಕ ಇಡೀ ಜಿಲ್ಲೆ ಸ್ಥಬ್ಧವಾಗುವ ಮೂಲಕ ಸರ್ಕಾರದ ಆದೇಶಕ್ಕೆ ಜನಬೆಂಬಲ ವ್ಯಕ್ತವಾಯಿತು.

    ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಮತ್ತಿತರ ಅಧಿಕಾರಿಗಳ ತಂಡ ಜಿಲ್ಲೆಯ ಹಲವು ಕಡೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿತು. ಅಯಕಟ್ಟಿನ ಜಾಗಗಳಲ್ಲಿ ಪೊಲೀಸ್ ಪರಹೆ ಏರ್ಪಡಿಸಿದ್ದ ಪರಿಣಾಮ ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಬ್ರೇಕ್ ಬಿದ್ದಿತ್ತು. ಮಾಸ್ಕ್ ಧರಿಸದ ಹಾಗೂ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿದ ದೃಶ್ಯಗಳು ಕಂಡುಬಂದವು. ಆಂಬುಲೆನ್ಸ್‌ಗಳು, ಬೆರಳೆಣಿಗೆ ಸರಕು ಸಾಗಣೆ ವಾಹನಗಳು ಹಾಗೂ ತುರ್ತು ಕಾರ್ಯ ನಿಮಿತ್ತ ಸಂಚರಿಸಿದ ಕೆಲವಷ್ಟೆ ವಾಹನಗಳು ಹೊರತುಪಡಿಸಿ ಜಿಲ್ಲೆಯಾದ್ಯಂತ ವಾಹನ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನವಿರುವ ಬೀರಸಂದ್ರ ಮತ್ತು ರಾಷ್ಟ್ರೀಯ ಹೆದ್ದಾರಿ 648 ಹಾದು ಹೋಗಿರುವ ಚಪ್ಪರಕಲ್ಲುಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜಿಲ್ಲಾಡಳಿತ ಭವನ ಕೂಡ ಜನರಿಲ್ಲದೆ ಭಣಗುಟ್ಟಿತು.

    ನೆಲಮಂಗಲ ಸಂಪೂರ್ಣ ಸ್ತಬ್ಧ: ನೆಲಮಂಗಲ ಸಂಪೂರ್ಣ ಸ್ತಬ್ಧವಾಗಿತ್ತು, ಶುಕ್ರವಾರ ರಾತ್ರಿ 9 ರಿಂದಲೇ ಅೋಷಿತ ಬಂದ್ ವಾತಾವರಣ ಕಂಡುಬಂತು. ಶನಿವಾರ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗಾಗಿ ಅವಕಾಶ ಮಾಡಿಕೊಡಲಾಗಿತ್ತು. 10 ಗಂಟೆಯ ನಂತರ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಿ, ಅಂಗಡಿಗಳನ್ನೂ ಮುಚ್ಚಿಸಿದರು. ನಗರದ ಪೇಟೆಬೀದಿ ಸೇರಿ ಮುಖ್ಯರಸ್ತೆಯಲ್ಲಿನ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಸಂಪೂರ್ಣ ಮುಚ್ಚಿದ್ದವು. ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 2 ರಾಷ್ಟ್ರೀಯ ಹೆದ್ದಾರಿಗಳು ವಾಹನ ಸಂಚಾರವಿಲ್ಲದೆ ಬಿಕೋ ಎಂದವು. ಸದಾ ಗಿಜಗುಡುತ್ತಿದ್ದ ಬಸ್ ನಿಲ್ದಾಣ ಪ್ರಯಾಣಿಕರಲ್ಲಿದೇ ಭಣಗುಡುತ್ತಿತ್ತು. ಪೆಟ್ರೋಲ್ ಬಂಕ್, ಔಷಧ ಅಂಗಡಿಗಳು, ಖಾಸಗಿ ಆಸ್ಪತ್ರೆಗಳು, ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಿದವು. ಹೊರರೋಗಿಗಳ ಸಂಖ್ಯೆ ಇಳಿಕೆಯಾಗಿತ್ತು.

    ಮದುವೆ ಇನ್ನಿತರ ಸಮಾರಂಭಗಳಿಗೆ 50 ಮಂದಿಗೆ ಮಾತ್ರ ಅವಕಾಶ ನೀಡಿರುವುದು ಒಂದೆಡೆಯಾದರೆ, ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ನಗರದ ವಿವಿಧ ಕಲ್ಯಾಣಮಂಟಪಗಳಲ್ಲಿ ನಿಗದಿಯಾಗಿದ್ದ ಕೆಲ ವಿವಾಹ ಕಾರ್ಯಗಳು ರದ್ದುಗೊಂಡವು. ಶನಿವಾರ ನಿಶ್ಚಯವಾಗಿದ್ದ ವಿವಾಹ, ಆರತಕ್ಷತೆ ಕೆಲವೇ ಕುಟುಂಬಸ್ಥರಿಗೆ ಮಾತ್ರ ಸೀಮಿತವಾಗಿದ್ದವು.

    ದೊಡ್ಡಬಳ್ಳಾಪುರ ಲಾಕ್: ದೊಡ್ಡಬಳ್ಳಾಪುರ ಶನಿವಾರ ಸಂಪೂರ್ಣ ಲಾಕ್ ಆಗಿತ್ತು, ಕೆಲವೆಡೆಗಳಲ್ಲಿ ತೆರೆಯಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಾಗಿಲು ಮುಚ್ಚಿಸಿದರು. ನಗರದ ಬಸ್ ನಿಲ್ದಾಣ, ಮಾರುಕಟ್ಟೆ, ತಾಲೂಕು ಕಚೇರಿ ವೃತ್ತ, ಬಸ್ ನಿಲ್ದಾಣ, ಬಸವ ಭವನ ವೃತ್ತ, ಟಿಬಿ ಸರ್ಕಲ್, ಡಿ ಕಾಸ್‌ಗಳಲ್ಲಿ ಜನರಿಲ್ಲದೆ ಖಾಲಿ ಖಾಲಿಯಾಗಿತ್ತು.

    ವಿಜಯಪುರದಲ್ಲಿ ಲಾಠಿ ರುಚಿ: ವಿಜಯಪುರದ ಅಂಕತಟ್ಟಿ ನಂಜುಂಡಪ್ಪ ವೃತ್ತ, ಶಿಡ್ಲಘಟ್ಟ ಡಿವೀಯೇಷನ್ ರಸ್ತೆ, ಬಸ್ ನಿಲ್ದಾಣಗಳಲ್ಲಿ ಸಬ್‌ಇನ್ಸ್‌ಪೆಕ್ಟರ್ ನಂದೀಶ್ ಅನವಶ್ಯಕವಾಗಿ ಸಂಚರಿಸುತ್ತಿದ್ದ ಜನರ ಮೇಲೆ ಲಾಠಿ ಬೀಸಿ ಲಾಕ್‌ಡೌನ್ ಪರಿಪಾಲಿಸುವಂತೆ ಎಚ್ಚರಿಕೆ ನೀಡಿದರು.

    ಹೊಸಕೋಟೆಯಲ್ಲಿ ನಿಯಮ ಉಲ್ಲಂಘನೆ ವಿರುದ್ಧ ಕೇಸ್: ಹೊಸಕೋಟೆಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಸಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದರು. ಡಿವೈಎಸ್‌ಪಿ ಉಮಾಶಂಕರ್ ನೇತೃತ್ವದ ಕಾರ್ಯಾಚರಣೆಯಲ್ಲಿ ತಾಲೂಕಿನಲ್ಲಿ ನಿಯಮ ಪಾಲನೆ ಉಲ್ಲಂಘನೆ ವಿರುದ್ಧ ಶನಿವಾರ 11 ಪ್ರಕರಣ ದಾಖಲಾಗಿವೆ. ತಾಲೂಕಿನಲ್ಲಿ ಲಾಕ್‌ಡೌನ್ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ ಚನ್ನಣ್ಣನವರ್ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೈಗಾರಿಕಾ ಪ್ರದೇಶಗಳು ಬಿಕೋ: ಆನೇಕಲ್ ಪಟ್ಟಣ, ಅತ್ತಿಬೆಲೆ, ಸರ್ಜಾಪುರ, ಚಂದಾಪುರ ,ಜಿಗಣಿ, ಬನ್ನೇರುಘಟ್ಟ, ಚಂದಾಪುರ ಸೇರಿ ಬಹುತೇಕ ಕೈಗಾರಿಕಾ ಪ್ರದೇಶಗಳು ಬಿಕೋ ಎಂದವು. ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ತಡೆದು ಪೊಲೀಸರು ದಂಡ ವಿಧಿಸಿದರು. ವೃತ್ತನಿರೀಕ್ಷಕ ಕೃಷ್ಣ ಲಮಾಣಿ ಹಾಗೂ ಪಿಎಸ್‌ಐ ಮಧುಸೂದನ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

    ನಂದಗುಡಿಯಲ್ಲಿ ಸ್ವಯಂಪ್ರೇರಿತ ಬಂದ್: ನಂದಗುಡಿ ಹೋಬಳಿಯಲ್ಲಿ ಶನಿವಾರ ಯಾವುದೇ ಅಂಗಡಿಮುಂಗ್ಗಟ್ಟು ತೆರೆಯದೆ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಲಾಯಿತು. ಆಸ್ಪತ್ರೆ, ಮೆಡಿಕಲ್‌ಶಾಪ್‌ಗಳನ್ನು ಹೊರತು ಪಡಿಸಿ ಎಲ್ಲ ವರ್ತಕರು ಅಂಗಡಿಗಳನ್ನು ಮುಚ್ಚುವ ಮೂಲಕ ಸ್ವಯಂಪ್ರೇರಿತವಾಗಿ ಲಾಕ್‌ಡೌನ್‌ಗೆ ಬೆಂಬಲ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts