More

    ವಸಾಹತು ಕಾಲದ ಇತಿಹಾಸವನ್ನು ಮರುರಚಿಸುವ ಅವಶ್ಯಕತೆಯಿದೆ

    ಚಿಂತಾಮಣಿ: ವಸಾಹತು ಕಾಲದ ಇತಿಹಾಸವನ್ನು ಮರುರಚಿಸುವ ಅವಶ್ಯಕತೆಯಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಪ್ರೊ.ಎಂ.ವಿ.ಉಷಾದೇವಿ ಪ್ರತಿಪಾದಿಸಿದರು.

    ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ವಿಭಾಗ ಶನಿವಾರ ಆಯೋಜಿಸಿದ್ದ ಇತಿಹಾಸ ಸಂವಾದದಲ್ಲಿ ಮಾತನಾಡಿದ ಅವರು, ವಸಾಹತು ಕಾಲದಲ್ಲಿ ಪಾಶ್ಚಿಮಾತ್ಯರು ತಮಗೆ ಬೇಕಾದ ಹಾಗೆ ಭಾರತದ ಚರಿತ್ರೆ ಬರೆದಿದ್ದಾರೆ. ಇಲ್ಲಿನ ಸಂಪತ್ತು ಲೂಟಿ ಮಾಡಲು ನೈಜ ಇತಿಹಾಸವನ್ನೇ ಮರೆಮಾಚಿ ತಮಗೆ ಅನುಕೂಲವಾಗುವಂತೆ ತಿರುಚಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಭಾರತೀಯರು ಎಂದರೆ ಹಾವಾಡಿಗರು, ಬುಡಕಟ್ಟು ಜನರು, ಸಂಸ್ಕೃತಿ ಇಲ್ಲದವರು, ಅಜ್ಞಾನಿಗಳಾಗಿದ್ದರು. ಭಾರತೀಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಶೋಷಣೆ ಮಾಡುವುದು ಅವರ ಉದ್ದೇಶದಾಗಿತ್ತು ಎಂದು ಅಭಿಪ್ರಾಯಪಟ್ಟ ಅವರು, ತಮ್ಮ ಆಲೋಚನೆಗಳು ಮತ್ತು ತಮ್ಮ ಆಡಳಿತವೇ ಶ್ರೇಷ್ಠ ಎಂಬ ಭಾವನೆ ಬಿತ್ತುವ ರೀತಿಯಲ್ಲಿ ಭಾರತದ ಇತಿಹಾಸ ರಚಿಸಿದ್ದಾರೆ ಎಂದು ವಿವರಿಸಿದರು.

    ಸಾಮಾಜಿಕ ವಿಜ್ಞಾನಗಳಲ್ಲಿ ವಸ್ತುನಿಷ್ಠ ಇತಿಹಾಸ ರಚನೆ ಆಗಬೇಕಿದೆ. ಕೇವಲ ಕೆಲ ವರ್ಗಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವ ಇತಿಹಾಸ ಪರಿಪೂರ್ಣವಾದುದಲ್ಲ. ವಿದ್ಯಾರ್ಥಿನಿಯರು ಸ್ನಾತಕೋತ್ತರ ವ್ಯಾಸಂಗದ ಅವಧಿಯಲ್ಲಿ ಈ ಕುರಿತು ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಬೆಂಗಳೂರು ಉತ್ತರ ವಿವಿ ಶಿಕ್ಷಣ ಕಾಲೇಜು ಪ್ರಾಧ್ಯಾಪಕ ಡಾ.ಎನ್.ಲೋಕನಾಥ್ ಸಲಹೆ ನೀಡಿದರು.

    ಪ್ರಾಂಶುಪಾಲ ಪ್ರೊ.ಕೆ.ಆರ್.ಶಿವಶಂಕರ್ ಪ್ರಸಾದ್, ಇತಿಹಾಸ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಎಂ.ಎನ್. ರಘು, ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಸಣ್ಣೀರಯ್ಯ, ಪ್ರಾಧ್ಯಾಪಕರಾದ ಪ್ರೊ. ಆರ್.ಶ್ರೀದೇವಿ, ಪ್ರೊ.ಮುನಿಕೃಷ್ಣಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts